ಸಾರಾಂಶ
ಉತ್ತರ ಕನ್ನಡ ಜಿಲ್ಲೆ ಎಲ್ಲ ಕಲೆಗಳ ಜೊತೆಗೆ ಯಕ್ಷಗಾನ, ತಾಳಮದ್ದಳೆ ಕ್ಷೇತ್ರದಲ್ಲೂ ಪ್ರಸಿದ್ಧವಾದದ್ದು.
ಸಿದ್ದಾಪುರ: ಪುರಾಣದಲ್ಲಿನ ಕಥಾವಸ್ತುಗಳನ್ನು ನಿರೂಪಿಸುವ, ಅಲ್ಲಿನ ಪಾತ್ರಗಳನ್ನು ಸಂಭಾಷಣೆ ಮತ್ತು ಚರ್ಚೆಗಳ ಮೂಲಕ ಶೋತೃಗಳ ಎದುರು ಪ್ರಸ್ತುತಪಡಿಸುವ ತಾಳಮದ್ದಳೆ ಜ್ಞಾನವೃದ್ಧಿಗೆ ಸಹಕಾರಿ ಎಂದು ಶಿರಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ, ಉದ್ಯಮಿ ರಾಘವೇಂದ್ರ ಶಾಸ್ತ್ರಿ ಬಿಳಗಿ ಹೇಳಿದರು.
ಅವರು ಒಡ್ಡೋಲಗ ಹಿತ್ಲಕೈ ತಾಲೂಕಿನ ಕವ್ಲಕೊಪ್ಪದ ಸಿದ್ದಿವಿನಾಯಕ ದೇವಾಲಯದ ಸಭಾಭವನದಲ್ಲಿ ಆಯೋಜಿಸಿದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಎಲ್ಲ ಕಲೆಗಳ ಜೊತೆಗೆ ಯಕ್ಷಗಾನ, ತಾಳಮದ್ದಳೆ ಕ್ಷೇತ್ರದಲ್ಲೂ ಪ್ರಸಿದ್ಧವಾದದ್ದು. ಇಂಥ ಚರ್ಚೆಗಳ ಇಲ್ಲದ ಪರಿಸರ ಈಗ ಕಂಡು ಬರುತ್ತಿದೆ. ಇದರಿಂದ ಸಮಾಜಮುಖಿಯಾಗುವ ಬದಲು ಮನಸ್ಸು ಏಕತಾನತೆಗೆ ಒಳಗಾಗುವ ಅಪಾಯಕಾರಿ ಸನ್ನಿವೇಶವಿದೆ. ಯಕ್ಷಗಾನ ಕ್ಷೇತ್ರದಲ್ಲಿ ಯುವ ಕಲಾವಿದರು ಪಾಲ್ಗೊಳ್ಳುವ ಮೂಲಕ ಈ ಕಲೆಯನ್ನು ಬೆಳಸುವಂತಾಗಬೇಕು ಎಂದರು.ಈ ಸಂದರ್ಭದಲ್ಲಿ ಒಡ್ಡೋಲಗ ಸಂಸ್ಥೆ ನೀಡಿದ ರಂಗ ಗೌರವವನ್ನು ಸ್ವೀಕರಿಸಿದ ಯಕ್ಷಗಾನದ ಪ್ರಸಿದ್ಧ ಭಾಗವತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ ಮಾತನಾಡಿ ಯಕ್ಷಗಾನ ಮತ್ತು ತಾಳಮದ್ದಳೆ ಆರಾಧನಾ ಕಲೆಯಾಗಿದ್ದು ಭಕ್ತಿಯ ಜೊತೆಗೆ ಮನರಂಜನೆಯನ್ನೂ ನೀಡುತ್ತದೆ. ಈ ಕಲೆಗೆ ಕಲಿಕೆ ತುಂಬ ಮುಖ್ಯ. ಯುವಕರು ಈ ಕ್ಷೇತ್ರದಲ್ಲಿ ಆಸಕ್ತಿ ವಹಿಸಬೇಕು. ಸಂಘಟನೆ ತುಂಬಾ ಕಷ್ಟವಾಗಿದ್ದು ಸಾಂಸ್ಕೃತಿಕ ಸಂಘಟನೆಗೆ ಪ್ರೇಕ್ಷಕರು ಸ್ಪಂದಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಹಿಂದಿನ ದಿನಗಳಲ್ಲಿ ಪ್ರೇಕ್ಷಕರು ಕಲೆಯ ಬೆಳವಣಿಗೆಗೆ ಮುಖ್ಯ ಕಾರಣರಾಗಿದ್ದರು. ಕಲೆಯ ಅಭಿವೃದ್ಧಿಗೆ ಸರ್ಕಾರವನ್ನು ಮಾತ್ರ ಅವಲಂಬಿಸದೇ ಪ್ರೇಕ್ಷಕರು, ಅಭಿಮಾನಿಗಳು ಹೆಚ್ಚಿನ ಸಹಕಾರ ನೀಡುವಂತಾಗಬೇಕು. ಪುರಾಣಗಳನ್ನು ಮಾತುಗಾರಿಕೆಯ ಮೂಲಕವೇ ಕಟ್ಟಿಕೊಡುವ ತಾಳಮದ್ದಳೆ ಬೌದ್ಧಿಕ ವಿಕಸನ, ಮಾನಸಿಕ ನೆಮ್ಮದಿಗೆ ಸಹಕಾರಿ. ಕಳೆದ ೨೫ ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಒಡ್ಡೋಲಗದ ಇಂಥ ಕಾರ್ಯಕ್ರಮಗಳು ಅಪೂರ್ವವಾದದ್ದು ಎಂದರು.ಎಪಿಎಂಸಿ ನಿವೃತ್ತ ಕಾರ್ಯದರ್ಶಿ ಚಂದ್ರಶೇಖರ ಹೆಬ್ಬಾರ ಉಡುಪಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಒಡ್ಡೋಲಗ ಸಂಸ್ಥೆಯ ಮುಖ್ಯಸ್ಥ ಗಣಪತಿ ಬಿ.ಹಿತ್ಲಕೈ ಸ್ವಾಗತಿಸಿ ವಂದಿಸಿದರು. ಒಡ್ಡೋಲಗದ ಪ್ರಜ್ಞಾ ಹೆಗಡೆ,ಕೇಶವ ಹೆಗಡೆ ಕಿಬ್ಳೆ, ನವೀನ್ ಸಹಕರಿಸಿದರು.