ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣವ ಸಿಬಿಐಗೆ ವಹಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಂಡತನ ಪ್ರದರ್ಶಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವೈ.ಎ.ನಾರಾಯಣಸ್ವಾಮಿರವರ ಪರ ನಗರದ ಸಂತ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾರ ಮತಯಾಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಎಸ್ಟಿ ನಿಗಮದ ಜನರಲ್ ಮ್ಯಾನೇಜರ್ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡುವುದರಿಂದ ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಟ್ಟು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಸಾಧಾರಣ ಸಂಗತಿಯಲ್ಲ. ನಿಗಮದದಿಂದ ಬೇರೆ ಬೇರೆ ಬ್ಯಾಂಕ್‍ಗಳಿಗೆ 180 ಕೋಟಿ ರು. ವರ್ಗಾವಣೆಯಾಗಿದೆ. ಹೈದರಾಬಾದ್, ತೆಲಂಗಾಣಕ್ಕೆ ಹಣ ಹೋಗಿರುವ ಗುಮಾನಿಯಿದೆ. ಮುಖ್ಯಮಂತ್ರಿ ಬಾಯಿ ತೆರೆಯುತ್ತಿಲ್ಲ. ಇಷ್ಟೊತ್ತಿಗೆ ಸಚಿವ ನಾಗೇಂದ್ರರವರಿಂದ ರಾಜಿನಾಮೆ ಪಡೆದು ಸಚಿವ ಸಂಪುಟದಿಂದ ಕೈಬಿಡಬೇಕಿತ್ತು. ಉಳಿಸಿಕೊಳ್ಳುವ ಭಂಡತನ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಖಜಾನೆ ಲೂಟಿಯಾಗುತ್ತಿದೆ. ಶಿಕ್ಷಕರು, ಪದವೀಧರರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‍ಗೆ ಕಾಳಜಿಯಿಲ್ಲ. ಎಲ್ಲಾ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರುಗಳಲ್ಲಿ ಮತಯಾಚಿಸುತ್ತಿದ್ದೇವೆ. ಬಿಜೆಪಿ ಸರ್ಕಾರ ಐದನೆ ಹಾಗೂ ಆರನೇ ವೇತನ ಆಯೋಗವನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರಕ್ಕೆ ಏಳನೆ ವೇತನ ಆಯೋಗ ಜಾರಿಗೆ ತರುವ ಮನಸ್ಸಿಲ್ಲ. ವೈ.ಎ.ನಾರಾಯಣಸ್ವಾಮಿರವರು ಕಳೆದ ಹದಿನೆಂಟು ವರ್ಷಗಳಿಂದಲೂ ಶಿಕ್ಷಕರುಗಳ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಅವರನ್ನು ಗೆಲ್ಲಿಸಿಕೊಳ್ಳುವುದು ಶಿಕ್ಷಕರ ಕರ್ತವ್ಯವೆಂದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಇದುವರೆವಿಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ನೋಡಿಲ್ಲ. ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ.ಯಿಂದ ಸ್ಪರ್ಧಿಸಿರುವ ವೈ.ಎ.ನಾರಾಯಣಸ್ವಾಮಿರವರು ಕಳೆದ ಹದಿನೆಂಟು ವರ್ಷಗಳಿಂದಲೂ ಸದನದ ಒಳಗೆ ಹಾಗೂ ಹೊರಗೆ ಶಿಕ್ಷಕರುಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ನಾಲ್ಕನೆಯ ಬಾರಿಗೆ ಸ್ಪರ್ಧಿಸಿರುವ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ ವಿಧಾನ ಪರಿಷತ್‍ಗೆ ಕಳಿಸಿಕೊಡಿ ಎಂದು ವಿನಂತಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೈಲಜಾ ರೆಡ್ಡಿ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶೀಲ ಶ್ರೀನಿವಾಸ್, ಬಸಮ್ಮ, ಶಾಂತಮ್ಮ, ಅರುಣ, ನಗರಸಭೆ ಸದಸ್ಯ ಹರೀಶ್ ಮತಯಾಚನೆಯಲ್ಲಿ ಭಾಗವಹಿಸಿದ್ದರು.ಸಿದ್ದು ಅಧಿಕಾರದಲ್ಲಿ ಖಜಾನೆ ಲೂಟಿ: ಕಾರಜೋಳ ವಾಗ್ದಾಳಿ
ಚಿತ್ರದುರ್ಗ: ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಖಜಾನೆ ಲೂಟಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಲ್ಮೀಕಿ ನಿಗಮದ ಹಗರಣ ಸರ್ಕಾರದ ಹಗಲು ದರೋಡೆಯಾಗಿದ್ದು ಮಾರ್ಚ್ ತಿಂಗಳಲ್ಲಿ 180 ಕೋಟಿ ಹಣ ವರ್ಗಾವಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಈ ವರೆಗೆ ಬಾಯಿ ಬಿಟ್ಟಿಲ್ಲ. ಸಚಿವ ನಾಗೇಂದ್ರ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಆದೇಶ ಮಾಡಬೇಕಿತ್ತು. ಈ ಕೆಲಸ ಮಾಡದೆ ಲಘುವಾಗಿ ನಡೆದುಕೊಳ್ಳಲಾಗಿದೆ ಎಂದರು.2022ರಲ್ಲಿ ಗುತ್ತಿಗೆದಾರನೇ ಅಲ್ಲದ ಸಂತೋಷ ಪಾಟೀಲ್ ಆತ್ಮಹತ್ಯೆ ಆಗಿತ್ತು. ಆಗ ಕೆ.ಎಸ್.ಈಶ್ವರಪ್ಪ ವಿರುದ್ಧ ಸಿದ್ಧರಾಮಯ್ಯ ಮಾತಾಡಿದ್ದರು. ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದರು. ಈಗ ಸಿಎಂ ಆಗಿರುವ ಸಿದ್ಧರಾಮಯ್ಯ ನಾಗೇಂದ್ರ ವಿರುದ್ಧ ಕ್ರಮ ಕೈಗೊಳ್ಳುತ್ತಲ್ಲ ಏಕೆ ಎಂದು ಪ್ರಶ್ನಿಸಿದರು.ಸರ್ಕಾರದ ಖಜಾನೆಯಿಂದ ಹಣ ವರ್ಗಾವಣೆ ಆಗಿದೆ. ಸಿದ್ದರಾಮಯ್ಯಗೆ ನೈತಿಕತೆ ಇಲ್ಲವೆಂದರು.ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೇ ತಪ್ಪು ಮಾಡಿದ್ದರೂ ನಿಷ್ಪಕ್ಷಪಾತ ತನಿಖೆ ಆಗಲಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಿ ಎಂದರು. ಸಿಎಂ, ಡಿಸಿಎಂ ವಿರುದ್ಧ ಕೇರಳದಲ್ಲಿ ರಾಜಕಂಟಕ ಯಾಗ ಎಂದು ಡಿಸಿಎಂ ಡಿಕೆಶಿ ಹೇಳಿಕೆಗೆ ನಾನು ಬಸವತತ್ವದಲ್ಲಿ ನಂಬಿಕೆಯಿಟ್ಟಿರುವ ವ್ಯಕ್ತಿ.ಮೂಢನಂಬಿಕೆ, ಕಂದಾಚಾರಗಳಿಗೆ ಬೆಲೆ ಕೊಟ್ಟಿಲ್ಲ, ಈ ಬಗ್ಗೆ ಪ್ರತಿಕ್ರಿಯಿಸಲ್ಲವೆಂದು ಕಾರಜೋಳ ಹೇಳಿದರು.