ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಭಕ್ತಿ- ಸಡಗರದಿಂದ ನೆರವೇರಿತು. ಜಿಲ್ಲೆಯ ಶಿವ ದೇವಾಲಯಗಳಲ್ಲಿ ಸಾವಿರಾರು ಭಕ್ತ ಜನರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಇತರ ದೇವಾಲಯಗಳಲ್ಲೂ ಶಿವರಾತ್ರಿಯ ಸಂಭ್ರಮ ಕಂಡುಬಂತು.ಜಿಲ್ಲೆಯ ಪ್ರಸಿದ್ಧ ಶಿವ ದೇವಾಲಯಗಳಾದ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ, ಬಂಟ್ವಾಳ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸೇರಿದಂತೆ ಎಲ್ಲೆಡೆ ರಾತ್ರಿ ಜಾಗರಣೆ, ಭಜನೆ, ಶಿವಪೂಜೆ ನಿರಾತಂಕವಾಗಿ ನೆರವೇರಿತು.
ಕದ್ರಿ ದೇವಾಲಯದಲ್ಲಿ ಬೆಳ್ಳಿ ರಥೋತ್ಸವ:ನಗರದ ಕದ್ರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಬೆಳಗ್ಗಿನಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ರಾತ್ರಿ ಬೆಳ್ಳಿ ರಥೋತ್ಸವ ಸಂಭ್ರಮದಿಂದ ನೆರವೇರಿತು. ವಿಶೇಷವಾಗಿ ಕದ್ರಿ ದೇವಸ್ಥಾನದ ಪುಷ್ಕರಿಣಿಯಲ್ಲಿ ಪವಿತ್ರ ಸ್ನಾನ ಮಾಡಿ ಗುಹಾ ತೀರ್ಥದ ಮೂಲಕ ಶಿವಲಿಂಗಕ್ಕೆ ಭಕ್ತರು ಅಭಿಷೇಕ ನೆರವೇರಿಸಿದರು.
ಕುದ್ರೋಳಿಯಲ್ಲೂ ರಥೋತ್ಸವ:ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬೆಳಗ್ಗೆ ಹೋಮ, ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ರಥೋತ್ಸವ, ವಿಷ್ಣು ಬಲಿ ಉತ್ಸವ, ಶಿವಬಲಿ ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ಕೆರೆದೀಪ, ಮಂಟಪ ಪೂಜೆ ಅಚ್ಚುಕಟ್ಟಾಗಿ ನಡೆಯಿತು. ಮಧ್ಯಾಹ್ನ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಇಡೀ ದೇವಾಲಯವನ್ನು ಆಕರ್ಷಕ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು.ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಜಾ ದಿನವೂ ಆಗಿದ್ದರಿಂದ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸಿದರು.
ಭಜನಾ ಮಂದಿರಗಳಲ್ಲಿ ಕೂಡ ವಿಶೇಷ ಪೂಜೆಯೊಂದಿಗೆ ಭಜನೆ, ಜಾಗರಣೆ ಹಮ್ಮಿಕೊಳ್ಳಲಾಗಿತ್ತು. ಜಾಗರಣೆ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.