ಸಾರಾಂಶ
ಬ್ಯಾಡಗಿ: ಬ್ಯಾಂಕ್‌ನಿಂದ ರೈತರಿಗೆ ದೊರೆಯುವ ಎಲ್ಲ ಸೌಲತ್ತುಗಳನ್ನು ಒದಗಿಸುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷ ಶಿವಯೋಗಿ ಉಕ್ಕುಂದ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆ ಬಳಿಕ ರೈತ ಸಮುದಾಯದ ಶೇರುಗಳಿಂದ ಆರಂಭವಾದ ಬ್ಯಾಂಕಿನಲ್ಲಿ ರೈತರಿಗಾಗಿ ವಿಶೇಷ ಯೋಜನೆಗಳನ್ನು ತೆರೆಯಲಾಗಿದೆ. ಸುಮಾರು 6 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು, ಪ್ರಸಕ್ತ ವರ್ಷ 75 ಲಕ್ಷ ರು. ಬ್ಯಾಂಕ್‌ಗೆ ಬಿಡುಗಡೆಯಾಗಿದೆ. ರೈತರಿಗೆ ಟ್ರ್ಯಾಕ್ಟರ್, ಹೈನುಗಾರಿಕೆ, ಭೂಪರಿವರ್ತನೆ, ಜಾನುವಾರು ಮನೆ ನಿರ್ಮಾಣ, ಬೆಳೆಸಾಲ, ರೇಷ್ಮೆ ಮನೆ ಸೇರಿದಂತೆ ಇತ್ಯಾದಿ ಹೆಸರಲ್ಲಿ ಸಾಲ ನೀಡಲಾಗುತ್ತಿದ್ದು, ರೈತರು ಬ್ಯಾಂಕ್ ಸಾಲವನ್ನು ಸಕಾಲಕ್ಕೆ ಮರಳಿಸಿದಾಗ ಮಾತ್ರ ಬ್ಯಾಂಕ್ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.ಬ್ಯಾಂಕಿನಲ್ಲಿ ಪ್ರಸಕ್ತ ಚುನಾಯಿತ ಹಾಗೂ ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ 15 ಜನ ಸದಸ್ಯರಿದ್ದು, ಎಲ್ಲರೂ ತಮ್ಮ ಕ್ಷೇತ್ರಗಳ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತರು ಕೂಡ ಬ್ಯಾಂಕ್ ಸಂಪೂರ್ಣ ಅಭಿವೃದ್ಧಿಗೆ ಸಹಕಾರ ನೀಡುವುದು ಅಗತ್ಯವಾಗಿದೆ. ಅಲ್ಲದೇ ಶೇರುದಾರರು ಹಾಗೂ ಸರ್ವ ಸದಸ್ಯರು ಬ್ಯಾಂಕ್ ಲಾಭದ ಹಾದಿಯತ್ತ ಸಾಗಲು ಸಲಹೆ, ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶವಿದೆ ಎಂದರು.
ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಸುರೇಶ ಯತ್ನಳ್ಳಿ ಮಾತನಾಡಿ, ಸರ್ಕಾರಗಳು 2 ಬಾರಿ ಸಾಲ ಮನ್ನಾ ಘೋಷಣೆ ವೇಳೆ ರಾಷ್ಟ್ರೀಯ ಹಾಗೂ ಸಹಕಾರಿ ಸಂಘಗಳ ರೈತರಿಗೆ ಮಾತ್ರ ಪ್ರಯೋಜನ ದೊರೆತಿದ್ದು, ಪಿಎಲ್‌ಡಿ ಬ್ಯಾಂಕಗಳ ರೈತ ಸಮುದಾಯಕ್ಕೆ ಸಮರ್ಪಕ ಲಾಭ ಸಿಗಲಿಲ್ಲ, ಪರಿಣಾಮ ಬ್ಯಾಂಕ್ ಅಭಿವೃದ್ದಿಗೆ ಹಿನ್ನಡೆಯುಂಟಾಗಿ ರೈತರಿಗೆ ದೊಡ್ಡ ಮಟ್ಟದ ಸಾಲ ಸಿಗದಂತಾಗಿದೆ. ಎರಡ್ಮೂರು ವರ್ಷಗಳಿಂದ ರೈತರಿಗೆ ಸಮರ್ಪಕವಾಗಿ ಬೆಳೆ ಬಾರದಂತಾಗಿದ್ದು, ರೈತ ಸಮುದಾಯ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪಿಎಲ್‌ಡಿ ಬ್ಯಾಂಕ್ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು, ಸುಸ್ತಿ ಸೇರಿದಂತೆ ಎಲ್ಲ ಸಾಲಗಳನ್ನು ಮನ್ನಾ ಮಾಡುವ ಮೂಲಕ ಬ್ಯಾಂಕ ಸರ್ವತೋಮುಖ ಅಭಿವೃದ್ಧಿಗೆ ನೆರವು ಒದಗಿಸುವಂತೆ ಆಗ್ರಹಿಸಿದರು.ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಛತ್ರದ, ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಜಯಪ್ಪ ಎಲಿ, ನಿರ್ದೇಶಕರಾದ ಮಹದೇವಪ್ಪ ಶಿಡೇನೂರು, ಅರುಣಕುಮಾರ ಕರಡೇರ, ಸಂಕೇತಗೌಡ್ರ ಪಾಟೀಲ, ಹನುಮಗೌಡ್ರ ಪಾಟೀಲ, ಪ್ರಶಾಂತ ಮುದಕಮ್ಮನವರ, ಮಾರ್ತಾಂಡಪ್ಪ ಮಾದರ, ಪುಷ್ಟಾ ಪಾಟೀಲ, ಲತಾ ಸಂಕಣ್ಣನವರ, ರೇಣುಕವ್ವ ಕರಿಯಮ್ಮನವರ, ಮಹದೇವಪ್ಪ ಓಲೇಕಾರ, ಗಣೇಶ ಅಚಲಕರ ಇತರರಿದ್ದರು.