ಗ್ಯಾರಂಟಿ ಯೋಜನೆ ಸಮರ್ಪಕ ಜಾರಿಗೆ ಬದ್ಧತೆ ತೋರಿ: ಶಾಸಕ ನೇಮರಾಜನಾಯ್ಕ

| Published : Feb 01 2024, 02:04 AM IST

ಗ್ಯಾರಂಟಿ ಯೋಜನೆ ಸಮರ್ಪಕ ಜಾರಿಗೆ ಬದ್ಧತೆ ತೋರಿ: ಶಾಸಕ ನೇಮರಾಜನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್, ಅಧಿಕಾರ ಹಿಡಿಯುತ್ತಲೇ ಅವುಗಳನ್ನು ಸಮರ್ಥವಾಗಿ ಜಾರಿ ಮಾಡುತ್ತಿಲ್ಲ. ಇದರಿಂದ ಅನೇಕ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂದು ಶಾಸಕ ನೇಮರಾಜನಾಯ್ಕ ಆರೋಪಿಸಿದರು.

ಕೊಟ್ಟೂರು: ರಾಜ್ಯದ ಜನತೆ ಬಯಸದಿದ್ದರೂ ಅಧಿಕಾರ ಹಿಡಿಯುವುದಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದರೂ ಸಮರ್ಪಕವಾಗಿ ಜಾರಿಗೆ ತರಲು ಬದ್ಧತೆಯನ್ನೇ ತೋರುತ್ತಿಲ್ಲ ಎಂದು ಶಾಸಕ ಕೆ. ನೇಮರಾಜನಾಯ್ಕ ಆರೋಪಿಸಿದರು.

ಬುಧವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಾವೇಶದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಉಚಿತ ಯೋಜನೆಗಳನ್ನು ಘೋಷಿಸಿದ್ದ ಪಂಜಾಬ್, ದೆಹಲಿ ರಾಜ್ಯಗಳ ಆರ್ಥಿಕ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹೫೦ ಸಾವಿರ ಕೋಟಿ ವ್ಯಯವಾಗಲಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನವೇ ಇಲ್ಲವಾಗಿದೆ. ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್, ಅಧಿಕಾರ ಹಿಡಿಯುತ್ತಲೇ ಅವುಗಳನ್ನು ಸಮರ್ಥವಾಗಿ ಜಾರಿ ಮಾಡುತ್ತಿಲ್ಲ. ಇದರಿಂದ ಅನೇಕ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂದರು.

ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಘೋಷಿಸಿದ್ದ ಶಕ್ತಿ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆ- ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದ್ದರೂ ಹೆಚ್ಚುವರಿ ಬಸ್‌ಗಳನ್ನು ಸರ್ಕಾರ ಕಲ್ಪಿಸದೇ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಅನೇಕರು ಅರ್ಜಿ ಸಲ್ಲಿಸಿದ್ದರೂ ಹೆಚ್ಚಿನ ಮಹಿಳೆಯರಿಗೆ ಯೋಜನೆಯ ಲಾಭವೇ ಸಿಕ್ಕಿಲ್ಲ. ವಿದ್ಯಾನಿಧಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿದ್ದರೂ ಕೇವಲ ೩ ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಯೋಜನೆಯ ಲಾಭವಾಗಿದೆ ಎಂದರು.

೫೦೦ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಕಲಿಯುಗದ ರಾಮ ಎನಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನತೆಗೆ ಉಚಿತ ೧೦ ಕೆಜಿ ಅಕ್ಕಿ ನೀಡಿದ್ದರು. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಅಕ್ಕಿ ನಿಲ್ಲಿಸಿದೆ ಎಂದು ದೂರಿದರು.

ಕೂಡ್ಲಿಗಿ ಸಾರಿಗೆ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪ ಶಕ್ತಿ ಯೋಜನೆ ಕುರಿತು, ಗೃಹ ಜ್ಯೋತಿ ಕುರಿತು ಕೂಡ್ಲಿಗಿ ಜೆಸ್ಕಾಂ ಎಇಇ ಪ್ರಕಾಶ ಪತ್ತೆನೂರು, ಗೃಹಲಕ್ಷ್ಮೀ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಲುಂಬಿ, ಅನ್ನಭಾಗ್ಯ ಕುರಿತು ಆಹಾರ ನಿರೀಕ್ಷಕ ಮಂಜುನಾಥ ವಿವರಿಸಿದರು.

ತಹಸೀಲ್ದಾರ್‌ ಜಿ.ಕೆ. ಅಮರೇಶ ಕಾರ್ಯಕ್ರಮ ಕುರಿತು ಮಾತನಾಡಿದರು. ತಾಪಂ ಇಒ ವೈ. ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಂಎಂಜೆ ಹರ್ಷವರ್ಧನ, ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ, ಬಿಇಒ ಪದ್ಮನಾಭ ಕರ್ಣಂ, ಎಪಿಎಂಸಿ ಕಾರ್ಯದರ್ಶಿ ಎಚ್. ವೀರಣ್ಣ, ಪಪಂ ಸದಸ್ಯರಾದ ಜಿ.ಎಂ. ಸಿದ್ದಯ್ಯ, ಎಂ. ಕೊಟ್ರೇಶ ಇತರರು ಇದ್ದರು. ಕಂದಾಯ ಇಲಾಖೆಯ ಸಿ.ಮ. ಗುರುಬಸವರಾಜ ನಿರ್ವಹಿಸಿದರು.