ಭಾನುವಾರ ಮುಂಜಾನೆ ಅತ್ತ ಮೂಡಣದಲ್ಲಿ ಸೂರ್ಯೋದಯ, ಹಕ್ಕಿಗಳ ಚಿಲಿಪಿಲಿ ಗಾನ, ಇತ್ತ ಕೃಷ್ಣಮಠದಲ್ಲಿ ವೈದಿಕರ ವೇದಘೋಷಗಳ ನಡುವೆ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮುಂದಿನ ಎರಡು ವರ್ಷಗಳ ಕೃಷ್ಣನ ಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸಿದರು.
ಸುಭಾಶ್ಚಂದ್ರ ಎಸ್.ವಾಗ್ಳೆ ಉಡುಪಿ: ಭಾನುವಾರ ಮುಂಜಾನೆ ಅತ್ತ ಮೂಡಣದಲ್ಲಿ ಸೂರ್ಯೋದಯ, ಹಕ್ಕಿಗಳ ಚಿಲಿಪಿಲಿ ಗಾನ, ಇತ್ತ ಕೃಷ್ಣಮಠದಲ್ಲಿ ವೈದಿಕರ ವೇದಘೋಷಗಳ ನಡುವೆ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮುಂದಿನ ಎರಡು ವರ್ಷಗಳ ಕೃಷ್ಣನ ಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸಿದರು.
ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಹೇಮಂತ ಋತುವಿನ ಮಕರ ಮಾಸದ ಭಾನುವಾರ ಮುಂಜಾನೆ 6.30ಕ್ಕೆ ನಿರ್ಗಮನ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರನ್ನು ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿಸಿ, ಕೃಷ್ಣಮಠದ ಕೀಲಿ ಕೈ, ಅಕ್ಷಯಪಾತ್ರೆಗಳನ್ನು ಹಸ್ತಾಂತರಿಸಿ, ಕೈಹಿಡಿದು ಸುವರ್ಣ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ, ಅಧಿಕೃತವಾಗಿ ಕೃಷ್ಣನ ಪರ್ಯಾಯ ಪೂಜಾಧಿಕಾರವನ್ನು ಹಸ್ತಾಂತರಿಸಿದರು. ಇದಕ್ಕೆ ಮೈಸೂರು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಒಡೆಯರ್ ಮತ್ತು ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥರು ಸಾಕ್ಷಿಗಳಾದರು.