ದ.ಕ. ಜಿಲ್ಲಾದ್ಯಂತ ಶ್ರೀ ರಾಮ ನವಮಿ ಸಡಗರ

| Published : Apr 18 2024, 02:19 AM IST

ಸಾರಾಂಶ

ಕೊಲಕಾಡಿ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಬುಧವಾರ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ, ಹವನ, ಅಭಿಷೇಕ, ಪಾಲಕಿ ಉತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ಶ್ರೀರಾಮ ದೇವರು ಹುಟ್ಟಿದ ದಿನವಾದ ರಾಮನವಮಿಯನ್ನು ದ.ಕ. ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠೆ ನಡೆದಿರುವುದರಿಂದ ಈ ಬಾರಿಯ ರಾಮನವಮಿಗೆ ಕಳೆ ಹೆಚ್ಚಿತ್ತು.

ಜಿಲ್ಲೆಯ ವಿವಿಧ ದೇವಾಲಯಗಳು, ರಾಮ ಭಜನ ಮಂದಿರಗಳಲ್ಲಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಯಿತು. ವಿವಿಧ ಆಂಜನೇಯ ಮಂದಿರಗಳಲ್ಲೂ ರಾಮ ನವಮಿಯ ವಿಶೇಷ ಆಚರಣೆಗಳು ನಡೆದವು. ದೇವಾಲಯಗಳಲ್ಲಿ ಮಧ್ಯಾಹ್ನ, ರಾತ್ರಿ ವಿಶೇಷ ಪೂಜೆಗಳು, ಭಜನಾ ಮಂಡಳಿಗಳಿಂದ ನಿರಂತರ ಭಜನೆ, ರಾಮ ತಾರಕ ಮಂತ್ರ ಪಠಣ ನಡೆಯಿತು. ಮನೆಗಳಲ್ಲೂ ರಾಮಾಯಣ ಪರಾಯಣ, ರಾಮ ಮಂತ್ರ ಪಠಣ ಭಕ್ತಿ ಭಾವದಿಂದ ನಡೆಯಿತು.

ಮಂಗಳೂರಿನ ಬೋಳಾರ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮ ಜನ್ಮೋತ್ಸವ ಪ್ರಯುಕ್ತ ಬುಧವಾರ ಜನ್ಮೋತ್ಸವ ಪೂಜೆ, ಭಜನೆ, ಮಹಾಪೂಜೆ, ನಂತರ ನಗರೋತ್ಸವ, ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ ನಡೆಯಿತು. ಏ.20ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಮಹಾಪೂಜೆ, ಅನ್ನ ಸಂತರ್ಪಣೆ ಜರುಗಲಿದೆ.

ವಿಶ್ವಹಿಂದೂ ಪರಿಷತ್‌ ಆಶ್ರಯದಲ್ಲಿ ಕದ್ರಿಯ ವಿಶ್ವ ಹಿಂದೂ ಪರಿಷತ್‌ ಕಾರ್ಯಾಲಯದಲ್ಲಿ ವೈಭವದಿಂದ ರಾಮನವಮಿ ಆಚರಿಸಲಾಯಿತು. ಶ್ರೀ ಸೀತಾ ಮಾತೆ, ಲಕ್ಷ್ಮಣ, ಹನುಮಂತ ದೇವರ ಪ್ರತಿಷ್ಠೆಯೊಂದಿಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು- ಸಾಂಸ್ಕೃತಿಕ ಕಾರ್ಯಕ್ರಮಗಳು 3 ದಿನಗಳ ಕಾಲ ನಡೆಯಲಿವೆ. ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರತಿಷ್ಠೆ ಆಗಿರುವ ಹಿನ್ನೆಲೆಯಲ್ಲಿ ವಿಹಿಂಪ ಮಂಗಳೂರು ಮಹಾನಗರ ವತಿಯಿಂದ 164 ಸಮಿತಿಗಳಲ್ಲಿ ರಾಮೋತ್ಸವ ಕಾರ್ಯ ಕ್ರಮ ನಡೆಯಿತು.

ನಗರದ ಎಂ.ಟಿ. ರೋಡ್‌ನಲ್ಲಿರುವ ಶ್ರೀ ಹನುಮಂತ ದೇವಸ್ಥಾನದಲ್ಲಿ ಪ್ರಸನ್ನ ಪೂಜೆ, ಪಾಲಕಿ ಉತ್ಸವ, ಮಹಾರಥೋತ್ಸವ, ಮಹಾಪೂಜೆ, ಪಲ್ಲಪೂಜೆ ನಡೆಯಿತು.

ಉರ್ವ ಚಿಲಿಂಬಿ ಸಾಯಿಬಾಬಾ ಮಂದಿರದಲ್ಲಿ 59ನೇ ಶ್ರೀ ರಾಮನವಮಿ ಉತ್ಸವ ನಡೆಯಿತು. ಬುಧವಾರ ಕಾಕಡ ಆರತಿ, ಸ್ಯಾಕ್ಸೋ ಫೋನ್‌ ವಾದನ, ಧ್ವಜಾರೋಹಣ, ಶ್ರೀಗುರು ಪಾದಪೂಜೆ, ವಿಷ್ಣು ಸಹಸ್ರನಾಮ, ದೀಪಾರಾಧನೆ, ಭಜನೆ, ಮಹಾಪೂಜೆ, ಗೀತಾ ರಾಮಾಯಣ ಸತ್ಸಂಗ, ಧೂಪಾರತಿ, ಮಹಾಪೂಜೆ ನಡೆಯಿತು.

ಕೊಲಕಾಡಿ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಬುಧವಾರ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ, ಹವನ, ಅಭಿಷೇಕ, ಪಾಲಕಿ ಉತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.