ಗೋಕರ್ಣದಲ್ಲಿ ಶಿವರಾತ್ರಿ ಉತ್ಸವದ ಪೂರ್ವಭಾವಿ ಸಭೆ

| Published : Feb 16 2025, 01:49 AM IST

ಗೋಕರ್ಣದಲ್ಲಿ ಶಿವರಾತ್ರಿ ಉತ್ಸವದ ಪೂರ್ವಭಾವಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವರಾತ್ರಿ ಹಿನ್ನೆಲೆಯಲ್ಲಿ ಫೆ. ೨೬ರಿಂದ ಫೆ. ೨೭ರ ವರೆಗೆ ಮುಖ್ಯಕಡಲತೀರದಲ್ಲಿ ಸಂಜೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿಯ ಗ್ರಾಪಂನಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಗೋಕರ್ಣ: ಶಿವರಾತ್ರಿ ಉತ್ಸವದ ಅಂಗವಾಗಿ ಇಲ್ಲಿಯ ಗ್ರಾಪಂನಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಶಿವರಾತ್ರಿ ಉತ್ಸವವನ್ನು ಪಕ್ಷಾತೀತವಾಗಿ ಹಮ್ಮಿಕೊಂಡಿದ್ದು, ಇದಕ್ಕೆ ಎಲ್ಲರ ಸಹಕಾರ ಬೇಕು. ಜಿಲ್ಲಾಡಳಿತ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಕೋರಿದರು.

ಕಳೆದ ವರ್ಷ ಸರ್ಕಾರದಿಂದ ಮುರ್ಡೇಶ್ವರದಲ್ಲಿ ಕಾರ್ಯಕ್ರಮ ನಡೆದಿತ್ತು. ಪರಶಿವನ ಆತ್ಮಲಿಂಗವಿರುವ ಗೋಕರ್ಣದಲ್ಲಿ ಈ ಬಾರಿ ನಡೆಯಬೇಕು ಎಂದು ಒತ್ತಾಯಿಸಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೆ. ಅದರಂತೆ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಫೆ. ೨೬ರಿಂದ ಫೆ. ೨೭ರ ವರೆಗೆ ಮುಖ್ಯಕಡಲತೀರದಲ್ಲಿ ಸಂಜೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಕಡಲತೀರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಮಟಾ, ಅಂಕೋಲಾ ಪುರಸಭೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಆನಂತರ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚಿಸಲಾಯಿತು. ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ, ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಮಹಾಬಲೇಶ್ವರ ಕೋ-ಆಪರೇಟಿವ್‌ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಸದಸ್ಯ ಪ್ರಭಾಕರ ಪ್ರಸಾದ ಸಲಹೆ ನೀಡಿದರು.

ಗ್ರಾಪಂ ಸದಸ್ಯ ಸುಜಯ ಶೆಟ್ಟಿ ಮಾತನಾಡಿ, ಪ್ರತಿ ವರ್ಷ ಸಾಗರಾರತಿ ಕಾರ್ಯಕ್ರಮ ನಡೆಯುತ್ತಿದ್ದು, ಈ ವರ್ಷವೂ ನಡೆಯಬೇಕು ಎಂದು ಆಗ್ರಹಿಸಿದರು. ಬಿಜೆಪಿ ಪ್ರಮುಖ ಕುಮಾರ ಮಾರ್ಕಾಂಡೆ ಅವರು ಈಗಾಗಲೇ ಸಿದ್ಧಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು. ಹಣ ಕ್ರೋಡೀಕರಣ, ಖರ್ಚು-ವೆಚ್ಚದ ಬಗ್ಗೆ ಚರ್ಚಿಸಿ, ಶಾಸಕ ದಿನಕರ ಶೆಟ್ಟಿ ಸ್ವತಃ ₹5 ಲಕ್ಷ ನೀಡುವುದಾಗಿ ಘೋಷಿಸಿದರು.

ವಾಹನ ನಿಲುಗಡೆ ಹಾಗೂ ಟ್ರಾಫಿಕ್ ಸಮಸ್ಯೆ, ಬೀದಿ ದೀಪ ಮತ್ತಿತರ ಕುರಿತು ವಿಷಯ ಪ್ರಸ್ತಾಪಿಸಲಾಯಿತು.

ಪಿಎಸ್‌ಐ ಖಾದರ ಬಾಷಾ ಹಲವು ಕಡೆ ಬೀದಿ ದೀಪ ಇಲ್ಲದೆ ತೊಂದರೆಯಾಗುತ್ತಿರುವ ಬಗ್ಗೆ ಮತ್ತು ವಾಹನ ನಿಲುಗಡೆ ವ್ಯವಸ್ಥೆ ಬಗ್ಗೆ ವಿವರಿಸಿದರು.

ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್‌ ಸತೀಶ ಗೌಡ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಉಪಾಧ್ಯಕ್ಷೆ ನಾದಿಲ್ ರೆಬೆಲ್ಲೂ ದಿನ್ನಿ , ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ ಉಪಸ್ಥಿತರಿದ್ದರು.

ಆಶ್ರಯ ಫೌಂಡೇಷನ್‌ನ ರಾಜೀವ ಗಾಂವಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಎಲ್. ಭಟ್ ಸ್ವಾಗತಿಸಿದರು. ಗ್ರಾಪಂ ಕಾರ್ಯದರ್ಶಿ ಮಂಜುನಾಥ, ಪಿಡಿಒ ಬಾಲಚಂದ್ರ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.

ಮಾದನಗೇರಿಯಲ್ಲಿ ಸ್ವಾಗತ ದ್ವಾರ ನಿರ್ಮಾಣ: ಬರುವ ಯಾತ್ರಿಕರಿಗೆ ಸ್ವಾಗತ ಕೋರುವ ಸ್ವಾಗತ ಕಮಾನನ್ನು ಮಾದನಗೇರಿಯಲ್ಲಿ ನಿರ್ಮಿಸಲು ಸ್ಥಳೀಯರಾದ ಸಂದೀಪ ಅಗಸಾಲಿ, ಮಹೇಶ ನಾಯಕ, ರಾಮು ಕೆಂಚನ್‌ ಅವರಿಗೆ ಜವಾಬ್ದಾರಿ ನೀಡಲಾಯಿತು.

ಇಂದು ಸ್ವಚ್ಛತೆ: ಫೆ. ೧೬ರಂದು ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾರವಾರ ಪಹರೆ ವೇದಿಕೆಯೆ ಗೋಕರ್ಣ ಘಟಕದ ನೇತೃತ್ವದಲ್ಲಿ ಊರಿನ ವಿವಿಧ ಸಂಘಟನೆ ಹಾಗೂ ಸಾರ್ವಜನಿಕರೊಂದಿಗೆ ಮುಖ್ಯ ಕಡಲತೀರದ ಸ್ವಚ್ಛತಾ ಕಾರ್ಯ ನಡೆಸಲು ನಿರ್ಧರಿಸಿದ್ದು, ಎಲ್ಲರು ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.