ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಎಲ್ಲವನ್ನೂ ಒಂದೇ ದಿನ ಬಗೆಹರಿಸಲು ಸಾಧ್ಯವಿಲ್ಲ. ಮುಖ್ಯವಾಗಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ತುಂಬಾ ಇದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ತಿಳಿಸಿದರು.೨೧ ಪ್ರಾಧ್ಯಾಪಕ ಹುದ್ದೆಗಳ ಪೈಕಿ ೨೦ ಮಂದಿ ಸೇವೆ ಸಲ್ಲಿಸುತಿದ್ದರೆ, ಸಹ ಪ್ರಾಧ್ಯಾಪಕರು ೪೪ ಮಂದಿ ಇರಬೇಕಿದ್ದು, ೪೩ ಮಂದಿ ಇದ್ದಾರೆ. ೭೦ ಮಂದಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿದ್ದು, ಈ ಪೈಕಿ ೪೦ ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೩೦ ಹುದ್ದೆಗಳು ಖಾಲಿ ಇವೆ, ಸೀನಿಯರ್ ರೆಸಿಡೆಂಟ್ ೬೬ ಹುದ್ದೆಗಳಿದ್ದು, ಕೇವಲ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರೆ, ೬೫ ಹುದ್ದೆಗಳು ಖಾಲಿ ಉಳಿದಿವೆ. ಎಲ್‌ಎಂಓ ೩ ಹುದ್ದೆಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಈ ಪೈಕಿ ಒಂದು ಹುದ್ದೆ ಖಾಲಿ ಇದೆ. ಜೂನಿರ್ಯ ರೆಸಿಡೆಂಟ್ ೮೪ ಮಂದಿಯ ಪೈಕಿ ೮೦ ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ಹುದ್ದೆಗಳು ಖಾಲಿ ಉಳಿದಿವೆ. ಇನ್ನು ಕ್ಲೀನಿಕ್ ವಿಭಾಗದಲ್ಲೂ ಸಾಕಷ್ಟು ವೈದ್ಯರ ಕೊರತೆ ಇದೆ ಎಂದು ಮಂಗಳವಾರ ಸುದ್ದಿಗಾರರಿಗೆ ವಿವರಿಸಿದರು.
ದಾದಿಯರು, ತಂತ್ರಜ್ಞರು ಸೇರಿದಂತೆ ವಿವಿಧ ವಿಭಾಗಗಳಲ್ಲೂ ಸಾಕಷ್ಟು ಹುದ್ದೆಗಳ ಕೊರತೆ ಎದುರಾಗಿದೆ. ಇದರಿಂದ ನಾವು ರೋಗಿಗಳಿಗೆ ಸಮರ್ಪಕವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಗೌರ್ನಿಂಗ್ ಕೌನ್ಸಿಲ್‌ನಲ್ಲೂ ಸಹ ಗಮನ ಸೆಳೆಯುವುದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.ಕ್ಯಾನ್ಸರ್ ಆಸ್ಪತ್ರೆ ಶೀಘ್ರ ಕಾರ್ಯಾರಂಭ:
ಕ್ಯಾನ್ಸರ್ ಆಸ್ಪತ್ರೆ ಕಟ್ಟಡಕ್ಕೆ ೫.೬೫ ಕೋಟಿ ರು. ಸಿವಿಲ್ ಕಾಮಗಾರಿಗೆ ಕೊರತೆ ಇತ್ತು. ಈಗ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಳಿಸಲಾಗುವುದು. ಯಂತ್ರೋಪಕರಣಗಳೂ ಸಹ ಆಸ್ಪತ್ರೆಗೆ ಬರಲಿದ್ದು, ಶೀಘ್ರ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು. ಆದರೆ, ಇಲ್ಲೂ ನಮಗೆ ವೈದ್ಯರು ಮತ್ತು ಸಿಬ್ಬಂದಿ ಕೊರತೆ ತುಂಬಾನೇ ಹೆಚ್ಚಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಗ್ರಂಥಾಲಯ ಕೊಠಡಿಗೆ ೩.೫ ಕೋಟಿ ರು. ಅಗತ್ಯವಿದ್ದು, ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎಂದು ವಿಶ್ವಾಸದಿಂದ ಹೇಳಿದರಲ್ಲದೇ, ಆಸ್ಪತ್ರೆ ಆವರಣದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ವಸತಿ ನಿಲಯದ ಯುಜಿಡಿ ವ್ಯವಸ್ಥೆ ಸರಿಪಡಿಸಲಾಗಿದೆ. ಹಂತ ಹಂತವಾಗಿ ಉಳಿದ ಎಲ್ಲ ಕಟ್ಟಡ ದುರಸ್ಥಿ ಕಾಮಗಾರಿಗಳನ್ನು ಸರಿಪಡಿಸಲಾಗುವುದು. ಕಟ್ಟಡದ ಅಂದ ಹದಗೆಟ್ಟಿದ್ದು, ಬಣ್ಣ ಹೊಡೆಸಲು ಕ್ರಮ ವಹಿಸಲಾಗಿದೆ ಎಂದರು.
ಬಹುಮುಖ್ಯವಾಗಿ ನಮಗೆ ಜಾಗದ ಕೊರತೆ ಇದ್ದು, ಪಕ್ಕದಲ್ಲಿರುವ ತಮಿಳು ಸ್ಲಂ ಜಾಗವನ್ನು ಆಸ್ಪತ್ರೆಗೆ ಹಸ್ತಾಂತರವಾದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡು ಸೂರ್ಪ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಉತ್ತಮ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.