ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ರಾಜ್ಯಾದ್ಯಂತ ಇರುವ ಪದವಿ ಪೂರ್ವ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಒದಗಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಪಿಯು ಪ್ರಥಮ ಹಾಗೂ ದ್ವಿತೀಯ ವರ್ಷದ ಕೋರ್ಸ್‌ಗೆ ಪ್ರವೇಶ ಪಡೆದಿರುವ ರಾಜ್ಯದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪುಸ್ತಕಗಳಿಲ್ಲದೇ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹೊಸ ಶೈಕ್ಷಣಿಕ ವರ್ಷಕ್ಕೆ ಪಿಯು ಕಾಲೇಜುಗಳು ಪುನರಾರಂಭಗೊಂಡು ಐದಾರು ವಾರ ಕಳೆದಿವೆ. ಆದರೆ, ಪಠ್ಯಪುಸ್ತಕಗಳ ಕೊರ ತೆ ಹಿನ್ನೆಲೆಯಲ್ಲಿ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ಹೊಡೆತ ಬಿದ್ದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗುವವರ ಪ್ರಮಾಣ ಹೆಚ್ಚಿಸುವ ಸರ್ಕಾರದ ಉತ್ಸಾಹದಿಂದಾಗಿ ಪಿಯು ಕಾಲೇಜುಗಳಿಗೆ ಭಾರೀ ಬೇಡಿಕೆ ಬಂದಿದೆ. ಅದೇ ಬೇಡಿಕೆಯಂತೆ ಪಠ್ಯಪುಸ್ತಕಗಳ ಪೂರೈಕೆ ಕೊರತೆಯಿಂದ ವಿದ್ಯಾರ್ಥಿಗಳು ನಲಗುವಂತಾಗಿದೆ.ಕಳೆದ ಎರಡು ವರ್ಷಗಳಿಂದ ಹಲವು ವಿಷಯಗಳ ಪಠ್ಯಪುಸ್ತಕಗಳ ಮುದ್ರಣವನ್ನು ಇಲಾಖೆ ನಿಲ್ಲಿಸಿದೆ. ನೇರವಾಗಿ ಇಲಾಖೆಯು ಪಠ್ಯಪುಸ್ತಕ ವಿತರಿಸುತ್ತಿಲ್ಲ. ಅಂಗಡಿಗಳಲ್ಲಿ ಲಭ್ಯವಾಗುವ ಪುಸ್ತಕ ಖರೀದಿಸಿ ವಿದ್ಯಾರ್ಥಿಗಳು ಓದಬೇಕಿದೆ. ಪಿಯುಸಿ ಪ್ರಥಮ ಮತ್ತು ದ್ವಿತೀಯ ಕಲಾ ವಿಭಾಗದ ಭಾಷಾ ಪುಸ್ತಕ, ಪಿಯು ದ್ವಿತೀಯ ಹಿಂದಿ, ಪಿಯು ಪ್ರಥಮ ಮತ್ತು ದ್ವಿತೀಯ ಸಂಸ್ಕೃತ, ಪಿಯು ವಾಣಿಜ್ಯ ವಿಷಯಗಳು, ಪಿಯುಸಿ ಪ್ರಥಮ ಮತ್ತು ದ್ವಿತೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಪುಸ್ತಕಗಳ ಕೊರತೆ ಉಂಟಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಕೆಲವು ಅಂಗಡಿಗಳು ಹಳೆಯ ದಾಸ್ತಾನು ಮಾರಾಟ ಮಾಡಿದರೆ, ಕೆಲವು ವಿದ್ಯಾರ್ಥಿಗಳು ಹಿರಿಯರಿಂದ ಎರವಲು ಪಡೆದಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕಗಳು ಲಭ್ಯವಾಗುತ್ತಿಲ್ಲ ಎಂದು ಪಿಯು ಕಾಲೇಜಿನ ಪ್ರಾಚಾರ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.
