ಸಾರಾಂಶ
ಬೀದರ್ ಹಾಗೂ ಶಿವಮೊಗ್ಗದಲ್ಲಿ ಜನಿವಾರ ಧಾರಿ ವಿದ್ಯಾರ್ಥಿಗಳಿಗೆ ಸಿಇಟಿ ಬರೆಯಲು ಅಡ್ಡಿ ಮಾಡಿದ ಪ್ರಸಂಗಗಳು ನಡೆದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ. ಈ ಸಂಬಂಧ ಸಾಗರ ಠಾಣೆಗೆ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ.
ಸಾಗರ : ಬೀದರ್ ಹಾಗೂ ಶಿವಮೊಗ್ಗದಲ್ಲಿ ಜನಿವಾರ ಧಾರಿ ವಿದ್ಯಾರ್ಥಿಗಳಿಗೆ ಸಿಇಟಿ ಬರೆಯಲು ಅಡ್ಡಿ ಮಾಡಿದ ಪ್ರಸಂಗಗಳು ನಡೆದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ. ಈ ಸಂಬಂಧ ಸಾಗರ ಠಾಣೆಗೆ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ.
ಸಾಗರ ತಾಲೂಕಿನ ಹಳೆಇಕ್ಕೇರಿ ಗ್ರಾಮದ ಶ್ರೀನಿವಾಸ್ ಎಂಬುವವರ ಪುತ್ರ ಪಾರ್ಥ ಎಸ್. ರಾವ್, ಏ.16ರ ಬುಧವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ. ಆಗ ಘಟನೆ ನಡೆದಿದೆ ಎಂದು ಗೊತ್ತಾಗಿದೆ.
‘ಪರೀಕ್ಷೆಗೆ ಪಾರ್ಥ ಹೋದ ಸಂದರ್ಭದಲ್ಲಿ ಪರೀಕ್ಷಾ ಕೊಠಡಿ ಹೊರಗೆ ಭದ್ರತೆಗಿದ್ದ ಪೊಲೀಸರು ತಪಾಸಣೆ ಮಾಡುವಾಗ ಜನಿವಾರ ಇರುವುದನ್ನು ಗಮನಿಸಿ ‘ನೀನು ಬ್ರಾಹ್ಮಣನೆ?‘ ಎಂದು ಪ್ರಶ್ನಿಸಿದರು. ‘ಪರೀಕ್ಷೆ ಬರೆಯಬೇಕೆಂದರೆ ಈ ಜನಿವಾರವನ್ನು ತೆಗೆಯಬೇಕು‘ ಎಂದು ಹೇಳಿದರು. ನಂತರ ವಿದ್ಯಾರ್ಥಿ ಆಕ್ಷೇಪಿಸಿದರೂ ಜನಿವಾರವನ್ನು ಕತ್ತರಿಸಿ ಪರೀಕ್ಷಾ ಕೊಠಡಿ ಒಳಗೆ ಕಳಿಸಿದರು. ಅಸಮಾಧಾನಗೊಂಡ ವಿದ್ಯಾರ್ಥಿ ಬೇಸರದಿಂದಲೇ ಅನಿವಾರ್ಯವಾಗಿ ಪರೀಕ್ಷೆ ಬರೆದು ಬಂದ. ಮನೆಯಲ್ಲಿ ಮಾತ್ರವೇ ವಿಷಯ ಹೇಳಿಕೊಂಡ’ ಎಂದು ಪೊಲೀಸರಿಗೆ ದೂರಲಾಗಿದೆ.
ಬೀದರ್, ಶಿವಮೊಗ್ಗ ಪ್ರಕರಣದ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತಂದೆ ಶ್ರೀನಿವಾಸ್ ಅವರು ಶನಿವಾರ ಸಂಜೆ ತಮ್ಮ ಮಗನ ಜನಿವಾರ ಕತ್ತರಿಸಲಾಗಿದೆ ಎಂದು ಎಲ್ಲರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಈ ಸಂಬಂಧ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಕಾರಣರಾಗಿರುವ ಸೆಕ್ಯೂರಿಟಿ, ಪರೀಕ್ಷಾ ಮೇಲ್ವಿಚಾರಕರು, ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.