ಸಾರಾಂಶ
ಹುಬ್ಬಳ್ಳಿ: "ಅಪ್ಪಾರ, ಗುಡಿಯಾನ ದೇವ್ರ ಪೂಜಾ ಮಾಡ್ಲೊ ಬ್ಯಾಡೋ?.. "
ಉಣಕಲ್ ಸಿದ್ದಪ್ಪಜ್ಜನ ಯುಗಾದಿ ಜಾತ್ರಾ ಮಹೋತ್ಸವ ನಿಮಿತ್ತ ನಡೆದ 14 ದಿನಗಳ ಪ್ರವಚನ ಆಲಿಸಿದ್ದ ಭಕ್ತೆಯೊಬ್ಬರು ಶನಿವಾರ ಕೊನೆಯದಿನ ನಿಜಗುಣಾನಂದ ಮಹಾಸ್ವಾಮಿಗಳನ್ನು ಹೀಗೆ ಪ್ರಶ್ನಿಸುವ ಮೂಲಕ ನೆರೆದಿದ್ದ ಜನಸಮೂಹವನ್ನು ಚಕಿತಗೊಳಿಸಿದರು.ಭಕ್ತೆಯ ಈ ಪ್ರಶ್ನೆಗೆ ಅಷ್ಟೇ ಶಾಂತವಾಗಿ ಉತ್ತರಿಸಿದ ಶ್ರೀಗಳು, ಗುಡಿ ಮತ್ತು ದೇವರು ಮನುಷ್ಯರ ಕಲ್ಪನೆಗಳು ಅಷ್ಟೇ. ಮೇಲಾಗಿ ಅವು ಸ್ಥಾವರ. ಇವುಗಳನ್ನು ಮುಂದಿಟ್ಟುಕೊಂಡು ಕೆಲವರು ಧಾರ್ಮಿಕವಾಗಿ ಶೋಷಣೆ ಮಾಡಿದರು. ಮಧ್ಯವರ್ತಿಗಳು ಹುಟ್ಟಿ ಮಡಿ ಮೈಲಿಗೆ ಹುಟ್ಟುಹಾಕಿದರು. ಕೆಲವರನ್ನು ಈ ಗುಡಿ-ದೇವರಿಂದ ದೂರವಿಟ್ಟು ಅಸಮಾನತೆಗೆ ಎಡೆಮಾಡಿದರು. ಹಾಗಾಗಿ ಬಸವಾದಿ ಶರಣರು ಎಲ್ಲರಿಗೂ ಇಷ್ಟಲಿಂಗದ ಮೂಲಕ ಧಾರ್ಮಿಕ ಸ್ವಾತಂತ್ರ್ಯನೀಡಿದರು. ಸಾಧನೆಯ ಮೂಲಕ ದೇಹವನ್ನೇ ದೇವಾಲಯ ಮಾಡಿಕೊಳ್ಳುವ ಕ್ರಾಂತಿಕಾರ ಚಿಂತನೆಯನ್ನು ಹರಿಬಿಟ್ಟರು. ಚೈತನ್ಯರೂಪಿ ಪರಿಸರವೇ ನಿಜವಾದ ದೇವರು. ಈ ದೇವರನ್ನು ನಮ್ಮೊಳಗೆ ಕಾಣುವುದೇ ಬದುಕಿನ ಅಂತಿಮ ಸತ್ಯ ಎಂದು ವಿವರಿಸಿದರು.
ಮತ್ತೊಬ್ಬ ಭಕ್ತೆ "ಇಷ್ಟು ದಿವಸ ಪ್ರವಚನ ಕೇಳಿದ್ದೇವೆ, ಮುಂದೇನು? " ಎಂದಿದ್ದಕ್ಕೆ ಶ್ರೀಗಳು, ದೇವರು ಕಣ್ಣು ಕೊಡುತ್ತಾನೆ. ಗುರು ಆ ಕಣ್ಣಿನ ಪೊರೆ ತೆಗೆಯುತ್ತಾನಷ್ಟೇ. ಇಂಥ ಪ್ರವಚನ ಆಲಿಸಿ ಅಜ್ಞಾನ, ಮೂಢನಂಬಿಕೆ ನೀಗಿಸಿಕೊಂಡ ಬಳಿಕ ನಿತ್ಯವೂ ಮನೆಯಲ್ಲಿ ಮನೆ ಮಂದಿಯಲ್ಲ ಸೇರಿ ಶರಣರ ವಚನಗಳನ್ನು ಪಠಿಸಿ, ವಿಶ್ಷೇಷಿಸಿ. ಇಷ್ಟಲಿಂಗ ಪೂಜೆ ಮಾಡಿ. ಇದರಿಂದ ಮಕ್ಕಳ ಮನಸಿನ ಮೇಲೆ ದೊಡ್ಡ ರೀತಿಯ ಪರಿಣಾಮ ಬೀರುತ್ತದೆ. ಅವರು ಸಂಸ್ಕಾರವಂತರಾಗುತ್ತಾರೆ. ನೀವೆಲ್ಲ ಶರಣ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಧನೆ ಮಾಡುತ್ತ ಹೋದರೆ ನಿಮ್ಮ ಅರಿವೇ ನಿಮಗೆ ಗುರುವಾಗುತ್ತದೆ ಎಂದು ಕಿವಿಮಾತು ಹೇಳಿದರು.