ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ, ಧಾರ್ಮಿಕ ಕಾರ್ಯಕ್ರಮ

| Published : Sep 01 2024, 01:48 AM IST

ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ, ಧಾರ್ಮಿಕ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕದಿಂದ ಜೀವನ ಹಸನಾಗುತ್ತದೆ. ಜೀವನದಲ್ಲಿ ಇರುವುದರಲ್ಲೇ ತೃಪ್ತಿ ಪಡೆದುಕೊಂಡರೆ ಸಂತೃಪ್ತಿಯ ಜೀವನ ಸಾಗಿಸಬಹುದು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಪ್ರತಿಯೊಬ್ಬರೂ ಇರುವುದರಲ್ಲಿ ತೃಪ್ತಿಯ ಮನೋಭಾವನೆಯನ್ನು ಬೆಳೆಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು ಎಂದು ಅಂಕನಹಳ್ಳಿ ಶ್ರೀ ತಪೋವನ ಮನೆಹಳ್ಳಿ ಕ್ಷೇತ್ರದ ಮಠಾಧೀಶ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಸೋಮವಾರಪೇಟೆ ತಾಲೂಕು ಶನಿವಾರಸಂತೆ ವಲಯದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಕೌಟುಂಬಿಕ ಸೌಹಾರ್ದತೆ ಹಾಗೂ ಗ್ರಾಮ ಸುಭೀಕ್ಷೆಗಾಗಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ನಂತರ ಹಮ್ಮಿಕೊಂಡಿದ್ದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಯಕದಿಂದ ಜೀವನ ಹಸನವಾಗುತ್ತದೆ. ಜೀವನದಲ್ಲಿ ಇರುವುದರಲ್ಲೇ ತೃಪ್ತಿ ಪಡೆದುಕೊಂಡರೆ ಸಂತೃಪ್ತಿಯ ಜೀವನ ಸಾಗಿಸಬಹುದು. ಆದರೆ ಇಂದಿನ ಜನರಲ್ಲಿ ತೃಪ್ತಿಗೆ ಕೊನೆಯೇ ಇಲ್ಲ, ಆಸ್ತಿ, ಹಣ ಸಂಪಾದನೆ ಶ್ರೀಮಂತಿಕೆ ಇದ್ದರೂ ಸಾಕಾಗುವುದಿಲ್ಲ ಇತ್ತ ನೆಮ್ಮದಿಯ ಜೀವನವನ್ನೂ ನಡೆಸುತ್ತಿಲ್ಲ ನಾವು ಅನ್ನ, ನೀರು ಹಾಗೂ ಮಾತು ಇವು ಮೂರನ್ನು ಸಾಕು ಎನ್ನುವಂತೆ ನಮಗೆ ದೇವರು ಕರುಣಿಸಿರುವುದರಲ್ಲಿ ತೃಪ್ತಿ ಪಡೆದುಕೊಂಡರೆ ಸುಖಿ ಜೀವನ ನಡೆಸಬಹುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆಯವರು ಮಹಿಳಾ ಸಬಲೀಕರಣ, ಸುಭೀಕ್ಷ ಸಮಾಜ ಚಿಂತನೆಯಲ್ಲಿ ಸ್ಥಾಪಿಸಿದ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಇಂದು ಸಮಾಜ ಸುಭೀಕ್ಷೆಯಿಂದ ಸಾಗುತ್ತಿದೆ. ಸಂತೃಪ್ತಿ ಜೀವನಕ್ಕಾಗಿ ಸಂಸ್ಥೆಯಿಂದ ಹಮ್ಮಿಕೊಳ್ಳುತ್ತಿರುವ ಧಾರ್ಮಿಕ ಪೂಜಾ ಕಾರ್ಯದಿಂದ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗುತ್ತಿದೆ ಎಂದು ಶ್ಲಾಘಿಸಿದ ಶ್ರೀಗಳು ಆಧುನಿಕತೆಯು ಸಮಾಜಕ್ಕೆ ಮಾರಕವಾಗುತ್ತಿರುವ ಇಂದಿನ ದಿನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಅಗತ್ಯ ಇದೆ ಎಂದರು.

ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ಶಿಕ್ಷಕ ಕೆ.ಪಿ.ಜಯಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ, ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಇರುತ್ತದೆ. ಸ್ವಚ್ಛ ಮನಸು ಇದ್ದಲ್ಲಿ ಸಮಾಜವನ್ನೂ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸ್ವಚ್ಛ ಮಾಡಿಕೊಂಡರೆ ತನ್ನ ಸಂಸಾರದಲ್ಲಿ ಮತ್ತು ಸಮಾಜದಲ್ಲಿ ಸ್ವಚ್ಛವಾದ ಬದುಕು ಸಾಗಿಸಬಹುದು ಎಂದರು.

ಹಣ, ಆಸ್ತಿಗಳಿಸುವುದೆ ತನ್ನ ಗುರಿ ಎಂದೇ ಜೀವನ ನಡೆಸುತ್ತಿರುವವರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸರಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ನೆಮ್ಮದಿಯ ಜೀವನ ನಡೆಸುವ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಧರ್ಮ, ಜಾತಿಗಿಂತ ಮಿಗಿಲಾದ ಸಂಸ್ಥೆಯಾಗಿದ್ದು ಸಂಸ್ಥೆಯ ಯೋಜನೆಗಳ ಮೂಲಕ ಸಮಾಜದಲ್ಲಿ ನೊಂದವರ, ಬಡವರ ನೆರವಿಗೆ ಸಹಾಯ ಮಾಡುತ್ತಿದೆ ಎಂದರು.

ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಎಚ್.ರೋಹಿತ್ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆಯವರನ್ನು ತಮ್ಮ ಸಂಸ್ಥೆಯ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತಹ ಮಾತಿನಂತೆ ಜನರಿಗೆ ಉಪಯೋಗವಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಇದರಲ್ಲಿ ವರಮಹಾಲಕ್ಷ್ಮಿ ಪೂಜೆಯೂ ಒಂದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಳಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಬಿ.ನಾಗರಾಜು, ಹಿರಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಲ್.ಸುಬ್ಬಯ್ಯ ಮಾತನಾಡಿದರು. ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಎಸ್.ಪಿ.ಭಾಗ್ಯ ಅಧ್ಯಕ್ಷತೆ ವಹಿಸಿದ ಸಭಾ ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತ ಹರೀಶ್, ಮಧ್ಯವರ್ಜನ ಶಿಬಿರ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ರಕ್ಷಿತ್‍ ಗೌಡ, ಉಪಾಧ್ಯಕ್ಷ ಎಸ್. ಎಸ್. ದಿವಾಕರ್, ಪ್ರಮುಖರಾದ ಸಿ.ಜೆ.ಗಿರೀಶ್, ವಲಯ ಮೇಲ್ವಿಚಾರಕ ನಾಗರಾಜ್, ಸೇವಾ ಪ್ರತಿನಿಧಿಗಳು, ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.