ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕೂಲಿಯಾಳುಗಳ ಕೊರತೆ: ಭತ್ತ ನಾಟಿಗೆ ಸಂಕಷ್ಟ

| Published : Jul 04 2025, 11:47 PM IST

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕೂಲಿಯಾಳುಗಳ ಕೊರತೆ: ಭತ್ತ ನಾಟಿಗೆ ಸಂಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಸುಮಾರು 7000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಚುರುಕಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೌಶಲ್ಯಯುತ ಕೃಷಿ ಕೂಲಿ ಕಾರ್ಮಿಕರ ಕೊರತೆಯು ರೈತರಿಗೆ ತೀವ್ರ ಸಮಸ್ಯೆಯಾಗಿದೆ.

ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಸುಮಾರು 7000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಚುರುಕಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೌಶಲ್ಯಯುತ ಕೃಷಿ ಕೂಲಿ ಕಾರ್ಮಿಕರ ಕೊರತೆಯು ರೈತರಿಗೆ ತೀವ್ರ ಸಮಸ್ಯೆಯಾಗಿದೆ.

ಕೃಷಿ ಚಟುವಟಿಕೆಗಳಿಗೆ, ವಿಶೇಷವಾಗಿ ನಾಟಿ ಹಾಗೂ ಗೊಬ್ಬರ ಹಾಕಲು ನೈಪುಣ್ಯಯುತ ಕೂಲಿಕಾರ್ಮಿಕರ ಅಗತ್ಯವಿರುವುದರಿಂದ, ರೈತರು ಬಾಗಲಕೋಟೆ, ಬಿಜಾಪುರ ಮತ್ತು ಒಡಿಶಾ ಸೇರಿ ವಿವಿಧ ಪ್ರದೇಶಗಳಿಂದ ಕೂಲಿಕಾರ್ಮಿಕರನ್ನು ತರಿಸಿಕೊಳ್ಳುವ ಅನಿವಾರ್ಯತೆಗೆ ತುತ್ತಾಗಿದ್ದಾರೆ.ಹೆಚ್ಚಿದ ವೇತನ:

ಕೂಲಿಯಾಳುಗಳ ವೇತನ ದಿನಕ್ಕೆ 600 ರು.ನಿಂದ 800 ರು. ವರೆಗೆ ಏರಿಕೆಯಾಗಿದೆ. ಆದರೆ ಕೃಷಿ ಋತುವಿನಲ್ಲಿ ಲಭ್ಯತೆ ಕಡಿಮೆಯಿರುವ ಕಾರಣ, ಗದ್ದೆಗಳ ಒಂದು ಭಾಗವನ್ನು ಹಡಿಲು ಬಿಟ್ಟಿರುವ ಘಟನೆಗಳು ಕಂಡು ಬರುತ್ತಿವೆ.ಇನ್ನು ಕೆಲ ರೈತರು ಭತ್ತಕ್ಕೆ ಬದಲಾಗಿ ಅಡಕೆ, ಬಾಳೆ ಹಾಗೂ ಕೊಕ್ಕೊ ಗಿಡಗಳನ್ನು ನೆಟ್ಟು ತೋಟಗಾರಿಕೆಗೆ ಒತ್ತು ನೀಡುತ್ತಿದ್ದಾರೆ.

ಕಾರ್ಕಳ-ಹೆಬ್ರಿಯ ಎತ್ತರದ ಪ್ರದೇಶಗಳಲ್ಲಿ ಟ್ರ್ಯಾಕ್ಟರ್ ಅಥವಾ ಇತರ ನಾಟಿ ವಾಹನಗಳ ಸಂಚಾರ ಕಷ್ಟವಾಗಿರುವುದರಿಂದ, ಟಿಲ್ಲರ್ ಬಳಸಿ ಉಳುಮೆ ಮಾಡಲಾಗುತ್ತಿದೆ. ಆದರೆ ಸ್ಥಳೀಯ ಹಳ್ಳಿಯ ಮಹಿಳೆಯರು ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳದಿರುವುದು ಮತ್ತೊಂದು ಸವಾಲಾಗಿದೆ.ಯುವ ಸಮುದಾಯ ದೂರ:

ಕರಾವಳಿ ಪ್ರದೇಶದ ಯುವಕರು ಕೃಷಿಯಿಂದ ದೂರ ಸರಿಯುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆ. ಓದು ಮುಗಿಸಿದ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರು ಮುಂತಾದ ನಗರಗಳಿಗೆ ವಲಸೆ ಹೋಗುವ ಪ್ರಮಾಣ ಹೆಚ್ಚಾಗಿದೆ. ಮನೆಗಳಲ್ಲಿರುವ ಹಿರಿಯರು ಆರೋಗ್ಯದ ಸಮಸ್ಯೆಯಿಂದ ಕೃಷಿಯಲ್ಲಿ ತೊಡಗಲಾಗುತ್ತಿಲ್ಲ.2025ರ ತೋಟಗಾರಿಕಾ ಇಲಾಖೆ ಪ್ರಕಾರ, ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳು ಒಟ್ಟು 1,07,586 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ 32,800 ಹೆಕ್ಟೇರ್ ಅರಣ್ಯ ಪ್ರದೇಶ, 28,227 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಉಪಯೋಗಕ್ಕೆ ಸದ್ಯದಲ್ಲಿದೆ. ಅಡಕೆ-8860 ಹೆಕ್ಟೇರ್, ತೆಂಗು-6600 ಹೆಕ್ಟೇರ್, ಗೇರು -777 ಹೆಕ್ಟೇರ್, ರಬ್ಬರ್ -2000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಗದ್ದೆ ಕೆಲಸಕ್ಕಾಗಿ ನಾವು ಬಾಗಲಕೋಟೆ, ದಾವಣಗೆರೆಯ ಕೂಲಿಯಾಳುಗಳನ್ನು ಆಶ್ರಯಿಸಬೇಕಾಗಿದೆ. ಸ್ಥಳೀಯರು ಕೆಲಸಕ್ಕೆ ಬರುತ್ತಿಲ್ಲ. ಯುವ ಜನತೆ ಕೆಲಸಕ್ಕಾಗಿ ಮುಂಬೈ, ಬೆಂಗಳೂರನ್ನು ನೆಚ್ಚಿಕೊಂಡಿದ್ದಾರೆ. ಮೂಲ ಕೃಷಿಯನ್ನೇ ಮರೆತುಬಿಟ್ಟಿದ್ದಾರೆ.

। ಪ್ರಕಾಶ್ ಹಿರ್ಗಾನ ಮುನಿಯಾಲು, ಕೃಷಿಕ