ಬಾಣದಿಂದ ನೀರು ಚಿಮ್ಮಿಸಿದ್ದರು ಶ್ರೀರಾಮ!

| Published : Jan 22 2024, 02:15 AM IST

ಸಾರಾಂಶ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೂ ಅಯೋಧ್ಯೆ ಪ್ರಭು ಶ್ರೀರಾಮನ ನಂಟಿದೆ. ಮಾವು, ನೀಲಹಣ್ಣು, ಹುಣಸೆ ಮರದ ಬನದಲ್ಲಿ ಶ್ರೀರಾಮ ವಾಸ್ತವ್ಯ ಮಾಡಿ, ಲಿಂಗವನ್ನು ಪ್ರತಿಷ್ಠಾಪನೆ ಮಾಡಿ, ಲಿಂಗ ಪೂಜೆಗಾಗಿ ಶ್ರೀರಾಮಚಂದ್ರ ತಮ್ಮ ಬಾಣದಿಂದ ಬಾವಿ ತೋಡಿ ನೀರು ಚಿಮ್ಮುವಂತೆ ಮಾಡಿದ್ದರಿಂದ ಇಂದಿಗೂ ಆ ಬಾವಿ ಎಂತಹ ಬರ ಇದ್ದರೂ ನೀರು ಮಾತ್ರ ಬತ್ತಿಲ್ಲ. ಶ್ರೀರಾಮಚಂದ್ರ ತಾವು ತೋಡಿದ ಬಾವಿಯಿಂದ ಲಿಂಗಪೂಜೆಗೆ ಬಾವಿಯಿಂದ ತೀರ್ಥ ತಂದು ಪೂಜೆ ಮಾಡುತ್ತಿದ್ದರು. ಇದರಿಂದ ರಾಮತೀರ್ಥ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೂ ಅಯೋಧ್ಯೆ ಪ್ರಭು ಶ್ರೀರಾಮನ ನಂಟಿದೆ. ಮಾವು, ನೀಲಹಣ್ಣು, ಹುಣಸೆ ಮರದ ಬನದಲ್ಲಿ ಶ್ರೀರಾಮ ವಾಸ್ತವ್ಯ ಮಾಡಿ, ಲಿಂಗವನ್ನು ಪ್ರತಿಷ್ಠಾಪನೆ ಮಾಡಿ, ಲಿಂಗ ಪೂಜೆಗಾಗಿ ಶ್ರೀರಾಮಚಂದ್ರ ತಮ್ಮ ಬಾಣದಿಂದ ಬಾವಿ ತೋಡಿ ನೀರು ಚಿಮ್ಮುವಂತೆ ಮಾಡಿದ್ದರಿಂದ ಇಂದಿಗೂ ಆ ಬಾವಿ ಎಂತಹ ಬರ ಇದ್ದರೂ ನೀರು ಮಾತ್ರ ಬತ್ತಿಲ್ಲ. ಶ್ರೀರಾಮಚಂದ್ರ ತಾವು ತೋಡಿದ ಬಾವಿಯಿಂದ ಲಿಂಗಪೂಜೆಗೆ ಬಾವಿಯಿಂದ ತೀರ್ಥ ತಂದು ಪೂಜೆ ಮಾಡುತ್ತಿದ್ದರು. ಇದರಿಂದ ರಾಮತೀರ್ಥ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ.

ಹೀಗೆ ಶ್ರೀರಾಮಚಂದ್ರ ವಾಸ್ತವ್ಯ ಮಾಡಿದ ಹುಣಸೆ ಬನ ಹೊಂದಿದ, ನೀರು ಬತ್ತದ ಬಾವಿ, ಶ್ರೀರಾಮ ಪ್ರತಿಷ್ಠಾಪನೆ ಮಾಡಿದ ಲಿಂಗ, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಇರುವುದು ಇಂಡಿ ತಾಲೂಕಿನ ಅಥರ್ಗಾ ಗ್ರಾಮ ವ್ಯಾಪ್ತಿಯ ರಾಮತೀರ್ಥ ತಾಂಡಾದಲ್ಲಿ.

