ಸಾರಾಂಶ
ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಆರ್ಕಟಿಮನೆಯ ವಿಶ್ವಶಕ್ತಿ ದೇವಸ್ಥಾನದಲ್ಲಿ ದೇವಿದಾಸ ಸ್ವಾಮಿಗಳ ನೇತೃತ್ವದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡ ಷೋಡಶ ಪವಿತ್ರ ನಾಗಮಂಡಲೋತ್ಸವ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಭಟ್ಕಳ ಸೇರಿದಂತೆ ವಿವಿಧ ಪ್ರದೇಶದಿಂದ ಸಾವಿರಾರರು ಭಕ್ತರು ಪಾಲ್ಗೊಂಡು ನಾಗಮಂಡಲೋತ್ಸವವನ್ನು ಕಣ್ತುಂಬಿಕೊಂಡರು. ಗುರುವಾರ ಸಂಜೆ ನಾಗದೇವರಿಗೆ ಪ್ರಸನ್ನ ಪೂಜೆ ಬಳಿಕ ಹಾಲಿಟ್ಟು ಸೇವೆಯೊಂದಿಗೆ ಆರಂಭಗೊಂಡ ನಾಗಮಂಡಲೋತ್ಸವ ಬೆಳಗಿನ ಜಾವ 4 ಗಂಟೆಯವರೆಗೂ ನಡೆದು ನಂತರ ಬಲಿಪೂಜೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.ಅಳ್ವೆಕೋಡಿಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಏರ್ಪಡಿಸಲಾದ ನಾಗಮಂಡಲೋತ್ಸವವನ್ನು ಕೋಟೇಶ್ವರ ಗೋಪಾಡಿಯ ನಾಗಪಾತ್ರಿಯಾದ ವೇ.ಮೂ. ಶಂಕರನಾರಾಯಣ ಬಾಯರಿ, ಗೋಳಿ ಅಂಗಡಿಯ ವಾಸುದೇವ ವೈದ್ಯ ಮತ್ತು ಬಳಗ, ಮುದ್ದೂರಿನ ಕೃಷ್ಣಪ್ರಸಾದ ಮತ್ತು ಬಳಗ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟಿತು. ಮಾ. 15ರಿಂದ ಆರಂಭಗೊಂಡಿದ್ದ ನಾಗಮಂಡಲೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ರಾತ್ರಿಯ ಷೋಡಶ ಪವಿತ್ರ ನಾಗಮಂಡಲೋತ್ಸವದೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ವಿವಿಧ ಹೂವುಗಳಿಂದ ನಿರ್ಮಿಸಲಾದ ಭವ್ಯವಾದ ಮಂಟಪದಲ್ಲಿ ಆರಂಭಗೊಂಡ ನಾಗಮಂಡಲೋತ್ಸವಕ್ಕೆ ವಾದ್ಯ ಮತ್ತು ಚಂಡೆ ಮೆರುಗು ನೀಡಿತು. 10 ಸಾವಿರಕ್ಕೂ ಅಧಿಕ ಅಡಕೆ ಸಿಂಗಾರ ಹೂವನ್ನು ನಾಗಮಂಡಲಕ್ಕೆ ಬಳಸಿಕೊಳ್ಳಲಾಯಿತು. ಮಾ. 15ರಿಂದ ಪ್ರತಿನಿತ್ಯ ಏಳೆಂಟು ಸಾವಿರ ಭಕ್ತರು ಪ್ರಸಾದ ಭೋಜನ ಸವಿದರೆ, ಗುರುವಾರ ಒಂದೇ ದಿನ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಅಳ್ವೆಕೋಡಿ ವಿಶ್ವಶಕ್ತಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿ ನಾಗಮಂಡಲೋತ್ಸವವನ್ನು ವೀಕ್ಷಿಸಿದರು.