ಕೆಆರ್ ಎಸ್ ಬೃಂದಾವನದಲ್ಲಿ ಮಹಿಳಾ ಸಿಬ್ಬಂದಿ ಕೊರತೆ

| Published : Sep 24 2024, 01:52 AM IST

ಸಾರಾಂಶ

ಮಹಿಳಾ ಪ್ರವಾಸಿಗರ ತಪಾಸಣಾ ಕಾರ್ಯವನ್ನು ಮಾಡಲು ಹಗಲು ಪಾಳಿಯಲ್ಲಿ ಕನಿಷ್ಠ 10 ಮಹಿಳಾ ಸಿಬ್ಬಂದಿ ಅವಶ್ಯಕತೆ ಇದೆ. ಆದರೆ, ಇದುವರೆಗೂ ಕೇವಲ 7 ಮಂದಿ ಸಿಬ್ಬಂದಿ ಪರಿಶೀಲನಾ ಕಾರ್ಯ ನಿರ್ವಹಿಸುತ್ತಿದ್ದರು. ಈಗ 6 ಮಂದಿ ಮಹಿಳಾ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದರಿಂದ ಈ ಕಾರ್ಯವನ್ನು ಕೇವಲ ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಮಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿಶ್ವ ವಿಖ್ಯಾತ ಕೆಆರ್‌ಎಸ್ ಬೃಂದಾವನ ವೀಕ್ಷಣೆಗೆ ಆಗಮಿಸುವ ಸಾವಿರಾರು ಪ್ರವಾಸಿಗರ ತಪಾಸಣೆ ಕಾರ್ಯವನ್ನು ಕೇವಲ ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುವಂತಾಗಿದೆ.

ಕೆಆರ್‌ಎಸ್ ಬೃಂದಾವನ ಭದ್ರತೆಯನ್ನು ರಾಜ್ಯ ಪೊಲೀಸ್ ಇಲಾಖೆ (ಕೆಎಸ್‌ಐಎಸ್‌ಎಫ್) ಕೈಗಾರಿಕಾ ಭದ್ರತಾ ಪಡೆ ಘಟಕ ಕಳೆದ 2016 ರಿಂದ ನೋಡಿಕೊಳ್ಳುತ್ತಿದೆ. ಪ್ರವಾಸಿಗರು ಬೃಂದಾವನ ವೀಕ್ಷಣೆಗೆ ಟಿಕೆಟ್ ಪಡೆದು ಎರಡು ಮುಖ್ಯ ದ್ವಾರಗಳಿಂದ ಪ್ರವೇಶ ಮಾಡುತ್ತಾರೆ.

ಮಹಿಳಾ ಪ್ರವಾಸಿಗರ ತಪಾಸಣಾ ಕಾರ್ಯವನ್ನು ಮಾಡಲು ಹಗಲು ಪಾಳಿಯಲ್ಲಿ ಕನಿಷ್ಠ 10 ಮಹಿಳಾ ಸಿಬ್ಬಂದಿ ಅವಶ್ಯಕತೆ ಇದೆ. ಆದರೆ, ಇದುವರೆಗೂ ಕೇವಲ 7 ಮಂದಿ ಸಿಬ್ಬಂದಿ ಪರಿಶೀಲನಾ ಕಾರ್ಯ ನಿರ್ವಹಿಸುತ್ತಿದ್ದರು. ಈಗ 6 ಮಂದಿ ಮಹಿಳಾ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದರಿಂದ ಈ ಕಾರ್ಯವನ್ನು ಕೇವಲ ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಮಾಡುವಂತಾಗಿದೆ.

ಸೆ.20 ರಂದು ಕೆಎಸ್‌ಐಎಸ್‌ಎಫ್ ಎರಡನೇ ಬೆಟಾಲಿಯನ್ ಕಮಾಂಡಂಟ್‌ ರವರು 5 ವರ್ಷ ಪೂರೈಸಿದ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿದೆ. 7 ಮಹಿಳಾ ಸಿಬ್ಬಂದಿಯಲ್ಲಿ 6 ಮಹಿಳಾ ಸಿಬ್ಬಂದಿಯನ್ನು ಮೈಸೂರು ಕೇಂದ್ರ ಕಾರಾಗೃಹ ಹಾಗೂ ಮೈಸೂರು ವಿಮಾನ ನಿಲ್ದಾಣಕ್ಕೆ ವರ್ಗಾವಣೆಗೊಳಿಸಿದ್ದಾರೆ.

ಆದರೆ, ಕೆಎಸ್‌ಐಎಸ್‌ಎಫ್ ಭದ್ರತಾ ಘಟಕಕ್ಕೆ ಯಾವುದೇ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸದೆ ಕೆಆರ್‌ಎಸ್‌ನಲ್ಲಿ ಕೇವಲ ಒಬ್ಬ ಮಹಿಳಾ ಸಿಂಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಬೆಳಗ್ಗೆ 8 ರಿಂದ ರಾತ್ರಿ 9ರವರೆಗೆ ಓರ್ವ ಮಹಿಳಾ ಸಿಬ್ಬಂದಿಯಿಂದ ಮಹಿಳಾ ತಪಾಸಣೆ ಮಾಡಿಸಬೇಕಾಗಿದೆ.

ಇರುವ ಓರ್ವ ಮಹಿಳಾ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಊಟ, ಶೌಚಾಲಯ ಸೇರಿದಂತೆ ಇತರೆ ಕೆಲಸಕ್ಕೂ ಹೋಗದೆ ಸಮಸ್ಯೆ ಉಂಟಾಗಿದೆ. ತೀವ್ರ ಕರ್ತವ್ಯದಿಂದ ಬಳಲಿದ್ದಾರೆ. ಈ ಬಗ್ಗೆ ಸ್ವಲ್ಪವೂ ಭದ್ರತಾ ಕರ್ತವ್ಯದ ಕುರಿತು ಮುಂಜಾಗ್ರತಾ ವಹಿಸದೆ ಅಥವಾ ಬದಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸದೆ ತೀವ್ರ ಭದ್ರತಾ ಲೋಪ ಉಂಟಾಗಿದೆ.

ಏಕಾಏಕಿ 6 ಮಹಿಳಾ ಸಿಬ್ಬಂದಿಯನ್ನು ವರ್ಗಾವಣೆ ಗೊಳಿಸಿರುವ ಎರಡನೇ ಬೆಟಾಲಿಯನ್ ಕಮಾಂಡಂಟ್ ರವರ ಬೇಜವಾಬ್ದಾರಿ ತನದಿಂದ ಭದ್ರತಾ ಕರ್ತವ್ಯಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

ಕೆಲವೇ ದಿನಗಳಲ್ಲಿ ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ನಡೆಯುವ ಕಾರಣ ಪ್ರತಿದಿನ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುವುದರಿಂದ ಒಬ್ಬ ಮಹಿಳಾ ಸಿಬ್ಬಂದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಶೀಘ್ರ ಕೆಎಸ್‌ಐಎಸ್‌ಎಫ್ ಅಧಿಕಾರಿಗಳ ಇತರೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.