ಕನ್ನಡಪ್ರಭ ವಾರ್ತೆ ಹುಕ್ಕೇರಿತಾಲೂಕಿನ ಅಂಗನವಾಡಿ ಕೇಂದ್ರಗಳ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಹುಕ್ಕೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ)ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಅಂಗನವಾಡಿ ಕೇಂದ್ರಗಳ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಹುಕ್ಕೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ)ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.ತಾಲೂಕಿನ ಅಂಗನವಾಡಿ ಕೇಂದ್ರಗಳ ವಿವಿಧ ಸಿಬ್ಬಂದಿ ಆಯ್ಕೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ವ್ಯಾಪಕ ಹಣ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸ್ಪಷ್ಟೀಕರಣ ನೀಡುವಂತೆ ಸಿಡಿಪಿಒ ಕೆ.ವಿ.ರಾಮಮೂರ್ತಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೂರು ದಿನದೊಳಗೆ ಈ ಕುರಿತು ಹೇಳಿಕೆ ನೀಡಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಾಪಂ ಇಒ ಟಿ.ಆರ್.ಮಲ್ಲಾಡದ ಎಚ್ಚರಿಸಿದ್ದಾರೆ.
ತಾಲೂಕಿನ ಅಂಗನವಾಡಿಯ 18 ಕಾರ್ಯಕರ್ತೆಯರು, 42 ಸಹಾಯಕಿಯರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳಿಂದಲೇ ಲಕ್ಷಾಂತರ ಹಣ ವಸೂಲಿ ಮತ್ತು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಕೇಳಿ ಬಂದಿದೆ. ಜತೆಗೆ ಅಂಗನವಾಡಿ ಸಿಬ್ಬಂದಿ ವರ್ಗಾವಣೆ, ಮುಂಬಡ್ತಿ ಪ್ರಸ್ತಾವಣೆಗಳಲ್ಲಿಯೂ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪಗಳಿವೆ. ಹಾಗಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.ಇನ್ನು ಹುಕ್ಕೇರಿಯಲ್ಲಿ ನಡೆದಿರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿಯಲ್ಲಿ ಅಧಿಕಾರಿ-ಸಿಬ್ಬಂದಿಯಿಂದ ಅಕ್ರಮ ಎಸಗಲಾಗಿದೆ ಎಂಬ ದೂರಿನ ಅನ್ವಯ ಇಲಾಖೆಯ ಜಿಲ್ಲಾ ಮತ್ತು ಕೇಂದ್ರ ಕಚೇರಿಯ ಅಧಿಕಾರಿಗಳು ಸಮಗ್ರ ವರದಿ ಸಲ್ಲಿಸುವಂತೆ ಸಿಡಿಪಿಒ ಅವರಿಗೆ ಮೌಖಿಕವಾಗಿ ಸೂಚಿಸಿದ್ದು, ಇದರೊಂದಿಗೆ ಅಂಗನವಾಡಿ ಸಿಬ್ಬಂದಿ ಆಯ್ಕೆಯಲ್ಲಿ ಅರ್ಹ ಅಭ್ಯರ್ಥಿಗಳಿಂದಲೇ ಹಣ ವಸೂಲಿ ಮಾಡಿರುವ ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.