ಗುಟ್ಟಹಳ್ಳಿಯಲ್ಲಿ ನಿರೀಕ್ಷೆಗೂ ಮೀರಿದ ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವೆಂಕಟರಮಣ ಸ್ವಾಮಿಗೆ ವಿಶೇಷ ಪೂಜೆ । ಅಪಾರ ಜನರಿಂದ ದರ್ಶನ । ಸೂಕ್ತ ವ್ಯವಸ್ಥೆ, ಬಂದೋಬಸ್ತ್‌

ಕನ್ನಡಪ್ರಭ ವಾರ್ತೆ ಬೇತಮಂಗಲ

ಬಡವರ ಪಾಲಿಗೆ ಬಂಗಾರದ ತಿರುಪತಿ ಎಂದೇ ಕರೆಯಲ್ಪಡುವ ಕೆಜಿಎಫ್ ತಾಲೂಕಿನ ಮುಜರಾಯಿ ಇಲಾಖೆಗೆ ಸೇರಿದ ಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಎರಡನೇ ಶ್ರಾವಣ ಶನಿವಾರದ ನಿಮಿತ್ತ ವಿಶೇಷ ಪೂಜಾ ಕೈಂಕರ್ಯ ಧಾರ್ಮಿಕ ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಜರುಗಿದವು.

ಹೋಬಳಿಯ ಗುಟ್ಟಹಳ್ಳಿಯಲ್ಲಿ ನಿರೀಕ್ಷೆಗೂ ಮೀರಿದ ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶ್ರಾವಣ ಶನಿವಾರದ ಪ್ರಯುಕ್ತ ಮುಂಜಾನೆಯಿಂದಲೇ ಸ್ವಾಮಿಗೆ ಪವಿತ್ರ ತೀರ್ಥದಿಂದ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ನಡೆಯಿತು.

ಕೇವಲ ಕರ್ನಾಟಕ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಹರಕೆ ತೀರಿಸಲು ದೇವಾಲಯದ ಆವರಣದಲ್ಲಿ ಅನ್ನದಾನ ಹಾಗೂ ಇತರೆ ಧರ್ಮದರ್ಶಿ ಸೇವಾ ಕಾರ್ಯ ಹಮ್ಮಿಕೊಂಡಿದ್ದರು.

ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ:

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಐತಿಹಾಸಿಕ ದೇವಾಲಯವು ಅಂತರ್‌ರಾಜ್ಯ ಗಡಿಯಲ್ಲಿರುವುದರಿಂದ ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ನೆರೆಯ ರಾಜ್ಯಗಳ ಭಕ್ತರನ್ನು ಆಕರ್ಷಿಸುವ ಮೂಲಕ ಇದು ಕೋಮು ಸೌಹಾರ್ದತೆ ಮತ್ತು ಸಾಂಸ್ಕೃತಿಕ ವಿನಿಮಯದ ಕೇಂದ್ರವಾಗಿಯೂ ಮೂಡಿಬಂದಿದೆ.

ಭಕ್ತಾದಿಗಳಿಗಾಗಿ ಕುಡಿಯುವ ನೀರು ತೀರ್ಥ, ಪ್ರಸಾದ ಸೇರಿದಂತೆ, ಮೂಲಸೌಕರ್ಯಗಳನ್ನು ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿತ್ತು. ಮುಂಬರುವ ಮೂರು ಮತ್ತು ನಾಲ್ಕನೇ ಶ್ರಾವಣ ಶನಿವಾರಕ್ಕೆ ಲಕ್ಷ್ಯಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇಗುಲ ಇಓ ಮಂಜುನಾಥ್ ಹೇಳಿದರು.ಕೋಟ್:

ಸಾವಿರಾರು ಜನ ಸೇರುವ ಇಂತಹ ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಪೊಲೀಸ್ ಇಲಾಖೆಯ ಮುಂಜಾಗ್ರತಾ ಕ್ರಮಗಳು ಮತ್ತು ಸಾರ್ವಜನಿಕ ಸುರಕ್ಷತೆಗೆ ನೀಡಿದ ಮುನ್ನೆಚ್ಚರಿಕೆ ಪ್ರಶಂಸನೀಯವಾಗಿದೆ.- ಹುಲ್ಕೂರು ಹರಿಕುಮಾರ್.