ಸಾರಾಂಶ
ಹಾಸನ : ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ, ಪೆನ್‌ಡ್ರೈವ್ ಪ್ರಕರಣ, ಎಸ್‌ಐಟಿ ತನಿಖೆ, ಸಂತ್ರಸ್ತೆಯರು.. ಹೀಗೆ ಸಾಲು ಸಾಲು ಕಳಂಕಗಳಿಗೆ ತುತ್ತಾಗಿದ್ದ ಹಾಸನ ಜಿಲ್ಲೆಯಲ್ಲೀಗ ಜೆಡಿಎಸ್ ಯುಗಾಂತ್ಯಗೊಂಡಿದೆ.
ಮಂಗಳವಾರ ನಡೆದ ಲೋಕಸಭೆ ಚುನಾವಣೆಯ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ 43,756 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಜೆಡಿಎಸ್‌ನ ಎರಡು ದಶಕದ ಭದ್ರಕೋಟೆ ಛಿದ್ರವಾಗಿದೆ. ಶ್ರೇಯಸ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಲಿ ಎಸ್‌ಐಟಿ ಕಸ್ಟಡಿಯಲ್ಲಿರುವ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಭಾರಿ ಅಂತರದ ಮತಗಳಿಂದ ಗೆಲವು ಸಾಧಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ 15 ಜನ ಅಭ್ಯರ್ಥಿಗಳು ಕಣದಲ್ಲಿದ್ದು ಪ್ರಮುಖವಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,36,610 ಮತದಾರರಿದ್ದು ಇವರಲ್ಲಿ 13,48,966 ಮತದಾರರು ಮತ ಚಲಾವಣೆ ಮಾಡಿದ್ದರು.
ಒಟ್ಟಾರೆ ಶೇ.77.68 ಮತದಾನವಾಗಿತ್ತು, ಮೊದಲ ಸುತ್ತಿನ ಎಣಿಕೆಯಲ್ಲಿ 3,522 ಮತಗಳ ಅಂತರದಿಂದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮುನ್ನಡೆ ಕಾಯ್ದುಕೊಂಡು ಬಂದಿದ್ದರು, ಮತ ಎಣಿಕೆಯ 3 ಮತ್ತೆ 4ನೇ ಸುತ್ತು ಮುಗಿದ ನಂತರ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ ಮುನ್ನಡೆ ಕಾಯ್ದುಕೊಂಡು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ 821 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು, 7ನೇ ಸುತ್ತಿನಲ್ಲಿ 2,55,311 ಮತಗಳನ್ನು ಪಡೆದಿದ್ದ ಪ್ರಜ್ವಲ್ ರೇವಣ್ಣ 1,710 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು.
ಮತ್ತೊಮ್ಮೆ ಎಂಟನೇ ಸುತ್ತಿನಲ್ಲಿ 374 ಮತಗಳ ಮುನ್ನಡೆಯನ್ನು ಕಾಯ್ದುಕೊಂಡ ಪ್ರಜ್ವಲ್ ವಿರುದ್ಧ 9ನೇ ಸುತ್ತಿನಲ್ಲಿ ಶ್ರೇಯಸ್ ಪಟೇಲ್ 5,749 ಮತಗಳ ಮುನ್ನಡೆ ದಾಖಲಿಸಿದರು.
ಹತ್ತನೇ ಸುತ್ತಿನಲ್ಲಿಯೂ 4,14,183 ಮತಗಳನ್ನು ಪಡೆಯುವ ಮೂಲಕ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ 13,859 ಮತಗಳ ಮುನ್ನಡೆಯನ್ನು ಕಾಯ್ದುಕೊಂಡರಲ್ಲದೆ ಅಂತಿಮ ಸುತ್ತಿನವರೆಗೂ ಸಾವಿರಾರು ಮತಗಳ ಮುನ್ನಡೆಯೊಂದಿಗೆ ಅಂತಿಮವಾಗಿ 6,70,599 ಮತಗಳನ್ನು ಪಡೆಯುವ ಮೂಲಕ 43,756 ಮತಗಳ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.
ಶ್ರೇಯಸ್‌ಗೆ ಹೊ.ನ.ಪುರದಲ್ಲೇ ಹೆಚ್ಚು ಲೀಡ್ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ಗೆ ಹೊಳೆನರಸೀಪುರದಲ್ಲಿ ಅತಿ ಹೆಚ್ಚು 97,800 ಮತಗಳು ಬಂದಿದ್ದು ಪ್ರಜ್ವಲ್ ರೇವಣ್ಣ ಅವರಿಗೆ 80,193 ಮತಗಳು ಬಂದಿವೆ. ಕಡೂರಿನಲ್ಲಿ ಶ್ರೇಯಸ್ ಪಟೇಲ್‌ಗೆ 74,126 ಮತಗಳು ಬಂದಿದ್ದರೆ ಪ್ರಜ್ವಲ್ ರೇವಣ್ಣ ಅವರಿಗೆ 76,369 ಮತಗಳು ಬಂದಿದೆ.
ಕೈತಪ್ಪಿದ ಜೆಡಿಎಸ್ ಹಿಡಿತ ದೇವೇಗೌಡರ ಕುಟುಂಬದ ಬಿಗಿ ಹಿಡಿತದಿಂದ ಹಾಸನ ಲೋಕಸಭಾ ಕ್ಷೇತ್ರ ಕೈತಪ್ಪಿದಂತಾಗಿದೆ. 2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಜಯ ಗಳಿಸಿದ್ದರು. ಬಿಜೆಪಿಯ ಎ.ಮಂಜು 5,35,382 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. 2014ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ 5,09,841 ಮತಗಳನ್ನು ಪಡೆದು ಜಯ ಗಳಿಸಿದ್ದರು. ಕಾಂಗ್ರೆಸ್‌ನ ಎ.ಮಂಜು 4,09,378 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು.
ಶ್ರೇಯಸ್ ಪಟೇಲ್ ತಮ್ಮ ತಾಯಿ ಅನುಪಮಾ, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮುಖಂಡರಾದ ದೊಡ್ಡಮಗ್ಗೆ ಕೃಷ್ಣೇಗೌಡ, ಬಾಗೂರು ಮಂಜೇಗೌಡ, ಮುರುಳಿ ಮೋಹನ್, ಶ್ರೀಧರಗೌಡ, ಬನವಾಸೆ ರಂಗಸ್ವಾಮಿ, ಎಚ್.ಕೆ.ಮಹೇಶ್ ಹಾಗೂ ಇನ್ನೂ ಮುಂತಾದವರ ಜತೆಗೂಡಿ ಗೆಲುವಿನ ನಗೆ ಬೀರಿದರು. ಹಾಸನ ನಗರದ ಡೈರಿ ವೃತ್ತದ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಮತ ಎಣಿಕಾ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗೆಲುವಿನ ನಂತರ ಕಾರ್ಯಕರ್ತರು ಅಭಿಮಾನಿಗಳು ಬೆಂಬಲಿಗರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್.ಬಣ್ಣ ಹಾಕಿಕೊಂಡು ಸಂಭ್ರಮಿಸಿದ ಶ್ರೇಯಸ್ ಅಭಿಮಾನಿಗಳು. ಹಾಸನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೇಯಸ್ ಎಂ.ಪಟೇಲ್ ಅವರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಸತ್ಯಭಾಮ ಪ್ರಮಾಣ ಪತ್ರ ನೀಡಿದರು.