ಸಾರಾಂಶ
ಈ ಹಿಂದೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯಕ್ಕೆ ಬರುವ ಭಕ್ತರು ಉಪ್ಪಿನಂಗಡಿಯ ಕುಮಾರಧಾರಾ ಸೇತುವೆ ದಾಟಿದಾಕ್ಷಣ ಬಸ್‌ನಿಂದ ಇಳಿದು ಹೆದ್ದಾರಿಗಿದ್ದ ಸಂಪರ್ಕ ರಸ್ತೆಯ ಮೂಲಕ ದೇವಾಲಯದತ್ತ ಸಾಗುತ್ತಿದ್ದರು. ಇದೀಗ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲಿದ್ದ ಸಂಪರ್ಕ ರಸ್ತೆಯು ಮುಚ್ಚಲ್ಪಟ್ಟಿದೆ. ಹೆದ್ದಾರಿಯು ಮೊದಲಿಗಿಂತ ಹೆಚ್ಚು ಎತ್ತರಿಸಲ್ಪಟ್ಟಿದೆ.
ಕುಮಾರಾಧಾರಾ ಸೇತುವೆ ಬಳಿ ರಸ್ತೆ ಎತ್ತರಿಸಿದ ಹಿನ್ನೆಲೆ । 10 ಅಡಿಯಿಂದ ಕೆಳಗಿಳಿಯಲು ಅಪಾಯಕಾರಿ ಪ್ರಯತ್ನ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಹೆದ್ದಾರಿ ಅಗಲೀಕರಣದ ಕಾಮಗಾರಿಯಿಂದಾಗಿ ಕುಮಾರಾಧಾರಾ ಸೇತುವೆ ಬಳಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಸಾಗುವ ರಸ್ತೆಯು ಮುಚ್ಚಲ್ಪಟ್ಟಿದೆ. ಇದರ ಅರಿವಿಲ್ಲದೆ ಸೇತುವೆಯ ಬಳಿ ಬಸ್‌ನಿಂದ ಇಳಿಯುವ ಪರ ಊರಿನ ಭಕ್ತರು ಅಪಾಯಕಾರಿ ಸ್ಥಳದಿಂದ ದೇವಾಲಯಕ್ಕೆ ಹೋಗುವ ಯತ್ನ ಮಾಡುತ್ತಿದ್ದಾರೆ. ಇದು ಕಳವಳಕಾರಿಯಾಗಿದ್ದು, ಸಂಬಂಧಪಟ್ಟವರು ಅಗತ್ಯ ವ್ಯವಸ್ಥೆ ಕಲ್ಪಿಸಬೇಕಾಗಿದೆ.ಈ ಹಿಂದೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯಕ್ಕೆ ಬರುವ ಭಕ್ತರು ಉಪ್ಪಿನಂಗಡಿಯ ಕುಮಾರಧಾರಾ ಸೇತುವೆ ದಾಟಿದಾಕ್ಷಣ ಬಸ್‌ನಿಂದ ಇಳಿದು ಹೆದ್ದಾರಿಗಿದ್ದ ಸಂಪರ್ಕ ರಸ್ತೆಯ ಮೂಲಕ ದೇವಾಲಯದತ್ತ ಸಾಗುತ್ತಿದ್ದರು. ಇದೀಗ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲಿದ್ದ ಸಂಪರ್ಕ ರಸ್ತೆಯು ಮುಚ್ಚಲ್ಪಟ್ಟಿದೆ. ಹೆದ್ದಾರಿಯು ಮೊದಲಿಗಿಂತ ಹೆಚ್ಚು ಎತ್ತರಿಸಲ್ಪಟ್ಟಿದೆ. ಈ ಬೆಳವಣಿಗೆಯ ಅರಿವಿಲ್ಲದ ಭಕ್ತರು ಮುಖ್ಯವಾಗಿ ಪರ ಊರಿನ ಭಕ್ತರು ಎಂದಿನಂತೆ ಬಸ್‌ನಲ್ಲಿ ದಾಟಿದಾಕ್ಷಣ ಇಳಿಯುತ್ತಾರೆ. ಹೀಗೆ ಇಳಿದ ಮಂದಿಗೆ ದೇವಾಲಯಕ್ಕೆ ಹೋಗುವ ದಾರಿ ಕಾಣಿಸದೆ ಕಂಡ ಕಂಡಲ್ಲಿ ಇಳಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.