ನರಗುಂದದಲ್ಲಿ ಬೆಳೆ ಕಟಾವಿಗೆ ಕೃಷಿ ಕಾರ್ಮಿಕರ ಕೊರತೆ

| Published : Mar 04 2025, 12:31 AM IST

ಸಾರಾಂಶ

ಪ್ರಸಕ್ತ ವರ್ಷ ಹಿಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಕಟಾವು ಮಾಡಲು ಕೃಷಿ ಕೂಲಿ ಕಾರ್ಮಿಕರು ಸಿಗದೇ ರೈತರಿಗೆ ದಿಕ್ಕು ದೋಚದಾಗಿದೆ.

ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದಪ್ರಸಕ್ತ ವರ್ಷ ಹಿಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಕಟಾವು ಮಾಡಲು ಕೃಷಿ ಕೂಲಿ ಕಾರ್ಮಿಕರು ಸಿಗದೇ ರೈತರಿಗೆ ದಿಕ್ಕು ದೋಚದಾಗಿದೆ.

ತಾಲೂಕಿನಲ್ಲಿ ಈಗ ಕಡಲೆ, ಗೋದಿ, ಜೋಳದ ಸುಗ್ಗಿ ನಡೆಯುತ್ತಿದೆ. ಗೋಧಿ ಹೊಟ್ಟು, ಜೋಳದ ಮೇವು ಜಾನುವಾರುಗಳ ಪ್ರಮುಖ ಆಹಾರವಾಗಿದೆ. ಕೃಷಿ ಕೂಲಿ ಕಾರ್ಮಿಕರಿಂದ ಈ ಬೆಳೆಯನ್ನು ಕಟಾವು ಮಾಡಿಸಿ ಹೊಟ್ಟು, ಮೇವು ಸಂಗ್ರಹ ಮಾಡಿಕೊಳ್ಳಬೇಕೆಂದರೆ ಕಾರ್ಮಿಕರ ಕೊರತೆಯಿಂದ ಕಟಾವಿಗೆ ಬಂದ ಬೆಳೆಗಳು ಜಮೀನಿನಲ್ಲಿ ಹಾಗೆ ಉಳಿದಿವೆ.

ಹೋಳಿ ಹಬ್ಬದ ಬಳಿಕ ಮಳೆ ಶುರುವಾಗುತ್ತದೆ. ಹೀಗಾಗಿ ಬೇಗ ಬೆಳೆ ಕಟಾವು ಮಾಡಿ ಹೊಟ್ಟು, ಮೇವು ಸಂಗ್ರಹಿಸಬೇಕೆಂದು ಪಕ್ಕದ ಬಾದಾಮಿ, ರಾಮದುರ್ಗ ತಾಲೂಕಿನಿಂದ ಟಂಟಂ ವಾಹನದ ಮೂಲಕ ಹೆಚ್ಚಿನ ಕೂಲಿ ನೀಡಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಬಂದು ಕಡಲೆ, ಜೋಳ, ಗೋದಿ ಬೆಳೆ ಕಟಾವು ಮಾಡುತ್ತಿದ್ದಾರೆ.

ಬಿತ್ತನೆ ವಿವರ: 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ವಾಣಿಜ್ಯ ಬೆಳೆ ಕಡಲೆ 17050 ಹೆಕ್ಟೇರ್‌, ಜೋಳ-1370 ಹೆ, ಗೋಧಿ-1980 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ಈ ವರ್ಷ ಹಿಂಗಾರಿಗೆ ಏಕಕಾಲಕ್ಕೆ ಕಡಲೆ, ಗೋದಿ, ಜೋಳ ಬಿತ್ತನೆ ಮಾಡಿದ್ದರಿಂದ ಸದ್ಯ ಈ 3 ಬೆಳೆಗಳು ಕಟಾವಿಗೆ ಬಂದಿವೆ. ಬೆಳೆ ಕಟಾವು ಮಾಡಿಸಲು ಕೃಷಿ ಕೂಲಿ ಕಾರ್ಮಿಕರ ಕೊರತೆ ತಾಲೂಕಿನಲ್ಲಿ ಉಂಟಾಗಿದೆ ನರಗುಂದ ರೈತ ವೀರಣ್ಣ ಸೊಪ್ಪಿನ ಹೇಳಿದರು.