ಶ್ರೀರಾಮ ಮಂದಿರ ಉದ್ಘಾಟನೆ ಪಕ್ಷದ ಕಾರ್ಯಕ್ರಮವಲ್ಲ: ಟೆಂಗಿನಕಾಯಿ

| Published : Dec 20 2023, 01:15 AM IST

ಶ್ರೀರಾಮ ಮಂದಿರ ಉದ್ಘಾಟನೆ ಪಕ್ಷದ ಕಾರ್ಯಕ್ರಮವಲ್ಲ: ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮಮಂದಿರ ಉದ್ಘಾಟನೆ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಉದ್ಘಾಟನೆಗೆ ಆಹ್ವಾನ ಕೊಡುವುದು, ಬಿಡುವುದು ಟ್ರಸ್ಟ್‌ ಕಮಿಟಿಗೆ ಬಿಟ್ಟ ವಿಚಾರ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿಗೆ ಆಹ್ವಾನ ಟ್ರಸ್ಟ್‌ ಕಮಿಟಿಗೆ ಬಿಟ್ಟ ವಿಚಾರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಶ್ರೀರಾಮಮಂದಿರ ಉದ್ಘಾಟನೆ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಉದ್ಘಾಟನೆಗೆ ಆಹ್ವಾನ ಕೊಡುವುದು, ಬಿಡುವುದು ಟ್ರಸ್ಟ್‌ ಕಮಿಟಿಗೆ ಬಿಟ್ಟ ವಿಚಾರ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರು ಮಂದಿರ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದಾರೆ. ಅಂದಿನ ಮೆರವಣಿಗೆಗೆ ನರೇಂದ್ರ ಮೋದಿ ಅವರು ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯಿಲ್ಲ, ಮೊದಲ ಹಂತದಲ್ಲಿ ಸ್ವಾಮೀಜಿಗಳನ್ನು ಕರೆದಿದ್ದಾರೆ. ಎರಡು, ಮೂರನೇ ಹಂತದಲ್ಲಿ ಕರೆಯಬಹುದು ಎಂದರು.

ಅಡ್ವಾಣಿ ಸರ್ವೋಚ್ಛ ನಾಯಕ:

ಅಡ್ವಾಣಿ ಅವರು ನಮ್ಮ ಸರ್ವೋಚ್ಚ ನಾಯಕರು, ಪ್ರತಿ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿ ಅವರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡಿರುತ್ತಾರೆ. ಪಕ್ಷದ ವಿಷಯ ಬಂದಾಗ ಅವರನ್ನು ಮುಂದಿಟ್ಟುಕೊಂಡೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ರಾಮಮಂದಿರ ನಿರ್ಮಾಣ ನಮ್ಮ ಪಕ್ಷದ ಅಜೆಂಡಾ ಅಲ್ಲ ಎಂದರು ಟೆಂಗಿನಕಾಯಿ.

ರಾಜಕೀಯಕ್ಕೆ ಬಳಸಿಲ್ಲ:

ಬೆಳಗಾವಿಯ ವಂಟಮೂರಿ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ, ಬದಲಾಗಿ ಕಾಂಗ್ರೆಸ್ ಇದನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಇದುವರೆಗೆ ಗೃಹ ಸಚಿವರನ್ನು ಬಿಟ್ಟರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಯಾವೊಬ್ಬ ಸಚಿವರು ಭೇಟಿಯಾಗಲಿಲ್ಲ. ಜಗದೀಶ್ ಶೆಟ್ಟರ್ ಸಹ ಹೋಗಿ ಮಾತನಾಡಿಸುವ ಕೆಲಸ ಮಾಡಲಿಲ್ಲ ಎಂದರು‌.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ, ಕ್ಷೇತ್ರಕ್ಕೆ ಬೇರೆ ಯಾವುದೇ ಆಕಾಂಕ್ಷಿಗಳಿಲ್ಲ. ಕೆಲವರು ಕೇಳಿದಕ್ಕೆ ಹೇಳಿಕೆ ಕೊಟ್ಟಿರಬಹುದು. ಆದರೆ, ನಮ್ಮ ಅಪೇಕ್ಷೆ ಪ್ರಹ್ಲಾದ ಜೋಶಿ ಅವರೇ ಅಭ್ಯರ್ಥಿ ಆಗಬೇಕೆಂಬುದು. ಪಕ್ಷ ಏನೂ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ ಎಂದರು.

ಶೆಟ್ಟರ್‌ ಪ್ರಭಾವ:

ಲೋಕಸಭಾ ಚುನಾವಣೆ ಮೇಲೆ ಶೆಟ್ಟರ್ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟೆಂಗಿನಕಾಯಿ, ಈ ಹಿಂದೆ ಜಗದೀಶ ಶೆಟ್ಟರ್ ಅವರು ಪಂಚರಾಜ್ಯ ಚುನಾವಣೆ ಮೇಲೆ ತಮ್ಮ ಪರಿಣಾಮ ಬೀರುತ್ತದೆ ಎಂದು ಹೇಳಿದರು ಅದರಂತೆ ನಿಜವಾಗಿಯೂ ಪರಿಣಾಮ ಬೀರಿದೆ. ಅವರು ಸೋಲು ಕಂಡಂತೆ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಸೋಲು ಕಂಡಿದೆ. ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಗೆ ಜಗದೀಶ್ ಶೆಟ್ಟರ್ ಅವರು ಸ್ಪರ್ಧೆ ಮಾಡಲಿ ಎಂದು ಶೇ. 100ರಷ್ಟು ಆಹ್ವಾನ ನೀಡುತ್ತೇನೆ. ಈ ಬಾರಿ ರಾಜ್ಯದಲ್ಲಿ 20-22 ಸ್ಥಾನದಲ್ಲಿ ಬಿಜೆಪಿ ಜಯಗಳಿಸಲಿದೆ. ಇದೀಗ ಕಾಂಗ್ರೆಸ್ ಕೇವಲ ಯಾವುದೋ ಹವಾ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಲೋಕಸಭಾ ಮುನ್ನ, ಬಳಿಕ ಬಹುದೊಡ್ಡ ರಾಜಕೀಯ ಬದಲಾವಣೆ ಆಗಲಿದೆ ಎಂದು ಅವರು ಭವಿಷ್ಯ ನುಡಿದರು.