ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಕೋಗಿಲೆಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶಿವವೀರ ಸಂಗಪ್ಪ ಅವಿರೋಧ ಆಯ್ಕೆಯಾದರು.ತಾಲೂಕಿನ ಕೋಗಿಲೆಮನೆ ಗ್ರಾಪಂಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಶಿವಕುಮಾರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಚುನಾವಣೆ ಘೋಷಣೆಯಾಗಿತ್ತು. ೮ ಜನ ಸದಸ್ಯರ ಬಲವಿರುವ ಗ್ರಾಮ ಪಂಚಾಯ್ತಿಯಲ್ಲಿ ಹಾಡ್ಲಗೆರೆ ಗ್ರಾಮದ ಶಿವವೀರಪ್ಪ ಸಂಗಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಸೀಲ್ದಾರ್ ಎಂ ಮಮತಾ ಘೋಷಣೆ ಮಾಡಿದರು. ನಂತರ ನೂತನ ಅಧ್ಯಕ್ಷರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಅಧ್ಯಕ್ಷ ಸಂಗಪ್ಪ, ಇಲ್ಲಿ ಯಾವುದೇ ಜಾತಿ ಭೇದವೆನ್ನದೆ ಎಲ್ಲಾ ಸದಸ್ಯರು ಒಗ್ಗೂಡಿ ನನ್ನ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಿದ್ದಾರೆ.ಅವರ ಮಾತಿಗೆ ಲೋಪವಾಗದಂತೆ ಎಲ್ಲರ ಜೊತೆಗೂಡಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ನಮ್ಮ ಗ್ರಾಪಂ ಕಟ್ಟಡ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು ಶಾಸಕರ ಸಹಕಾರ ಪಡೆದು ಸ್ವಂತ ಕಟ್ಟಡ ಹೊಂದಲು ಜಾಗ ಪಡೆಯಲು ಶಾಸಕರಲ್ಲಿ ಮನವಿ ಮಾಡಿದ್ದು ಎಲ್ಲರ ಸಹಕಾರ ಪಡೆದು ನೂತನ ಕಟ್ಟಡ ಮಾಡುತ್ತೇವೆ. ಈ ಗ್ರಾಪಂ ಒಳಪಡುವ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದಲ್ಲದೆ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಮುಂದೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಶೆಷಯ್ಯ ಮಾತನಾಡಿ, ನಮ್ಮ ಗ್ರಾಪಂ ಹಿರಿಯ ಸದಸ್ಯರಾಗಿ ಈಗ ಅಧ್ಯಕ್ಷರಾಗಿರುವ ಸಂಗಪ್ಪಣ್ಣ ಅವರಿಗೆ ಸಹಕಾರ ನೀಡುತ್ತೇವೆ. ಎಲ್ಲರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಇವರಿಗೆ ನೂತನ ಗ್ರಾಪಂ ಕಟ್ಟಡ ನಿರ್ಮಾಣ ಮಾಡಲು ಸಹಕಾರ ನೀಡುತ್ತೇವೆ. ಕಟ್ಟಡ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದ ತಕ್ಷಣ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಹೇಮಾವತಿ, ಸದಸ್ಯ ಶಿವಕುಮಾರ್, ಪುಟ್ಟಸ್ವಾಮಿ, ಸಾವಿತ್ರಿ, ಮಹೆದೇವಮ್ಮ, ಸುಶೀಲ, ಪಿಡಿಒ ಚಿದಾನಂದ್, ಗ್ರಾಮಸ್ಥರು ಹಾಗೂ ಕರವೇ ಪ್ರವಿಣ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಹಾಜರಿದ್ದರು.