ಅಭಿವೃದ್ಧಿ ವಿಷಯದಲ್ಲಿ ಜಾತಿ ತರಬಾರದು: ಕುಪ್ಪಳ್ಳಿ

| Published : Feb 19 2025, 12:48 AM IST

ಸಾರಾಂಶ

ಕಾಂಗ್ರೆಸ್ ಮುಖಂಡರು ಜಾತಿ ವಿಷಯ ತಂದು ದ್ವೇಷದ ರಾಜಕಾರಣಕ್ಕೆ ಕೈ ಹಾಕಿದ್ದಾರೆ

ಶಿರಸಿ: ಹೋರಾಟ, ಅಭಿವೃದ್ಧಿ ವಿಷಯದಲ್ಲಿ ಜಾತಿ ತರುವುದು ಅಕ್ಷಮ್ಯ ಅಪರಾಧವಾಗಿದ್ದು, ಬಿಜೆಪಿ ರೈತ ಮೋರ್ಚಾ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಹೋರಾಟದಲ್ಲಿ ಶಾಸಕರನ್ನು ಟೀಕೆ ಮಾಡಿದ್ದಾರೆಯೇ ಹೊರತು ಜಾತಿ ಟೀಕಿಸಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಸ್ಪಷ್ಟಪಡಿಸಿದರು.

ಅವರು ಮಂಗಳವಾರ ನಗರದ ಪಂಡಿತ ದೀನ ದಯಾಳ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡರು ಜಾತಿ ವಿಷಯ ತಂದು ದ್ವೇಷದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಅನಂತಮೂರ್ತಿ ಹೆಗಡೆ ಹೋರಾಟಕ್ಕೆ ಕೆಲವರು ಜಾತಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಎಲ್ಲ ರಾಜಕೀಯ ಪಕ್ಷದಲ್ಲಿ ಎಲ್ಲ ಜಾತಿಯವರು ಇದ್ದಾರೆ. ಎಲ್ಲ ಜಾತಿಯವರೂ ಸ್ಥಾನಮಾನ ಹೊಂದಿದ್ದಾರೆ. ಸಾರ್ವಜನಿಕ ಹೋರಾಟ ಜಾತಿ ಸ್ವರೂಪಕ್ಕೆ ತಿರುಗಿಸಿ, ಜನರ ನಡುವೆ ಗೊಂದಲ ಸೃಷ್ಟಿಸುವುದು ಕಾಂಗ್ರೆಸ್ ತಂತ್ರಗಾರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಂತಮೂರ್ತಿ ಹೆಗಡೆ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಅನುದಾನ ಕುರಿತಾಗಿ ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಟೀಕೆ ಮಾಡಿದ್ದಾರೆ. ಆಸ್ಪತ್ರೆ ಹೋರಾಟ ಸಾರ್ವಜನಿಕ ಸಮಸ್ಯೆ, ಇದು ಬ್ರಾಹ್ಮಣ, ನಾಮಧಾರಿ, ಈಡಿಗ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಇನ್ಯಾವುದೋ ಒಂದು ಜಾತಿಗೆ, ಸಮುದಾಯಕ್ಕೆ ಸೀಮಿತವಾದ ಹೋರಾಟವಲ್ಲ. ಆಸ್ಪತ್ರೆ ಎಂದಾಕ್ಷಣ ಎಲ್ಲ ಜಾತಿ-ಧರ್ಮದವರೂ ಬಂದು ಚಿಕಿತ್ಸೆ ಪಡೆಯುತ್ತಾರೆ. ಎಲ್ಲರ ಪರವಾಗಿ ಅನಂತಮೂರ್ತಿ ಹೆಗಡೆ ಆಸ್ಪತ್ರೆಯ ಕುರಿತಾದ ಎಲ್ಲ ದಾಖಲೆಗಳನ್ನು ಆರ್‌ಟಿಐ ಮೂಲಕ ಸಂಗ್ರಹಿಸಿ ಅನುದಾನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಹೊರತು ಇನ್ಯಾವುದೋ ಜಾತಿ ಅಥವಾ ವೈಯಕ್ತಿಕ ದ್ವೇಷದಿಂದಲ್ಲ. ಜಾತಿ ನಿಂದನೆ ಎನ್ನುವ ಸ್ವರೂಪ ಪಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮಂಜುನಾಥ ಭಂಡಾರಿ, ಶ್ರೀರಾಮ ನಾಯ್ಕ, ರಾಘವೇಂದ್ರ ನಾಯ್ಕ, ರವಿಚಂದ್ರ ಶೆಟ್ಟಿ ಮತ್ತಿತರರು ಇದ್ದರು.