40 ಕಿಮೀ ಬರಿಗಾಲಲ್ಲಿ ಕಪಿಲಾಜಲ ತಂದು ಶಿವರಾತ್ರಿ ಆಚರಣೆ

| Published : Mar 09 2024, 01:33 AM IST

ಸಾರಾಂಶ

ಶಿವರಾತ್ರಿ ಎಲ್ಲೆಡೆ ಶಿವನಿಗೆ ನಾನಾ ರೀತಿಯ ಅಭಿಷೇಕ, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಅಂತೆಯೇ 40 ಕಿಲೋ ಮೀಟರ್ ದೂರದಿಂದ ಬರಿಗಾಲಲ್ಲಿ ನಡಯುವ ಮೂಲಕ ಕಪಿಲಾ ಜಲವನ್ನು ಹೊತ್ತು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸುವ ಪದ್ಧತಿ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರಶಿವರಾತ್ರಿ ಎಲ್ಲೆಡೆ ಶಿವನಿಗೆ ನಾನಾ ರೀತಿಯ ಅಭಿಷೇಕ, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಅಂತೆಯೇ 40 ಕಿಲೋ ಮೀಟರ್ ದೂರದಿಂದ ಬರಿಗಾಲಲ್ಲಿ ನಡಯುವ ಮೂಲಕ ಕಪಿಲಾ ಜಲವನ್ನು ಹೊತ್ತು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸುವ ಪದ್ಧತಿ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ.

ಈ ಸಂಪ್ರದಾಯವನ್ನು ಈಗಲು ಮುಂದುವರಿಸಿಕೊಂಡು ಬರಲಾಗುತ್ತಿದ್ದು, ಹೀಗೆ ಪ್ರತಿ ವರ್ಷ ಮಾಡಿದರೆ ಗ್ರಾಮಕ್ಕೆ ಶ್ರೇಯಸ್ಸು ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಹೆಗ್ಗೋಠಾರ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮೇಶ್ವರ ದೇವಾಲಯವಿದೆ. ಪುರಾತನ ಕಾಲದ ಶಿವಲಿಂಗವಿದೆ. ಪ್ರತಿವರ್ಷ ದೂರದ ಕಪಿಲಾ ನದಿಯಿಂದ ಕಪಿಲಾ ಜಲ ತಂದು ಅಭಿಷೇಕ ಮಾಡಿ ಶಿವರಾತ್ರಿ ಆಚರಿಸುವುದು ವಾಡಿಕೆ.ಗ್ರಾಮದ ಐದು ಮನೆತನದವರು ಮನೆಗೊಬ್ಬರಂತೆ ಉಪವಾಸವಿದ್ದು ಶಿವರಾತ್ರಿ ದಿನ ಬೆಳಗ್ಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಆನಂಬಳ್ಳಿ ಬಳಿ ಹರಿಯುವ ಕಪಿಲಾ ನದಿಗೆ ತೆರಳುತ್ತಾರೆ. ಕಪಿಲೆಗೆ ಪೂಜೆ ಸಲ್ಲಿಸಿ ತಾಮ್ರದ ಬಿಂದಿಗೆಗಳಲ್ಲಿ ಕಪಿಲಾ ಜಲ ತುಂಬಿ ಬರಿಗಾಲಲ್ಲಿ ಕಾಲ್ನಡಿಗೆ ಮೂಲಕ ಹೊತ್ತು ತರುತ್ತಾರೆ. ಹೀಗೆ ತರುವ ಕಪಿಲಾ ಜಲದಿಂದಲೇ ಗ್ರಾಮದ ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ.