ಇನ್ನೊಬ್ಬರು ನಮ್ಮಲ್ಲಿನ ಅಹಂ ಓಡಿಸಲು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಶ್ರೀಗಳು, ನಾನು ಎನ್ನುವುದು ತಪ್ಪಲ್ಲ. ನಾನು ಒಳ್ಳೆಯ ಊಟ ಮಾಡಬೇಕು, ಒಳ್ಳೆಯ ಬಟ್ಟೆ ಧರಿಸಬೇಕು ಎನ್ನುವುದೂ ತಪ್ಪಲ್ಲ. ಆದರೆ, ಮತ್ತೊಬ್ಬರಂತೆ ಬದುಕಲು ಯತ್ನಿಸುವುದು, ನಾನೇ ಶ್ರೇಷ್ಟ ಎನ್ನುವುದು, ಎಲ್ಲರಿಗಿಂತ ಶ್ರೀಮಂತನಾಗಬೇಕು ಎನ್ನುವ ದುರಾಸೆ ತಪ್ಪು. ನಮ್ಮ ಕಾಲಿದ್ದಷ್ಟು ಹಾಸಿಗೆ ಬಿಡಿಸಿಕೊಳ್ಳಬೇಕು. ಪ್ರಾಮಾಣಿಕತೆ, ಸತ್ಯಶುದ್ಧ ಕಾಯಕ ಮತ್ತು ಸತ್ಸಂಗಗಳಿಂದ ಅಹಂ ನೀಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನಸಿನ ಮೈಲಿಗೆ:ನಿಜಗುಣಾನಂದ ಮಹಾಸ್ವಾಮಿಗಳು ತಮ್ಮ ಪ್ರವಚನದಲ್ಲಿ ಬಸವ ತತ್ವವನ್ನು ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸುತ್ತಿದ್ದಾರೆ. ಅದು ಒಂದು ರೀತಿಯಲ್ಲಿ ಬಟ್ಟೆ ತೊಳೆದಂತೆ ಮನದ ಮೈಲಿಗೆಯನ್ನು ತಮ್ಮ ಅಸ್ಖಲಿತ ವಾಣಿಯಿಂದ ತೊಳೆಯುತ್ತಿದ್ದಾರೆ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ಬಣ್ಣಿಸಿದರು.
ದಿನನಿತ್ಯ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಮನಸನ್ನೂ ಕಾಮ ಕ್ರೋದಾದಿಗಳಿಂದ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ವಚ್ಛ ಮನಸಿನಲ್ಲಿ ಮಾತ್ರ ಭಗವಂತ ನೆಲೆಸಲು ಸಾಧ್ಯ. ಸತ್ಯ ಶುದ್ಧ ಕಾಯಕದಿಂದ ಬದಕನ್ನು ಹಸನು ಮಾಡಿಕೊಳ್ಳುವಂತೆ ನೆರೆದಿದ್ದ ಜನಸಮೂಹಕ್ಕೆ ಆಶೀರ್ವಚನ ನೀಡಿದರು.ಉಣಕಲ್ ಸಿದ್ದಪ್ಪಜ್ಜನ ಪೂರ್ವಾಶ್ರಮದ ಐದನೇ ತಲೆಮಾರಿನ ಸಿದ್ದಪ್ಪ ಸ್ವಾಮಿಗಳು ವೇದಿಕೆಯಲ್ಲಿದ್ದರು.
ಶಾಸಕ ಪ್ರದೀಪ ಶೆಟ್ಟರ, ಹುಬ್ಬಳ್ಳಿ-ಧಾರವಾಡ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು.ಇಂದು ರಥೋತ್ಸವ:
ಪ್ರತಿ ವರ್ಷದಂತೆ ಭಾನುವಾರ ಸಂಜೆ ಶ್ರೀ ಸಿದ್ದಪ್ಪಜ್ಜನ ಯುಗಾದಿ ರಥೋತ್ಸ ಜರುಗಲಿದೆ. ಇದಕ್ಕೂ ಮುನ್ನ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಈ ಜಾತ್ರಾ ಮಹೋತ್ವ ನಿಮಿತ್ತ ಲಿಂಗಧಾರಣೆ, ಅಯ್ಯಾಚಾರ, ಸಾಮೂಹಿಕ ವಿವಾಹ, ಚಕ್ಕಡಿ ಸ್ಪರ್ಧೆ, ಕುಸ್ತಿ ಇತ್ಯಾದಿ ಪಂದ್ಯಗಳು ನಡೆಯಲಿವೆ.