ಕನ್ನಡ ಚುಟುಕು ಸಾಹಿತ್ಯದ ಮೂಲವನ್ನು ಜನಪದ ಸಾಹಿತ್ಯದಲ್ಲಿ ಗುರುತಿಸಬಹುದು. ಜನಪದ ಹಾಡು, ಒಗಟು ಹಾಗೂ ನಾಲ್ಕು ಸಾಲಿನ ಪದ್ಯಗಳಲ್ಲಿ ಚುಟುಕು ಸಾಹಿತ್ಯದ ಆಶಯಗಳು ಅಡಕವಾಗಿವೆ.
ಏಕನಾಥ ಮೆದಿಕೇರಿ
ಕುಷ್ಟಗಿ/ಹನುಮಸಾಗರ: ಅಲ್ಪಪದಗಳಲ್ಲಿ ಅಪಾರ ಅರ್ಥವನ್ನು ಅಭಿವ್ಯಕ್ತಿಸುವ ಚುಟುಕು ಸಾಹಿತ್ಯವು ಸಮಾಜದಲ್ಲಿನ ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಬಲ ಮಾಧ್ಯಮವಾಗಿದೆ ಎಂದು ಡಾ. ಜೀವನಸಾಬ ಬಿನ್ನಾಳ ಹೇಳಿದರು.ಪಟ್ಟಣದಲ್ಲಿ ಬುತ್ತಿ ಬಸವೇಶ್ವರ ಆವರಣದಲ್ಲಿ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಪರಮೇಶ್ವರಪ್ಪ ದಂಡಿನ ವೇದಿಕೆಯ ಸಂಕೀರ್ಣ ಗೋಷ್ಠಿ ಉಪನ್ಯಾಸ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ವಿಷಯ ಕುರಿತು ಅವರು ಮಾತನಾಡಿದರು.
ಮನುಷ್ಯನ ಬದುಕಿನ ನೋವು, ನಲಿವು, ಅನುಭವ, ಸೌಂದರ್ಯಪ್ರಜ್ಞೆ ಹಾಗೂ ವೈಚಾರಿಕ ಚಿಂತನೆಗಳ ಅಭಿವ್ಯಕ್ತಿಯೇ ಸಾಹಿತ್ಯ. ಅಲೆಮಾರಿ ಬದುಕಿನಿಂದ ಆರಂಭವಾದ ಮನುಷ್ಯನ ನಾಗರಿಕತೆ, ಸಂಸ್ಕೃತಿ ಮತ್ತು ಬರವಣಿಗೆ ತಾಳೆಗರಿಯಿಂದ ಇಂದಿನ ಕೃತಕ ಬುದ್ಧಿಮತ್ತೆಯ ವರೆಗೆ ವಿವಿಧ ಹಂತಗಳಲ್ಲಿ ಬೆಳವಣಿಗೆ ಕಂಡಿದೆ. ಕನ್ನಡ ಚುಟುಕು ಸಾಹಿತ್ಯದ ಮೂಲವನ್ನು ಜನಪದ ಸಾಹಿತ್ಯದಲ್ಲಿ ಗುರುತಿಸಬಹುದು. ಜನಪದ ಹಾಡು, ಒಗಟು ಹಾಗೂ ನಾಲ್ಕು ಸಾಲಿನ ಪದ್ಯಗಳಲ್ಲಿ ಚುಟುಕು ಸಾಹಿತ್ಯದ ಆಶಯಗಳು ಅಡಕವಾಗಿವೆ ಎಂದು ಹೇಳಿದರು.ಲೇಖಕ ಕಿಷನರಾವ್ ಕುಲಕರ್ಣಿ ಸಾಹಿತ್ಯದಲ್ಲಿ ಚುಟುಕು, ಸಾಹಿತ್ಯದ ಪ್ರಭಾವ ಕುರಿತು ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಿ.ಬಿ. ಗಡಾದ ಚುಟುಕು ಸಾಹಿತ್ಯ ಬೆಳೆದು ಬಂದ ಬಗೆ ಉಪನ್ಯಾಸ ನೀಡಿದರು. ನಿವೃತ್ತ ಪ್ರಾಚಾರ್ಯ ಶರಣಬಸ ಡಾನಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಮಹಾಂತೇಶ ನೆಲಗಣಿ, ಬಸವರಾಜ ಉಪ್ಪಿನ, ಮೈಲಾರಪ್ಪ ವಕ್ಕಲಿ, ಚುಸಾಪಾ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಬಂಡಾರಿ, ಸಿಪಿಐ ವಿಶ್ವನಾಥ ಹಿರೇಗೌಡರ, ಮಂಜುನಾಥ ಗುಳೇದಗುಡ್ಡ, ಶ್ರೀಕಾಂತ ಕೊಡತನಿ, ಎಪಿ ಅಂಗಡಿ, ಪಿಎಸ್ಐ ಹನುಮಂತಪ್ಪ ತಳವಾರ, ವಸರಾಜ ಗಾಡಿಗೇರ, ಶೇಖರಗೌಡ ಮಾಲಿಪಾಟೀಲ, ವಿಶ್ವನಾಥ ಅಮಲಿಕೊಪ್ಪಮಠ, ಮಹೇಶ ಹಡಪದ ಇದ್ದರು.
ಬೀರಪ್ಪ ಕಡ್ಲಿಮಟ್ಟಿ, ಗೌರಮ್ಮ ತಳವಾರ ಕಾರ್ಯಕ್ರಮ ನಿರೂಪಿಸಿದರು.ಭಾಷೆ- ಸಂಸ್ಕೃತಿ ಉಳಿಸಿ: ಚಂದಪ್ಪ ಹಕ್ಕಿ
ಸಮ್ಮೇಳನದ ಸರ್ವಾಧ್ಯಕ್ಷ ಚಂದಪ್ಪ ಹಕ್ಕಿ ಮಾತನಾಡಿ, ಚುಟುಕು ಸಾಹಿತ್ಯವು ಕೇವಲ ಮನರಂಜನೆಯ ಪ್ರಕಾರವಲ್ಲ; ಅದು ಸಮಾಜವನ್ನು ಎಚ್ಚರಿಸುವ, ತಪ್ಪುಗಳನ್ನು ತಿದ್ದುವ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಾಹಿತ್ಯಿಕ ಶಕ್ತಿಯಾಗಿದೆ. ಸಾಹಿತ್ಯ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದರು.