ಸಾರಾಂಶ
ದೇವಸ್ಥಾನದ ಅರ್ಚಕರಿಗೆ ನೀಡಿದ್ದ ಸರ್ಕಾರಿ ಚೆಕ್, ಅಮಾನ್ಯ (ಬೌನ್ಸ್) ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೊಳೆಹೊನ್ನೂರು: ದೇವಸ್ಥಾನದ ಅರ್ಚಕರಿಗೆ ನೀಡಿದ್ದ ಸರ್ಕಾರಿ ಚೆಕ್, ಅಮಾನ್ಯ (ಬೌನ್ಸ್) ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದಲ್ಲಿರುವ ಮುಜರಾಯಿ ಇಲಾಖೆಗೆ ಒಳಪಟ್ಟ ಪಾರ್ವತಿ ಬ್ರಹ್ಮೇಶ್ವರದ ದೇಗುಲದ ಅರ್ಚಕ ಕೆ.ಆರ್.ಆನಂದ್ ಅವರ ಮೂರು ತಿಂಗಳ ವೇತನ ಹಾಗೂ ಇತರೆ ನಿರ್ವಹಣೆ ವೆಚ್ಚ ಸೇರಿ ಒಟ್ಟು ₹35,600 ಮೌಲ್ಯದ ಚೆಕ್ ಅನ್ನು ಜು.1ರ ದಿನಾಂಕ ನಮೂದಿಸಿ ಶಿವಮೊಗ್ಗ ತಹಸೀಲ್ದಾರ್ ಸೀಲು ಸಹಿ ಮಾಡಿ ಕೊಟ್ಟಿದ್ದರು.
ಇತ್ತೀಚೆಗೆ ನಗದೀಕರಣಕ್ಕೆ ಚೆಕ್ ಅನ್ನು ಕೂಡ್ಲಿ ಕರ್ನಾಟಕ ಬ್ಯಾಂಕಿಗೆ ನೀಡಲಾಗಿತ್ತು. ಆದರೆ ಚೆಕ್ ನೀಡಲಾಗಿದ್ದ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೆ ಇರುವುದರಿಂದ ಅಮಾನ್ಯಗೊಂಡಿದೆ ಎಂದು ಬ್ಯಾಂಕಿನಿಂದ ಹಿಂಬರಹ ನೀಡಿ ಚೆಕ್ ವಾಪಾಸ್ಸು ನೀಡಿದ್ದಾರೆ.
ಜೀವನ ನಿರ್ವಹಣೆ ಮಾಡುವುದು ಹಾಗೂ ಕರ್ತವ್ಯ ನಿರ್ವಹಿಸುವುದು ಕಷ್ಟಕರ ಆಗಿದ್ದು, ಮುಂದಿನ ದಿನಗಳಲ್ಲಿ ಇದು ಸರಿಯಾಗದೆ ಇದ್ದಲ್ಲಿ ಕರ್ತವ್ಯದಿಂದ ಮುಕ್ತಿ ಪಡೆಯುವುದಾಗಿ ಅರ್ಚಕ ಕೆ.ಆರ್.ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.