ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನ. 28ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಉಡುಪಿ ನಗರಲ್ಲಿ ಸುಮಾರು 1 ಕಿ.ಮೀ. ‘ರೋಡ್ ಶೋ’ ನಡೆಸಲಿದ್ದಾರೆ. ಈ ರೋಡ್ ಶೋವನ್ನು 30 ಸಾವಿರ ಮಂದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ವೀಕ್ಷಿಸಲಿದ್ದಾರೆ.
ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನ. 28ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಉಡುಪಿ ನಗರಲ್ಲಿ ಸುಮಾರು 1 ಕಿ.ಮೀ. ‘ರೋಡ್ ಶೋ’ ನಡೆಸಲಿದ್ದಾರೆ. ಈ ರೋಡ್ ಶೋವನ್ನು ಸುಮಾರು 30 ಸಾವಿರ ಮಂದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ವೀಕ್ಷಿಸಲಿದ್ದಾರೆ.ಈ ಬಗ್ಗೆ ಮಂಗಳವಾರ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.
ಮೋದಿ ಅವರ ಆಗಮನಕ್ಕಾಗಿಯೇ ಆದಿ ಉಡುಪಿ ಮೈದಾನದಲ್ಲಿ ಹೆಚ್ಚುವರಿ ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗಿದೆ. ಬುಧವಾರ ದೆಹಲಿಯಿಂದ ಆಗಮಿಸಿದ ವಾಯುಸೇನೆಯ ಅಧಿಕಾರಿಗಳು ಅವುಗಳ ಗುಣಮಟ್ಟವನ್ನು ಪರೀಕ್ಷಿಸಿದರು. ನಂತರ ವಾಯುಸೇನೆಯ 3 ಹೆಲಿಕಾಪ್ಟರ್‌ಗಳು ಬಂದು ಆದಿಉಡುಪಿ ಆಕಾಶದಲ್ಲಿ ಅನೇಕ ಬಾರಿ ಸುತ್ತು ಹೊಡೆದು, ಈ ಹೆಲಿಪ್ಯಾಡ್‌ನಲ್ಲಿ ಇಳಿಯುವ ಮತ್ತು ಟೇಕಾಫ್ ಮಾಡುವ ಬಗ್ಗೆ ರಿಹರ್ಸಲ್ ನಡೆಸಿ, ಹೆಲಿಪ್ಯಾಡ್‌ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡರು
ಪ್ರಧಾನಿ ಮೋದಿ ಅವರು ಪೂರ್ವಾಹ್ನ 11.40ಕ್ಕೆ ಆದಿ ಉಡುಪಿ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ಬನ್ನಂಜೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆರಂಭವಾಗುವ ರೋಡ್ ಶೋ ಮೂಲಕ, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸಂಕ ವೃತ್ತದ ಮೂಲಕ 12. ಗಂಟೆಗೆ ಶ್ರೀ ಕೃಷ್ಣ ಮಠವನ್ನು ತಲುಪಿ, ಶ್ರೀ ಕೃಷ್ಣ ದರ್ಶನ ಪಡೆಯಲಿದ್ದಾರೆ.
ಪ್ರಧಾನಿಯಾದ ಬಳಿಕ ಉಡುಪಿ ಕೃಷ್ಣಮಠಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ವಿಭಿನ್ನಲಾಗಿ ಸ್ವಾಗತಿಸಲಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಲ್ಸಂಕ ವೃತ್ತದವರೆಗೆ ಭವ್ಯ ರೋಡ್ ಶೋನಲ್ಲಿ ಮೋದಿ ಆಗಮಿಸುತ್ತಾರೆ. ಅವರನ್ನು ಸ್ವಾಗತಿಸಿ 3 ಕಡೆಗಳಲ್ಲಿ ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ವೇಷ, ಹುಲಿ ವೇಷ, ಶ್ರೀ ಕೃಷ್ಣ ವೇಷದಾರಿಗಳ ಪ್ರದರ್ಶನ ನಡೆಯಲಿದೆ. ರಸ್ತೆಯ ಇಕ್ಕೆಲಗಳಲ್ಲಿ 30 ಸಾವಿರ ಅಭಿಮಾನಿಗಳಿಗೆ ಮೋದಿ ಅವರನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ 1,112 ಬೂತುಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರಲು ವಿಶೇಷ ವ್ಯವಸ್ಥೆಗಳನ್ನೂ ಮಾಡಲಾಗಿದೆ. 2018ರಲ್ಲಿ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಉಡುಪಿಗೆ ಬಂದ ಬಳಿಕ ಅವರನ್ನು ಹತ್ತಿರದಿಂದ ನೋಡುವ ಸದವಕಾಶ ಜಿಲ್ಲೆಯ ಜನರಿಗೆ ಲಭಿಸುತ್ತಿದೆ.
