ಶ್ರಾವಣ ಶನಿವಾರ: ಮೇಲುಕೋಟೆಗೆ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮನ

| Published : Aug 03 2025, 01:30 AM IST

ಶ್ರಾವಣ ಶನಿವಾರ: ಮೇಲುಕೋಟೆಗೆ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಾವಣ ಶನಿವಾರಗಳು ಚೆಲುವನಾರಾಯಣಸ್ವಾಮಿಯ ದರ್ಶನ ಹಾಗೂ ಅನುಗ್ರಹಕ್ಕೆ ಪ್ರಶಸ್ತ ದಿನಗಳಾದ ಕಾರಣ ಬೆಳಗ್ಗೆ 8 ಗಂಟೆಯಿಂದಲೇ ತಂಡೋಪತಂಡವಾಗಿ ವಿವಿಧ ವಾಹನಗಳಲ್ಲಿ ಆಗಮಿಸುತ್ತಿದ್ದ ಭಕ್ತರು ಕಲ್ಯಾಣಿಯಲ್ಲಿ ಪೂಜೆ ಮಾಡಿ ಪವಿತ್ರ ಸ್ನಾನ ಮಾಡಿ ಕುಲದೈವ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಎರಡನೇ ಶ್ರಾವಣ ಶನಿವಾರದ ಪ್ರಯುಕ್ತ ರಾಜ್ಯದ ವಿವಿಧೆಡೆಗಳಿಂದ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಶ್ರಾವಣ ಶನಿವಾರಗಳು ಚೆಲುವನಾರಾಯಣಸ್ವಾಮಿಯ ದರ್ಶನ ಹಾಗೂ ಅನುಗ್ರಹಕ್ಕೆ ಪ್ರಶಸ್ತ ದಿನಗಳಾದ ಕಾರಣ ಬೆಳಗ್ಗೆ 8 ಗಂಟೆಯಿಂದಲೇ ತಂಡೋಪತಂಡವಾಗಿ ವಿವಿಧ ವಾಹನಗಳಲ್ಲಿ ಆಗಮಿಸುತ್ತಿದ್ದ ಭಕ್ತರು ಕಲ್ಯಾಣಿಯಲ್ಲಿ ಪೂಜೆ ಮಾಡಿ ಪವಿತ್ರ ಸ್ನಾನ ಮಾಡಿ ಕುಲದೈವ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.

ಬೆಳಗ್ಗೆಯಿಂದಲೇ ಎರಡೂ ದೇವಾಲಯಗಳ ಮುಂದೆ ಸರತಿಸಾಲುಗಳಲ್ಲಿ ನಿಂತ ಭಕ್ತರು ದರ್ಶನ ಪಡೆಯುತ್ತಿದ್ದ ದೃಶ್ಯ ಸಂಜೆಯವರೆಗೂ ಕಂಡು ಬಂತು. ನವ ದಂಪತಿಗಳು ಸಹ ಮನೆದೇವರ ದರ್ಶನ ಮಾಡಿ ಸುಪುತ್ರಬೆಕೆಂದು ಪಾರ್ಥನೆ ಸಲ್ಲಿಸಿದರು. ನಂತರ ಕಡಲೇಪುರಿ ಖಾರ ಸಿಹಿತಿಂಡಿಗಳನ್ನು ಖರೀದಿಸಿ ಕುಟುಂಬದೊಂದಿಗೆ ಕುಳಿತು ಊಟ ಮಾಡಿ ತೆರಳುತ್ತಿದ್ದರು ಸಂಜೆ ಸುರಿದ ಮಳೆಯಿಂದಾಗಿ ಭಕ್ತರು ಕೆಲಕಾಲ ತೊಂದರೆ ಅನುಭವಿಸುವಂತಾಯಿತು.

ದೇಗುಲದ ಇಒ ಶೀಲಾ ಅವರು ಸಾಮಾನ್ಯ ದರ್ಶನ ಹಾಗೂ ವಿಶೇಷ ದರ್ಶನಕ್ಕೆ ಸಾಗುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲಿನ ನಿರ್ವಹಣೆ ಹಾಗೂ ದೇವಾಲಯದಿಂದ ಹೋರ ಹೋಗುವ ಭಕ್ತರಿಗೆ ಸೂಕ್ತ ರೀತಿಯ ವ್ಯವಸ್ಥೆ ಮಾಡಿದ್ದರು. ದೇವಾಲಯದ ಅನ್ನದಾನ ಭವನದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗಿತು.

ಪಾರ್ವಟೆ ಮಂಟಪದ ಬಳಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಭದ್ರತೆ ಮಾಡಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮೊಕ್ಕಾಂ ಹೂಡಿದ್ದ ಪೊಲೀಸರು ದೇವಾಲಯದ ಬಳಿಗೆ ಭಕ್ತರ ವಾಹನಗಳು ಬರುವುದನ್ನು ನಿರ್ಭಂದಿಸಿ ಎದರಿನ ಮೈದಾನದಲ್ಲಿ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿದ್ದರು.

ಬಸ್‌ ಹತ್ತಲು ತಳ್ಳಾಟ:

ಶ್ರಾವಣ ಶನಿವಾರದಲ್ಲಿ ರಸ್ತೆ ಸಂಸ್ಥೆ ಹೆಚ್ಚಿನ ಬಸ್ ಹಾಕದ ಕಾರಣ ದಿನನಿತ್ಯ ಓಡಾಡುವ ಬಸ್ ಗಳಲ್ಲಿ ಭಕ್ತರು ಕಿಕ್ಕಿರಿದು ತುಂಬಿ ಮೇಲುಕೋಟೆಗೆ ಬರುತ್ತಿದ್ದರು. ದೇವರಧರ್ಶನ ಮುಗಿಸಿ ಮರಳುವಾಗ ಬಸ್ ಹತ್ತಲು ನೂಕುನುಗ್ಗಲಾಗಿ ತಳ್ಳಾಟ ನೂಕಾಟ ಉಂಟಾಯಿತು. ಮುಂದಿನ ಶ್ರಾವಣಶನಿವಾರವಾದರೂ ವಿಶೇಷ ಬಸ್ ಸೌಲಭ್ಯಕಲ್ಪಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಭಕ್ತರ ಆಗ್ರಹವಾಗಿದೆ.

ಭಾರಿಮಳೆ ಭಕ್ತರು, ವ್ಯಾಪಾರಿಗಳಿಗೆ ತೊಂದರೆ:

ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಭಕ್ತರು, ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಯಿತು.

ಸಂಜೆ 4.30ಕ್ಕೆ ಆರಂಭವಾದ ಮಳೆ ರಾತ್ರಿ 7 ಗಂಟೆಯಾದರೂ ನಿಲ್ಲಲಿಲ್ಲ. ಇದರಿಂದ ಕಲ್ಯಾಣಿ, ಬೆಟ್ಟ ದೇವಾಲಯಗಳ ಬಳಿ ಇದ್ದ ಭಕ್ತರು, ಪುರಿ, ಸಿಹಿ ತಿಂಡಿಗಳು, ಆಟಿಕೆ ಸಾಮಾನು ಇನ್ನಿತರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೀವ್ರ ತೊಂದರೆಯುಂಟಾಯಿತು.

ಸತತ ನಾಲ್ಕೈದು ದಿನಗಳಿಂದ ಸಂಜೆ, ರಾತ್ರಿ ಮತ್ತು ಬೆಳಗ್ಗೆ ಸತತ ಕೆಲ ಗಂಟೆಗಳ ಕಾಲ ಮಳೆ ಸುರಿಯುತ್ತಿದೆ. ಇದರೊಟ್ಟಿಗೆ ಕೊರೆಯುವ ಚಳಿ ತೀವ್ರತೆಯೂ ಜನರನ್ನು ಕಾಡುತ್ತಿತ್ತು.