ಅಪಾಯಕಾರಿ ಸಾಹಸ:ವೃದ್ಧರಾದಿಯಾಗಿ ದೇವಾಲಯಕ್ಕೆಂದು ಬಂದವರು ಸೇತುವೆ ದಾಟಿ ಬಸ್‌ನಿಂದ ಇಳಿದ ಬಳಿಕ ದೇವಾಲಯಕ್ಕೆ ಹೋಗುವ ದಾರಿ ಕಾಣದೆ ಹತ್ತಿಪ್ಪತ್ತು ಅಡಿ ಎತ್ತರದ ತಡೆಗೋಡೆಯ ಸನಿಹದಲ್ಲೇ ಇಳಿಯಲು ಯತ್ನಿಸುತ್ತಾರೆ. ಈ ವೇಳೆ ಒಂದಿನಿತು ಕಾಲು ಜಾರಿದರೂ ಪ್ರಾಣಕ್ಕೆ ಅಪಾಯವುಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟವರು ಈ ಬಗ್ಗೆ ಅಗತ್ಯ ಕ್ರಮ ಜರುಗಿಸಬೇಕಾಗಿದೆ.ಹೂತು ಹೋಗಿದ್ದ ಮಹಿಳೆಯರು:ಕಳೆದ ತಿಂಗಳು ಇಲ್ಲಿನ ಮೊದಲಿದ್ದ ಸಂಪರ್ಕ ರಸ್ತೆಯನ್ನು ಬಳಸುವ ಸಲುವಾಗಿ ಬಸ್‌ನಿಂದ ಇಳಿದಿದ್ದ ಮಹಿಳೆಯರು, ಕಾಮಗಾರಿ ನಿರತ ಸ್ಥಳದಿಂದ ದಾಟಲು ಯತ್ನಿಸಿ ಮಣ್ಣಿನಲ್ಲಿ ಹೂತು ಹೋಗಿದ್ದು, ಜೆಸಿಬಿ ಸಹಾಯದಿಂದ ಅವರನ್ನು ಮೇಲೆತ್ತಲಾಗಿತ್ತು. ಈ ಘಟನೆ ಬಳಿಕ ಮಣ್ಣು ಮೃದುವಾಗಿದ್ದ ಸ್ಥಳದಲ್ಲಿ ಜನರ ಸಂಚಾರವನ್ನು ನಿಯಂತ್ರಿಸಲಾಗಿತ್ತು.----------
ವಯಸ್ಸಾದ ಭಕ್ತರು ಈ ಹಿಂದೆ ಇದ್ದ ಸುಲಭವಾಗಿ ಸಂಪರ್ಕ ಸಾಧಿಸುವ ರಸ್ತೆಯನ್ನು ಅಂದಾಜಿಸಿ ಕುಮಾರಧಾರಾ ಸೇತುವೆ ದಾಟಿದಾಕ್ಷಣ ಬಸ್‌ನಿಂದ ಇಳಿಯುತ್ತಾರೆ. ಬಳಿಕ ಯಾವುದೇ ರಸ್ತೆ ಇಲ್ಲದನ್ನು ತಿಳಿದು ಕಂಡಕಂಡಲ್ಲಿ ಇಳಿಯಲು ಪ್ರಯತ್ನಿಸುತ್ತಾರೆ. ಪ್ರಸಕ್ತ ಈ ಭಾಗದಲ್ಲಿ ಯಾವುದೇ ರೀತಿಯಲ್ಲಿ ಸುರಕ್ಷಿತವಾಗಿ ಇಳಿಯುವ ವ್ಯವಸ್ಥೆ ಇಲ್ಲದಿರುವುದರಿಂದ ವೃದ್ಧ ಭಕ್ತರು ಎದ್ದು ಬಿದ್ದು ಸಾಗುವ ದೃಶ್ಯ ಕಳವಳವನ್ನು ಮೂಡಿಸುವಂತಿದೆ. ಈ ಕಾರಣಕ್ಕೆ ತಾತ್ಕಾಲಿಕ ನೆಲೆಯಲ್ಲಿಯಾದರೂ ಸುರಕ್ಷಿತವಾಗಿ ಹೆದ್ದಾರಿಯಿಂದ ದೇವಾಲಯದ ರಸ್ತೆಗೆ ಇಳಿಯುವ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಹಾಗೆಯೇ ಸುರಕ್ಷಿತ ದಾರಿಯ ಬಗ್ಗೆ ಅರಿವು ಮೂಡಿಸುವ ಫಲಕವನ್ನು ಹಾಕಬೇಕು.। ಸ್ವರ್ಣೇಶ್ ಗಾಣಿಗ, ಉದ್ಯಮಿ--------------
ಪ್ರಸಕ್ತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಮ್ಮ ನಿರೀಕ್ಷೆಯ ವೇಗಕ್ಕೆ ತಕ್ಕಂತೆ ಕಾಮಗಾರಿ ನಡೆಸಲಾಗುತ್ತಿಲ್ಲ. ಆದಾಗ್ಯೂ ಹೆದ್ದಾರಿಯಿಂದ ದೇವಾಲಯದ ರಸ್ತೆಗೆ ಸಂಪರ್ಕ ಕಲ್ಪಿಸುವ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಅತೀ ಎತ್ತರದ ತಡೆಗೋಡೆಯ ಬಳಿಯಿಂದ ಜನರು ಇಳಿಯಲು ಯತ್ನಿಸುವ ದೃಶ್ಯ ಕಳವಳವನ್ನು ಮೂಡಿಸಿದೆ. ಜನರೂ ಕೂಡ ವಿವೇಚನೆ ಬಳಸಿ ಅಪಾಯಕಾರಿ ಸ್ಥಳದತ್ತ ಸಾಗಬಾರದು.। ರಘುನಾಥ ರೆಡ್ಡಿ, ಹೆದ್ದಾರಿ ಅಗಲೀಕರಣದ ಕಾಮಗಾರಿ ನಿರತ ಎಂಜಿನಿಯರ್