ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಇರುವ ಪುರಸಭೆಯ ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಹಾಗೂ ಇತರೆ ಅಂಗಡಿಗಳನ್ನು ಪುರಸಭೆಯ ಕಂದಾಯ ಅಧಿಕಾರಿಗಳು ಬುಧವಾರ ಬಂದ್ ಮಾಡಿಸಿದ್ದಾರೆ.
ಕನ್ನಡಪ್ರಭ ಬುಧವಾರ "ಲಕ್ಷ್ಮೇಶ್ವರ ಪುರಸಭೆ ಮಳಿಗೆಗಳಲ್ಲಿ ಮಾಂಸ ಮಾರಾಟ! " ಎಂಬ ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಯ ಪ್ರಕಟವಾದ ಬೆನ್ನಲ್ಲೆ ಎಚ್ಚೆತ್ತ ಪುರಸಭೆಯ ಅಧಿಕಾರಿಗಳು ಅನಧಿಕೃತವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಬೀಗ ಜಡಿದರು.ಈ ವೇಳೆ ಪುರಸಭೆಯ ಕಂದಾಯ ಅಧಿಕಾರಿ ಸುರೇಶ ಪೂಜಾರ ಹಾಗೂ ಆರೋಗ್ಯ ಹಿರಿಯ ನಿರೀಕ್ಷಕ ಮಂಜುನಾಥ ಮುದಗಲ್ಲ ಅವರು ವಾಣಿಜ್ಯ ಮಳಿಗೆಗಳ ಪ್ರತಿ ಅಂಗಡಿಗಳಿಗೆ ಭೇಟಿ ನೀಡಿ, ಪರವಾನಗಿ ಪತ್ರ, ಕಂದಾಯ ಕಟ್ಟಿದ ರಸೀದಿ ಹಾಗೂ ವ್ಯಾಪಾರದ ಕುರಿತು ಮಾಹಿತಿ ಪಡೆದುಕೊಂಡಿದ್ದಲ್ಲದೆ ಅನಧಿಕೃತವಾಗಿ ಮಾಂಸ ಮಾರಾಟದ ಅಂಗಡಿಗಳಿಗೆ, ಮಟನ್ ಹಾಗೂ ಚಿಕನ್ ಹೋಟೆಲ್‌ಗಳನ್ನು ಬಂದ್ ಮಾಡಿಸಿದರು.
ಈ ವೇಳೆ ಎಗ್ ರೈಸ್ ಮಾರಾಟ ಮಾಡುವ ಹಾಗೂ ದೂಡುವ ಗಾಡಿಯಲ್ಲಿ ತಿಂಡಿ ತಯಾರಿಸಿ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಅಂಗಡಿಯ ಮಾಲೀಕರು ಪುರಸಭೆಯ ಅಧಿಕಾರಿಗಳೊಂದಿಗೆ ಸ್ವಚ್ಛತೆಯ ಕುರಿತು ವಾಗ್ವಾದ ಮಾಡುತ್ತಿರುವ ಘಟನೆ ಕಂಡುಬಂದಿತು. ಪ್ರತಿನಿತ್ಯ ಕಸ ತೆಗೆದುಕೊಂಡು ಹೋಗುವ ಗಾಡಿಗಳು ಬರುತ್ತಿಲ್ಲ. ಹೀಗಾಗಿ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಎಂದು ತಕರಾರು ಮಾಡಿದರು.
ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಮಾತನಾಡಿ, ಕಸದ ಗಾಡಿಗಳು ಬರುವರಗೆಗೆ ಕಸವನ್ನು ಸಂಗ್ರಹ ಮಾಡಿಟ್ಟುಕೊಂಡು ನಮಗೆ ಕರೆ ಮಾಡಿದಲ್ಲಿ ಕಸದ ಗಾಡಿಗಳನ್ನು ನಿಮ್ಮಲ್ಲಿಗೆ ಕಳಿಸಿಕೊಡುತ್ತೇವೆ ಎಂದರು. ಆಗ ಸಾರ್ವಜನಿಕರು ಒಪ್ಪಿಗೆ ಸೂಚಿಸಿದರು.