ಈ ಬಾರಿ ಕುಮಾರಸ್ವಾಮಿ, ರಾಜು, ಮಹದೇವಸ್ವಾಮಿ, ಕುಮಾರ ಹಾಗೂ ಇನ್ನೋರ್ವರು ಬೆಳಿಗ್ಗೆಯೇ ಕಪಿಲಾ ನದಿಗೆ ತೆರಳಿ, ಅಲ್ಲಿಂದ ಕೊಡದಲ್ಲಿ ನೀರು ಹೊತ್ತು 40 ಕಿ.ಮೀ ದೂರ ತಮ್ಮ ಗ್ರಾಮಕ್ಕೆ ನಡೆದುಕೊಂಡು ಬಂದು ಸಂಜೆ ಗ್ರಾಮಕ್ಕೆ ತಲುಪಿದರು. ಗ್ರಾಮಸ್ಥರು ರಾತ್ರಿಯಿಡಿ ಭಜನೆ ಮಾಡುವ ಮೂಲಕ ಜಾಗರಣೆ ಮಾಡುತ್ತಾ ಸಿದ್ದರಾಮೇಶ್ವರನಿಗೆ ಐದು ಬಾರಿ ಕಪಿಲಾ ಜಲದಿಂದ ಅಭಿಷೇಕ ಮಾಡಲಾಗುತ್ತದೆ. ಹೀಗೆ ಅಭಿಷೇಕ ಮಾಡಿದ ತೀರ್ಥವನ್ನು ಪ್ರತಿ ಮನೆಯವರು ಕೊಂಡೊಯ್ದು ಇದೇ ತೀರ್ಥದಿಂದ ಇಷ್ಟಲಿಂಗಕ್ಕೆ ಅಭಿಷೇಕ ಮಾಡಿ ವಸ್ತ್ರಧಾರಣೆ ಮಾಡಿ ಶಿವಪೂಜೆ ಮಾಡುವ ಮೂಲಕ ಶಿವರಾತ್ರಿ ಆಚರಿಸುತ್ತಾರೆ. ಗ್ರಾಮದ ಐದು ಮನೆತನದವರು ತಲೆ ತಲಾಂತರಗಳಿಂದ ಪ್ರತಿವರ್ಷ ಶಿವರಾತ್ರಿ ದಿನ ಬರಿಗಾಲಲ್ಲಿ ಕಾಲ್ನಡಿಗೆ ಮೂಲಕ ಕಪಿಲಾಜಲ ಹೊತ್ತು ತರುವ ಕಾಯಕ ಮಾಡಿಕೊಂಡು ಬರುತ್ತಿದ್ದಾರೆ.ಕಪಿಲಾ ನದಿಯಿಂದ ಹೊರಟ ನಂತರ ಎಲ್ಲಿಯೂ ನಿಲ್ಲದೆ ಆನಂಬಳ್ಳಿ ಗ್ರಾಮಕ್ಕೆ ಬಂದು ಅಲ್ಲಿನ ಮನೆಯೊಂದರಲ್ಲಿ ಆತಿಥ್ಯ ಸ್ವೀಕರಿಸಿ ಮತ್ತೆ ಬಿಂದಿಗೆ ಹೊತ್ತು ದೇವನೂರು ಗುರುಮಲ್ಲೇಶ್ವರ ಮಠಕ್ಕೆ ಬರುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ ಮತ್ತೆ ತಮ್ಮ ಕಾಲ್ನಡಿಗೆ ಮುಂದುವರಿಸುತ್ತಾರೆ. ನಂತರ ಬೆಂಡರವಾಡಿ ಕೆರೆಯ ಸ್ನಾನ ಘಟ್ಟಕ್ಕೆ ಬಂದು ಅಲ್ಲಿ ಕೆಲಕಾಲ ವಿಶ್ರಮಿಸಿ ಅಲ್ಲಿಂದ ಹೊರಟು ಸಂಜೆ ವೇಳೆಗೆ ಹೆಗ್ಗೋಠಾರ ಗ್ರಾಮದ ಸಿದ್ದರಾಮೇಶ್ವರ ದೇವಾಲಯ ತಲುಪುತ್ತಾರೆ. ಬಳಿಕ ಅವರು ಹೊತ್ತು ತಂದ ಕಪಿಲಾಜಲದಿಂದ ಸಿದ್ದರಾಮೇಶ್ವರನಿಗೆ ಅಭಿಷೇಕ ಶುರುವಾಗುತ್ತದೆ.ಬರಿಗಾಲಲ್ಲೆ 40 ಕಿಲೋ ಮೀಟರ್ ನಡೆದರೂ ಸಿದ್ದರಾಮೇಶ್ವರನ ಕೃಪೆ ಇರುವುದರಿಂದ ನಮಗೆ ಯಾವುದೇ ರೀತಿಯ ನೋವಾಗಲಿ, ತೊಂದರೆಯಾಗಲಿ ಆಗುವುದಿಲ್ಲ ಎಂದು ಕಪಿಲಜಲ ಹೊತ್ತು ತರುವ ಕುಮಾರ್ ಹೇಳುತ್ತಾರೆ.ಗ್ರಾಮದ ಸಿದ್ದರಾಮೇಶ್ವರ ಸ್ವಾಮಿಯ ಅಭಿಷೇಕಕ್ಕೆ ನೀಡುವ ಆಚರಣೆ ತಲ ತಲಾಂತರದಿಂದ ನಡೆದುಬಂದಿದೆ. ಈ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬರದಂತೆ ಮುಂದುವರಿಸಿಕೊಂಡು ಹೋಗುತ್ತಾ ಶಿವರಾತ್ರಿಯನ್ನು ನಿಷ್ಠೆಯಿಂದ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಮುಖಂಡ ಗೌಡಿಕೆ ಮಾದಪ್ಪ .