ಮುಂಡರಗಿ: ಶಿವಶರಣೆ ಅಕ್ಕಮಹಾದೇವಿ 12ನೇ ಶತಮಾನದ ವಚನ ಸಾಹಿತ್ಯದ ಪ್ರಮುಖ ಕವಯಿತ್ರಿ ಮತ್ತು ಕನ್ನಡದ ಪ್ರಥಮ ಕವಯಿತ್ರಿ. ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಾವಿಸಿ, ಲೌಕಿಕ ಸುಖಗಳನ್ನು ತ್ಯಜಿಸಿದ, ಕೇಶಾಂಬರೆಯಾಗಿ(ದಿಗಂಬರ) ಭಕ್ತಿ ಮಾರ್ಗದಲ್ಲಿ ನಡೆದ ವೀರ ವಿರಾಗಿಣಿ ಎಂದು ಪ್ರೊ. ಸುನಿತಾ ಅಂಗಡಿ ತಿಳಿಸಿದರು.

ಪಟ್ಟಣದ ಅನ್ನದಾನೀಶ್ವರ ಮಠದ ಶಿಲಾಮಂಟಪದಲ್ಲಿ ಗುರುವಾರ ಜರುಗಿದ ಅಕ್ಕಮಹಾದೇವಿ, ಅಲ್ಲಮಪ್ರಭು ಜಯಂತ್ಯುತ್ಸವ ಹಾಗೂ ಅನ್ನದಾನೀಶ್ವರ ಮಠದ 9ನೇ ಪೀಠಾಧಿಪತಿ ವೆಂಕಟಾಪುರ ಅಜ್ಜನವರ 59ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಕುರಿತು ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ನಿರ್ಮಲಶೆಟ್ಟಿ ಸುಮತಿಯವರ ಮಗಳಾಗಿ ಜನಿಸಿದರು. ಬಾಲ್ಯದಿಂದಲೇ ಶಿವನ ಮೇಲೆ ತೀವ್ರ ಭಕ್ತಿ ಹೊಂದಿದ್ದ ಅಕ್ಕ, ಚೆನ್ನಮಲ್ಲಿಕಾರ್ಜುನನನ್ನು ತನ್ನ ಪತಿ ಎಂದು ನಂಬಿದ್ದಳು. ಕೌಶಿಕ ಮಹಾರಾಜನೊಂದಿಗಿನ ವಿವಾಹದ ನಂತರ, ಲೌಕಿಕ ಜೀವನವನ್ನು ಧಿಕ್ಕರಿಸಿ, ಶಿವನ ಅನ್ವೇಷಣೆಯಲ್ಲಿ ಅರಮನೆಯನ್ನು ತೊರೆದಳು. ತನ್ನ ಭಕ್ತಿಯ ಪರೀಕ್ಷೆಯಾಗಿ ಸಕಲ ಭೋಗಜೀವನವನ್ನು ತ್ಯಜಿಸಿದಳು. ನಂತರ ಅನುಭವ ಮಂಟಪಕ್ಕೆ ಬಂದು ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ ಮೊದಲಾದ ಶರಣರ ಜತೆಗೆ ಚರ್ಚೆಗಳಲ್ಲಿ ಪಾಲ್ಗೊಂಡು ಉನ್ನತ ಜ್ಞಾನ ಪಡೆದ ಇವರನ್ನು ಅಲ್ಲಮಪ್ರಭು ಅಕ್ಕಎಂದು ಕರೆದರು. ಅಕ್ಕಮಹಾದೇವಿ ಜ್ಞಾನ, ವೈರಾಗ್ಯ ಮತ್ತು ತೀವ್ರ ಭಕ್ತಿಯಿಂದ ಕೂಡಿದ 430ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದರು.ವಿಶ್ರಾಂತ ಪ್ರಾ. ಡಾ. ಫಕ್ಕೀರಪ್ಪ ವಜ್ರಬಂಡಿ ಮಾತನಾಡಿ, 12ನೇ ಶತಮಾನದ ಶ್ರೇಷ್ಠ ವಚನಕಾರ, ಅಧ್ಯಾತ್ಮ ಸಾಧಕ ಮತ್ತು ಶಿವಶರಣರ ಅನುಭವ ಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷ ಅಲ್ಲಮಪ್ರಭು ಗುಹೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿದರು. ಶಿವಮೊಗ್ಗದ ಬಳ್ಳಿಗಾವಿಯಲ್ಲಿ ಜನಿಸಿದ ಇವರು, ಪತ್ನಿ ಕಾಮಲತೆಯ ಮರಣದ ನಂತರ ವೈರಾಗ್ಯ ಹೊಂದಿ ತತ್ವಜ್ಞಾನದ ಮೂಲಕ ಸಮಾಜ ಸುಧಾರಣೆ ಮಾಡಿದರು. ಇವರ ಜೀವನವನ್ನು ಪ್ರಭುಲಿಂಗಲೀಲೆ ಕಾವ್ಯವು ವರ್ಣಿಸುತ್ತದೆ.ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಭಾಗವಹಿಸಿ, ಅನುಭವ ಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷರಾಗಿ ಶರಣರಿಗೆ ಮಾರ್ಗದರ್ಶನ ನೀಡಿದರು ಎಂದರು.ಕ.ರಾ. ಬೆಲ್ಲದ ಮಹಾವಿದ್ಯಾಲಯದ ಪ್ರಾ. ಡಾ. ಸಂತೋಷ ಅಂಗಡಿ 9ನೇ ಪೀಠಾಧಿಪತಿ ವೆಂಕಟಾಪುರ ಅಜ್ಜನವರ ಕುರಿತು ಮಾತನಾಡಿದರು. ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ಶ್ರೀಮಠದ ವೆಂಕಟಾಪುರ ಅಜ್ಜನವರ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಕುಕನೂರು ಅನ್ನದಾನೀಶ್ವರ ಶಾಖಾ ಮಠದ ಡಾ. ಮಹಾದೇವ ಸ್ವಾಮೀಜಿ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟಿ, ಡಾ. ಬಿ.ಜಿ. ಜವಳಿ, ಡಾ. ರಾಜಶೇಖರ ಬಳ್ಳಾರಿ, ಅಶೋಕ ನೀಲಗುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರ್.ಬಿ. ಡಂಬಳಮಠ ಕುಟುಂಬಸ್ಥರು ಭಕ್ತಿಸೇವೆ ವಹಿಸಿದ್ದರು. ಕುಮಾರಿ ಸ್ಥಾಯಿ ಬಾಲಚಂದ್ರ ನಾಕೋಡ ಸಂಗೀತ ಸೇವೆ ನೆರವೇರಿಸಿದರು. ಹಂಪಿಮಠ ನಿರೂಪಿಸಿ, ವಂದಿಸಿದರು.