ಸಾರಾಂಶ
‘ಕಾಂಗ್ರೆಸ್ ನಾಯಕರು ಜೈ ಶ್ರೀರಾಮ್ ಘೋಷಣೆ ಮಾಡಬಾರದು ಎನ್ನಲು ಶ್ರೀರಾಮ ಬಿಜೆಪಿಯವರ ಅಪ್ಪನ ಮನೆ ಆಸ್ತಿಯೇ? ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಹಾಗೂ ಅವರ ಮಗ ಕುಮಾರ ಇಬ್ಬರೂ ಇದ್ದಾರೆ. ನಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊಟ್ಟೆ ಉರಿಯಿಂದ ಸುಳ್ಳು ಹರಡುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕಾಂಗ್ರೆಸ್ ನಾಯಕರು ಜೈ ಶ್ರೀರಾಮ್ ಘೋಷಣೆ ಮಾಡಬಾರದು ಎನ್ನಲು ಶ್ರೀರಾಮ ಬಿಜೆಪಿಯವರ ಅಪ್ಪನ ಮನೆ ಆಸ್ತಿಯೇ? ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಹಾಗೂ ಅವರ ಮಗ ಕುಮಾರ ಇಬ್ಬರೂ ಇದ್ದಾರೆ. ನಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊಟ್ಟೆ ಉರಿಯಿಂದ ಸುಳ್ಳು ಹರಡುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೈ ಶ್ರೀರಾಮ್ ಘೋಷಣೆ ಕೂಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮನ್ನು ಬಿಜೆಪಿ ನಾಯಕರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. ಶ್ರೀರಾಮ ಬಿಜೆಪಿಯವರ ಮನೆಯ ಆಸ್ತಿಯೇ? ರಾಮ ಯಾರ ಮನೆ ಆಸ್ತಿಯೂ ಅಲ್ಲ. ಗಾಂಧೀಜಿ ಅವರು ರಘುಪತಿ ರಾಘವ ರಾಜಾರಾಂ ಪತಿತಪಾವನ ಸೀತಾರಾಮ್ ಎಂದು ಹೇಳಿದ್ದು ಅಲ್ಲಿ ರಾಮ ಹಾಗೂ ಸೀತೆ ಇಬ್ಬರೂ ಇದ್ದಾರೆ. ಅವರು ನಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಈ ರೀತಿ ಟೀಕೆ ಮಾಡುತ್ತಾರೆ. ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ ದಿನ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದ ಧಾರ್ಮಿಕ ದತ್ತಿ ಇಲಾಖೆ ಮೂಲಕ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿತ್ತು. ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಕಾಂಗ್ರೆಸಿಗರು ಈ ಕೆಲಸ ಮಾಡುತ್ತಿದ್ದಾರೆ. ನಮಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂದು ಅಸೂಯೆಯಿಂದ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಬಿಜೆಪಿಯವರಂತೆ ನಾವು ಧರ್ಮದ ವಿಚಾರವಾಗಿ ರಾಜಕಾರಣ, ಧ್ವೇ಼ಷ ಬಿತ್ತುವ ಕೆಲಸ ಮಾಡುವುದಿಲ್ಲ. ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ, ಶಿವಕುಮಾರ ಹೆಸರಲ್ಲಿ ಶಿವ ಹಾಗೂ ಅವರ ಕುಮಾರ ಷಣ್ಮುಗ ಇದ್ದಾರೆ. ಹರಿಪ್ರಸಾದ್ ಅವರ ಹೆಸರಲ್ಲಿ ಹರಿ (ವಿಷ್ಣು) ಇದ್ದಾನೆ. ಕೃಷ್ಣ ಭೈರೇಗೌಡರ ಹೆಸರಲ್ಲಿ ಕೃಷ್ಣ ಇದ್ದಾನೆ. ನಾವು ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೆ, ಪೂಜೆ ನೂರಾದರೂ ಭಕ್ತಿವೊಂದೇ, ಕರ್ಮ ಹಲವಾದರೂ ನಿಷ್ಟೆಯೊಂದೇ, ದೇವನೊಬ್ಬ ನಾಮ ಹಲವು ಎಂದು ನಂಬಿರುವವರು ಎಂದರು.ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಹಜ್ ಸಮಿತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಇದೆ. ಸಂವಿಧಾನದ ಪರವಾಗಿ ನಾವು ಎಲ್ಲಾ ಧರ್ಮಕ್ಕೂ ಆದ್ಯತೆ ನೀಡುತ್ತಾ ಬಂದಿದ್ದೇವೆ. ಎಲ್ಲರಿಗೂ ಸಮಾನವಾಗಿ ಕಂಡು ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಆಡಳಿತ ಮಾಡುತ್ತಿದ್ದೇವೆ. ನಿಮ್ಮ ಕೈಯಲ್ಲು ಅಧಿಕಾರ ಇತ್ತು. ಆಗ ಜನಪರ ಕಾರ್ಯಕ್ರಮ ಯಾಕೆ ಮಾಡಲಿಲ್ಲ. ಈಗ ಅಧಿಕಾರ ಹೋದ ನಂತರ ಸಂಕಟಪಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.