ಜೋಡುಕಟ್ಟೆಯಿಂದ ಮೆರವಣಿಗೆ: ಇದಕ್ಕೆ ಮೊದಲು ಶ್ರೀ ವೇದವರ್ಧನ ತೀರ್ಥರು ಇತರ ಏಳು ಮಠಾಧೀಶರೊಂದಿಗೆ ಮೇನೆಗಳಲ್ಲಿ ಕುಳಿತು ನಗರದ ಜೋಡುಕಟ್ಟೆಯಿಂದ ವೈಭವೋಪೇತವಾದ ಮೆರವಣಿಗೆಯಲ್ಲಿ 5.45ಕ್ಕೆ ರಥಬೀದಿಯನ್ನು ಪ್ರವೇಶಿಸಿದರು. ಅಲ್ಲಿಂದ ಮಂಗಳವಾದ್ಯಗಳೊಂದಿಗೆ ನಡೆಮಡಿಯ ಮೇಲೆ ನಡೆದುಕೊಂಡು ಬಂದು ಕನಕನ ಕಿಂಡಿಯಲ್ಲಿ ಕೃಷ್ಣದರ್ಶನಗೈದು ದಾನಾದಿಗಳನ್ನು ನೆರವೇರಿಸಿದರು, ನಂತರ ಅನಂತೇಶ್ವರ - ಚಂದ್ರಮೌಳಿಶ್ವರ ದೇವಾಲಯಗಳಲ್ಲಿ ಕೈಮುಗಿದು, 6.15ಕ್ಕೆ ಕೃಷ್ಣಮಠವನ್ನು ಪ್ರವೇಶಿಸಿದರು. ಅಲ್ಲಿ ಅವರನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಬರ ಮಾಡಿಕೊಂಡರು. ನಂತರ ಸಂಪ್ರದಾಯಬದ್ಧವಾಗಿ ಕೃಷ್ಣ ಪೂಜಾಧಿಕಾರ ಅಧಿಕಾರ ಹಸ್ತಾಂತರ ನಡೆಯಿತು.ಆ ಬಳಿಕ ನೂತನ ಪರ್ಯಾಯ ಪೀಠಾಧಿಪತಿ ಶಿರೂರು ಶ್ರೀಪಾದರು ನಿರ್ಗಮನ ಶ್ರೀ ಪುತ್ತಿಗೆ ಶ್ರೀಪಾದದ್ವಯರನ್ನು ಅವರ ಮಠಕ್ಕೆ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಇತರ ಏಳು ಮಠಾಧಿಪತಿಗಳು ಕೃಷ್ಣಮಠದ ಬಡಗು ಮಾಳಿಗೆಗೆ ಬಂದು ಅರಳುಗದ್ದಿಗೆ ಮೇಲೆ ಪವಡಿಸಿದರು. ಅವರಿಗೆ ಪರ್ಯಾಯ ಪೀಠಾಧೀಶರು ಗಂಧೋಪಚಾರಗಳನ್ನು ನಡೆಸಿದರು, ಶ್ರೀ ಮಠದ ದಿವಾನ ಉದಯಕುಮಾರ್ ಸರಳತ್ತಾಯ ದಂಪತಿ ಎಲ್ಲ ಮಠಾಧಿಪತಿಗಳಿಗೆ ಮಾಲಿಕೆ ಮಂಗಳಾರತಿ ನೆರವೇರಿಸಿದರು.ಅಲ್ಲಿಂದ ಸುಮಾರು 7.30ಕ್ಕೆ ಮಠಾಧಿಪತಿಗಳೆಲ್ಲರೂ ಭವ್ಯವಾಗಿ ಶೃಂಗರಿಸಲ್ಪಟ್ಟಿದ್ದ ರಾಜಾಂಗಣದ ಬಹಿರಂಗ ದರ್ಬಾರ್ ಸಭೆಗೆ ಆಗಮಿಸಿದರು. ಅಲ್ಲಿ ಮಠಾಧಿಪತಿಗಳಿಂದ ಆಶೀರ್ವಚನ, ಅತಿಥಿಗಳಿಂದ ಶುಭಾಶಂಸನೆ, ಪಂಡಿತರಿಗೆ ಸನ್ಮಾನ, ನೂತನ ಅಧಿಕಾರಿ ವರ್ಗದವರ ಘೋಷಣೆಗಳು ನಡೆದವು. 9.30ಕ್ಕೆ ಪ್ರಪ್ರಥಮ ಬಾರಿ ಪರ್ಯಾಯ ಪೀಠಾರೋಹಣ ಮಾಡಿರುವ 21 ಹರೆಯದ ಶ್ರೀ ವೇದವರ್ಧನ ತೀರ್ಥರು ಶ್ರೀ ಕೃಷ್ಣನಿಗೆ ಪ್ರಥಮ ಬಾರಿಗೆ ಮಹಾಮಂಗಳಾರತಿ ಬೆಳಗಿ ಕೃಷ್ಣ ಪೂಜಾ ಕೈಂಕರ್ಯವನ್ನು ವಿಧ್ಯುಕ್ತವಾಗಿ ಆರಂಭಿಸಿದರು. ಇದರೊಂದಿಗೆ ಕೃಷ್ಣಮಠದಲ್ಲಿ ಮುಂದಿನ 2 ವರ್ಷಗಳ ಕಾಲ ಶಿರೂರು ಮಠದ ಪರ್ಯಾಯ ಪರ್ವ - ಆಡಳಿತ ಆರಂಭವಾಯಿತು.