ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತು ಗ್ರಾಮಗಳ ಅಧಿದೇವತೆ ಶ್ರೀಬಡಗೂಡಮ್ಮದೇವಿ ಕೊಂಡೋತ್ಸವ, ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬಹಳ ವಿಜೃಂಭಣೆಯಿಂದ ನೆರವೇರಿತು.ಜಾತ್ರಾ ಮಹೋತ್ಸವದ ಅಂಗವಾಗಿ ಏ.1ರಂದು ಅಮ್ಮನವರಿಗೆ ಹೂವಿನಚಪ್ಪರ ಹಾಗೂ ಪಟ್ಟಣದ ಒಳಸುತ್ತಿನ ಮೆರವಣಿಗೆ ನಡೆಯಿತು. ಏ.2ರ ಗುರುವಾರ ಹತ್ತು ಹಳ್ಳಿಗಳ ಗ್ರಾಮಸ್ಥರಿಂದ ಇಡೀರಾತ್ರಿ ರಂಗಕುಣಿತ, ಪೂಜಾ ಕಾರ್ಯಗಳು ನೆರವೇರಿದವು. ಏ.3ರ ಶುಕ್ರವಾರ ಬೆಳಗಿನಿಂದ ಸಂಜೆವರೆಗೆ ಅಲಂಕಾರಭೂಷಿತಳಾದ ಶ್ರೀಬಡಗೂಡಮ್ಮದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಹೋಮ-ಹವನಾದಿ ಕಾರ್ಯಕ್ರಮಗಳೊಂದಿಗೆ ಅಭಿಷೇಕ, ಮಹಾ ಮಂಗಳಾರತಿ ನಂತರ ಸಂಜೆ ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಷ ಮಾಡಲಾಯಿತು. ಶನಿವಾರ ಬೆಳಗಿನ ಜಾವ 5ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಯ ದೇವರಗುಡ್ಡಪ್ಪ ಪೂಜೆಯೊಂದಿಗೆ ಕೊಂಡ ಹಾಯ್ದರು.
ಮಧ್ಯಾಹ್ನ ಪಟ್ಟಣದ ಪಡುವಲಪಟ್ಟಣ ರಸ್ತೆಯ ಬಡಗೂಡಮ್ಮದೇವಿಯ ನೂರಾರು ವಕ್ಕಲುಗಳು ತಂಬಿಟ್ಟು ಬಾಳೆಹಣ್ಣು ತುಂಬಿದ ಬುಟ್ಟಿ ಸಮೇತ, ಶ್ರೀದೇವಿಯ ಉತ್ಸವ ಮೂರ್ತಿಯನ್ನು ಸರ್ವಲಾಂಕೃತ ಟ್ರ್ಯಾಕ್ಟರ್ ನಲ್ಲಿರಿಸಿ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ತಮಟೆ ಮೇಳ ಹಾಗೂ ಮಂಗಳ ವಾದ್ಯದೊಂದಿಗೆ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಟಿ.ಬಿ. ಬಡಾವಣೆಯ ಮೂಲ ದೇವಸ್ಥಾನಕ್ಕೆ ಕೊಂಡೊಯ್ದರು.ತಮಟೆ ಸದ್ದಿಗೆ ನೂರಾರು ಮಂದಿ ಮಹಿಳೆಯರೂ ಸೇರಿದಂತೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ದೇವಿ ಉತ್ಸವ ಮೂರ್ತಿ ಮೆರವಣಿಗೆ ಸಾಗುತ್ತಿದ್ದ ವೇಳೆ ಪಟ್ಟಣದ ಹಲವೆಡೆ ಸ್ಥಳೀಯ ವರ್ತಕರು ಸಾವಿರಾರು ಸಂಖ್ಯೆಯ ಭಕ್ತರು ಹಾಗೂ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.
ಸಂಜೆ 5.30ಗಂಟೆಗೆ ಅಮ್ಮನವರ ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು ಮತ್ತು ನಾಡಿನ ವಿವಿದೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು, ರಥದ ಕಳಶಕ್ಕೆ ಬಾಳೆಹಣ್ಣು ಜವನ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಸಿದರು.
ಜಾತ್ರಾ ಮಹೋತ್ಸವದ ವೇಳೆ ಯಾವುದೇ ಸಣ್ಣ ಪುಟ್ಟ ಅಹಿತಕರ ಘಟನೆಗಳು ಸಂಭವಿಸದಂತೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.