ಮೋದಿ ಅವರೊಂದಿಗೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ, ಬಿ.ವೈ.ರಾಘವೇಂದ್ರ ಸಹಿತ ಜಿಲ್ಲೆಯ ಶಾಸಕರು, ರಾಜ್ಯದ ಪ್ರಮುಖ ನಾಯಕರು ಈ ಭಾವನಾತ್ಮಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನವೀನ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಶಿಲ್ಪಾ ಸುವರ್ಣ, ರೇಶ್ಮಾ ಉದಯ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಶ್ರೀಕಾಂತ್ ನಾಯಕ್, ರತನ್ ರಮೇಶ್ ಉಪಸ್ಥಿತರಿದ್ದರು.
ಹುಲಿ, ಯಕ್ಷ , ಕೃಷ್ಣ ವೇಷಧಾರಿಗಳು
ಬನ್ನಂಜೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ರೋಡ್ ಶೋ ಆರಂಭವಾಗಲಿದೆ, ಮೋದಿ ತಮ್ಮ ಭದ್ರತೆಯ ವಿಶೇಷ ಕಾರಿನಲ್ಲಿ ಆಗಮಿಸಲಿದ್ದಾರೆ. ನಡುವೆ ನಾರಾಯಣ ಗುರು ವೃತ್ತ, ಜಯಲಕ್ಷ್ಮೀ ಸಿಲ್ಕ್ಸ್ ಜಂಕ್ಷನ್ ಮತ್ತು ನಗರ ಬಸ್ ನಿಲ್ದಾಣಗಳಲ್ಲಿ ಮಿನಿ ವೇದಿಕೆಯಲ್ಲಿ ಹುಲಿವೇಷ, ಯಕ್ಷಗಾನ ವೇಷ ಮತ್ತು ಕೃಷ್ಣವೇಷಧಾರಿಗಳು ಪ್ರದರ್ಶನ ನೀಡಲಿದ್ದಾರೆ. ಈ 3 ಕಡೆಗಳಲ್ಲಿ ಮೋದಿ ಕಾರಿನಿಂದ ಇಳಿದು ಕೆಲ ಹೆಜ್ಜೆ ನಡೆದು ಜನರತ್ತ ಕೈಬೀಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ನವೀನ್ ಶೆಟ್ಟಿ ತಿಳಿಸಿದರು.
ಭಕ್ತರಿಗೆ ಕೃಷ್ಣಮಠ ಮತ್ತು ರಥಬೀದಿಗೆ ಪ್ರವೇಶಕ್ಕೆ ನಿರ್ಬಂಧ
ಈ ಮಧ್ಯೆ, ಮೋದಿ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ 3 ಗಂಟೆಯವರೆಗೆ ಭಕ್ತರಿಗೆ ಕೃಷ್ಣಮಠ ಮತ್ತು ರಥಬೀದಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದ್ದು, ಉಡುಪಿ ತುಂಬೆಲ್ಲಾ ಪೊಲೀಸರೇ ಕಂಡು ಬರುತಿದ್ದಾರೆ. ಆದಿಉಡುಪಿಯಿಂದ ಕಲ್ಸಂಕ ವೃತ್ತದವರೆಗೂ ಎರಡೂ ಕಡೆಗೆ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಎಲ್ಲೆಡೆ, ಕೇಸರಿ ಭಗವಾಧ್ವಜ, ಮೋದಿ ಸ್ವಾಗತಿಸುವ ಕಟೌಟ್‌ಗಳು, ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದ್ದು, ಇಡೀ ಉಡುಪಿ ಕೇಸರಿಮಯವಾಗಿದೆ.