ಐಚ್ಛಿಕ ವಿಷಯ ಬೋಧಿಸುವ ಶಿಕ್ಷಕರು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಮುದ್ರಿಸಿದ ಪುಸ್ತಕ ಉಲ್ಲೇಖಿಸುತ್ತಿದ್ದರೆ, ಪಠ್ಯಪುಸ್ತಕಗಳಿಲ್ಲದೆ ಭಾಷೆ ಕಲಿಸುವುದು ಕಷ್ಟಕರವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಸಹ ಪಡೆಯದ ಕಾರಣ ತೀವ್ರ ತೊಂದರೆಗೀಡಾಗಿದ್ದಾರೆ.ಪಿಯುಸಿ ವಿದ್ಯಾರ್ಥಿ ವೃತ್ತಿಜೀವನದಲ್ಲಿ ಪ್ರಮುಖ ಹಂತವಾಗಿದೆ. ಜತೆಗೆ ಇದು ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ನಿರ್ಧರಿಸುತ್ತದೆ. ವರ್ಷದ ಶೈಕ್ಷಣಿಕ ಮತ್ತು ಪಠ್ಯ ಚಟುವಟಿಕೆಗಳ ವೇಳಾಪಟ್ಟಿಯನ್ನು ಮೊದಲೇ ನೀಡಿ ಎಲ್ಲ ಕಾಲೇಜುಗಳು ಪಾಲಿಸಬೇಕೆಂದು ಪಟ್ಟು ಹಿಡಿದಿರುವ ಪಿಯು ಶಿಕ್ಷಣ ಇಲಾಖೆಯು ಸಕಾಲದಲ್ಲಿ ಪಠ್ಯಪುಸ್ತಕ ಪೂರೈಕೆ ಮಾಡುವಲ್ಲಿ ಅದೇ ಗಂಭೀರತೆ ತೋರುತ್ತಿಲ್ಲ. ಇದು ನಿಷ್ಠುರ ಧೋರಣೆ ಎಂದು ಶಿಕ್ಷಣ ತಜ್ಞ ಚಿದಂಬರ ಜೋಶಿ ಹೇಳಿದರು.
ಪಿಯು ಇಲಾಖೆ ಹೊರಡಿಸಿರುವ ವೇಳಾಪಟ್ಟಿಯ ಪ್ರಕಾರ, ಕಾಲೇಜುಗಳು ಆ. 10ರಿಂದ 13ರ ವರೆಗೆ ಮೊದಲ ಪರೀಕ್ಷೆ ನಡೆಸಬೇಕು ಮತ್ತು ಶಿಕ್ಷಕರು ಪಠ್ಯಕ್ರಮದ ಶೇ. 30ರಷ್ಟು ಪಠ್ಯಕ್ರಮ ಮುಗಿಸಬೇಕು. ಮಧ್ಯಾವಧಿ ಪರೀಕ್ಷೆಗಳು ಅ. 21ರಿಂದ ನ. 6ರ ವರೆಗೆ, ಎರಡನೇ ಪರೀಕ್ಷೆ ಡಿಸೆಂಬರ್ 19ರಿಂದ 23ರ ವರೆಗೆ ನಡೆಯಲಿವೆ. ಪಿಯುಸಿ ಪ್ರಥಮ ವಾರ್ಷಿಕ ಪರೀಕ್ಷೆ ಪ್ರಾರಂಭಿಸಲು ತಾತ್ಕಾಲಿಕ ದಿನಾಂಕಗಳು ಫೆ. 15 ಮತ್ತು ಪಿಯುಸಿ ದ್ವಿತೀಯಕ್ಕೆ ಮಾರ್ಚ್ 3 ಆಗಿದೆ. ಪಠ್ಯಪುಸ್ತಕಗಳ ಅನುಪಸ್ಥಿತಿಯಲ್ಲಿ ಪಠ್ಯಕ್ರಮವನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಪೂರ್ಣಗೊಳಿಸುವುದು ತುಂಬಾ ಕಷ್ಟಕರವಾಗಲಿದೆ. ಇಷ್ಟಾಗಿಯೂ ಕಳಪೆ ಫಲಿತಾಂಶಕ್ಕೆ ಶಿಕ್ಷಕರನ್ನು ದೂಷಿಸಲಾಗುತ್ತಿದೆ ಎಂದು ಧಾರವಾಡದ ಪ್ರತಿಷ್ಟಿತ ಪಿಯು ಕಾಲೇಜಿನ ಉಪನ್ಯಾಸಕರೊಬ್ಬರು ತಮ್ಮ ಅಳಲು ತೋಡಿಕೊಂಡರು.ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪಠ್ಯಪುಸ್ತಕಗಳ ಕೊರತೆ ಉಂಟಾಗಿದ್ದು ಗಮನಕ್ಕೆ ಬಂದಿದೆ. ಈ ಕುರಿತು ಇಲಾಖೆ ಚರ್ಚೆ ನಡೆಸಿ ಕೊರತೆ ನೀಗಿಸುವ ಪ್ರಯತ್ನದಲ್ಲಿದೆ. ಪಿಯು ಪುಸ್ತಕಗಳಿಗೆ ಲಾಭಾಂಶ ಕಡಿಮೆ ಇರುವ ಕಾರಣ ಪುಸ್ತಕ ಅಂಗಡಿಗಳ ಮಾಲೀಕರು ಬೇಡಿಕೆ ಬಂದಂತೆ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಪುಸ್ತಕಗಳ ವಿತರಣೆ ವಿಳಂಬವಾಗುತ್ತಿದೆ ಎಂದು ಡಿಡಿಪಿಯು ಸುರೇಶ ಕೆ.ಪಿ. ತಿಳಿಸಿದ್ದಾರೆ.