ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರಿದ್ದಾರೆ. ಆದ್ದರಿಂದ ಶಿಕ್ಷಣ ಪಡೆದು ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರಿದ್ದಾರೆ. ಆದ್ದರಿಂದ ಶಿಕ್ಷಣ ಪಡೆದು ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ಜನರು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ಅವರಂತೆ ನಿರಂತರ ಹಾಗೂ ಕಠಿಣ ಪರಿಶ್ರಮ ಅಗತ್ಯ. ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಮೇಲೆ ಬರಲು ಶ್ರಮ ವಹಿಸಬೇಕು. ಪರಿಶ್ರಮ ಇಲ್ಲದೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಅಸಾಧ್ಯ. ಡಾ. ಅಂಬೇಡ್ಕರ್ ಅವರ ಗುರಿ, ಉದ್ದೇಶ, ಆಶಯ, ಸಾಧನೆಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಮುನ್ನಡೆಯಬೇಕು. ಪ್ರತಿ ದಿನವೂ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದು ಸಲಹೆ ನೀಡಿದರು.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪ್ರತಿಫಲವಾಗಿ ನಾವು ವಿದ್ಯೆ, ಉದ್ಯೋಗ ಪಡೆದು, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್. ಅಂಬೇಡ್ಕರ್ ಅವರು ಜಾತಿ, ಧರ್ಮ ಮೀರಿ ಬೆಳೆದ ಅಪ್ರತಿಮ ಪ್ರತಿಭೆ. ಅಂಬೇಡ್ಕರ್ ಎಂದರೆ ಐಕಾನ್ ಹಾಗೂ ಐಡಿಯಾಲಜಿ ಎಂದರೆ ಅತಿಶಯೋಕ್ತಿಯಲ್ಲ. ಆ ನಿಟ್ಟಿನಲ್ಲಿ ಅವರ ಸಿದ್ದಾಂತ, ದೂರದೃಷ್ಟಿ ಮುಂದೆಯೂ ಪ್ರಸ್ತುತವಾಗಿರುತ್ತದೆ ಎಂದು ಹೇಳಿದರು.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಎಚ್.ಕೆ. ವೀರಣ್ಣ ಗೌಡ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ಎಸ್. ರಾವಣಿಕರ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಎಂದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ರಾಷ್ಟ್ರದ ಬೆಳವಣಿಗೆ ಬಗ್ಗೆ ಅವಲೋಕನ ಮಾಡಬೇಕಿದೆ ಎಂದು ಡಾ. ಸಂದೀಪ್ ಹೇಳಿದರು.ಮಹಾ ಬೋಧಿ ಸಂಘದ ಅಧ್ಯಕ್ಷ ಮೋಹನ್ ಮೌರ್ಯ ಹಲವು ದಶಕಗಳ ಕನಸು ನನಸಾಗುತ್ತಿದ್ದು, ಆ ದಿಸೆಯಲ್ಲಿ ಶಾಸಕರು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಜಾಗ ನೀಡಿ, ಪ್ರತಿಮೆ ನಿರ್ಮಾಣ ಕಾರ್‍ಯ ನಡೆಯುತ್ತಿದೆ. ಇದಕ್ಕೆ ಸಹಕರಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಲಾವಿದ ಈ. ರಾಜು ಮತ್ತು ತಂಡದವರು ಅಂಬೇಡ್ಕರ್ ಕುರಿತು ಹಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನದ ಚೆಕ್ ಅನ್ನು ಇದೇ ಸಂದರ್ಭ ನೀಡಲಾಯಿತು.ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಗ್ಯಾರಂಟಿ ಯೋಜನೆ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಪ್ರಮುಖರಾದ ಟಿ.ಪಿ. ರಮೇಶ್, ಜನಾರ್ದನ, ಎಚ್.ಎಲ್. ದಿವಾಕರ, ಪ್ರೇಮ ಕುಮಾರ್, ನಗರಸಭೆ ಸದಸ್ಯರಾದ ಸತೀಶ್, ಚಂದ್ರಶೇಖರ್, ಮುತ್ತುರಾಜು, ಜುಲೇಕಾಬಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಸೀಲ್ದಾರ್ ಶ್ರೀಧರ, ಪ್ರಮುಖರಾದ ದೀಪಕ್ ಪೊನ್ನಪ್ಪ, ಪ್ರೇಮ ಕೃಷ್ಣ, ಸಿದ್ದೇಶ್, ಯಶೋಧ, ವಿನಯ ಕುಮಾರ್, ದೇವರಾಜು, ಗಣೇಶ್, ಸುದರ್ಶನ, ಕುಮಾರ, ಸುಧೀರ್, ವಾಸು, ಸಂದೀಪ್, ಪಾಲಾಕ್ಷ, ವೀರೇಂದ್ರ, ಕಿರಣ್, ಮುತ್ತಪ್ಪ, ಹರೀಶ್, ಎಸ್. ಹೊನ್ನೆಗೌಡ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಸ್ವಾಗತಿಸಿ, ರಮೇಶ್ ನಿರೂಪಿಸಿದರು. ಬಾಲಕೃಷ್ಣ ರೈ ವಂದಿಸಿದರು.ಸಭಾ ಕಾರ್‍ಯಕ್ರಮಕ್ಕೂ ಮೊದಲು ನಗರದ ಕಾವೇರಿ ಕಲಾ ಕ್ಷೇತ್ರ ಬಳಿಯಿಂದ ಗಾಂಧಿ ಭವನದವರೆಗೆ ಮೆರವಣಿಗೆ ನಡೆಯಿತು. ಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾಧಿಕಾರಿ ಸೋಮಶೇರ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ನಗರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು, ಪ್ರಮುಖರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ ಹಾಗೂ ಕಂಸಾಳೆ ಕಲಾ ತಂಡಗಳು ಪಾಲ್ಗೊಂಡು ಗಮನ ಸೆಳೆದರು.ಅಸ್ಪೃಶ್ಯತೆ ಹಾಗೂ ಅಸಮಾನತೆಯ ನೋವು ಅನುಭವಿಸಿ, ಮೇಲು-ಕೀಳು, ಬಡವ-ಬಲ್ಲಿದ, ಶ್ರೇಷ್ಠ-ಕನಿಷ್ಠ ಹೀಗೆ ಹಲವು ವಿಭಿನ್ನತೆ ಹೊಂದಿರುವ ಸಮಾಜದಲ್ಲಿ ಸಂವಿಧಾನದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಶ್ರಮಿಸಿದ್ದಾರೆ. ಇಂತಹ ಮಾಹಾನ್ ಚೇತನ ಅಂಬೇಡ್ಕರ್ ಅವರನ್ನು ಎಷ್ಟು ಸ್ಮರಿಸಿದರೂ ಸಾಲದು.
-ಎಸ್.ಜೆ. ಸೋಮಶೇಖರ್ಕೊಡಗು ಜಿಲ್ಲಾಧಿಕಾರಿ