ಇದು ಪುರಾತನ ದೇವಾಲಯ ಎಂದು ಗ್ರಾಮಸ್ಥರು ಹೇಳುತ್ತಾರೆ. ಸುದೀರ್ಘ ಹೋರಾಟದ ಫಲವಾಗಿ ಈಗ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಶ್ರೀರಾಮನಿಗೂ ವಿಜಯಪುರ ಜಿಲ್ಲೆ ಇಂಡಿ ತಾಲೂಕಿಗೂ ಅವಿನಾಭಾವ ಸಂಬಂಧ. ಶ್ರೀರಾಮನು ಸೀತಾ ದೇವಿಯನ್ನು ಹುಡುಕುತ್ತಾ ಹೋಗುವಾಗ ಈ ಸ್ಥಳದಲ್ಲಿ ವಾಸ್ತವ್ಯ ಮಾಡಿ, ಲಿಂಗ ಪ್ರತಿಷ್ಠಾಪಿಸಿ, ಬಾವಿ ತೋಡಿ ಲಿಂಗಪೂಜೆ ಮಾಡಿ ಮುಂದೆ ಹೋಗಿದ್ದಾರೆ. ಹೀಗಾಗಿ ಆ ಸ್ಥಳದಲ್ಲಿ ಸಣ್ಣದಾದ ಚಾಲುಕ್ಯ ಶೈಲಿಯಲ್ಲಿ ದೇವಾಲಯ ನಿರ್ಮಿಸಿ, ದೇವಾಲಯದಲ್ಲಿ ಲಿಂಗ ಪ್ರತಿಷ್ಠಾಪಿಸಲಾಗಿದೆ. ಆ ದೇವಾಲಯಕ್ಕೆ ಹಿಂದಿನಿಂದಲೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತಿದೆ. ನಿತ್ಯ ಆರಾಧನೆ ಕೂಡ ನಡೆಯುತ್ತಿದೆ. ಸಂತೋಷ ಹೂಗಾರ ಎಂಬುವವರು ಈ ದೇವಾಲಯದ ಅರ್ಚಕರಾಗಿ ನಿತ್ಯ ಪೂಜೆ ಮಾಡುತ್ತಿದ್ದಾರೆ.

ಇಂಡಿ ತಾಲೂಕಿನ ಅಥರ್ಗಾ ಗ್ರಾಮ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ ಮಾರ್ಗವಾಗಿ ಗದಗ, ಕಿಷ್ಕಿಂದೆಗೆ ಶ್ರೀರಾಮ ಹೋದರು ಎನ್ನುವ ಐತಿಹ್ಯವಿದೆ. ಶ್ರೀರಾಮ ದೇವರು ಸೀತಾದೇವಿಯನ್ನು ಹುಡುಕುವ ಸಮಯದಲ್ಲಿ ಇಂಡಿ ತಾಲೂಕಿನ ಅಥರ್ಗಾ(ರಾಮತೀರ್ಥ), ಇನ್ನೊಂದು ಗದಗ(ಬೆಳದಡಿ) ಜಿಲ್ಲೆಯಾಗಿವೆ ಎಂದು ಹೇಳಲಾಗುತ್ತಿದೆ. ಅಥರ್ಗಾದ ರಾಮತೀರ್ಥ ಪ್ರದೇಶ ಆ ಕಾಲಕ್ಕೆ ಮಾವು, ಹುಣಸೆ, ನೀಲಹಣ್ಣಿನ ಮರಗಳಿಂದ ಕೂಡಿದ ದಟ್ಟ ಅರಣ್ಯ ಪ್ರದೇಶವಾಗಿತ್ತು. ಹೀಗಾಗಿ ಇಂದು ಸಹ ರಾಮತೀರ್ಥ ಪ್ರದೇಶದ ರಾಮಲಿಂಗೇಶ್ವರ ದೇವಸ್ಥಾನದ ಸುತ್ತಲೂ ಹಳೆಯ ಕಾಲದ ಹುಣಸೆ, ನೀಲಹಣ್ಣಿನ ಮರಗಳಿವೆ. ಮಾವಿನ ಮರಗಳು ಒಣಗಿವೆ.

ಶ್ರೀರಾಮಲಿಂಗೇಶ್ವರ ದೇವಸ್ಥಾನದ ಚಿಕ್ಕದಾದರೂ ಬೃಹತ್‌ ಗಾತ್ರದ ಕಲ್ಲುಗಳಿಂದ ಕೂಡಿದ ಸುಂದರ ಕೆತ್ತನೆ ಹೊಂದಿದ ದೇವಾಲಯ. ನಿಜಾಮರ ಆಳ್ವಿಕೆ ವೇಳೆ ಕೆಲ ಕಲ್ಲುಗಳು ವಿರೂಪಗೊಳಿಸಲಾಗಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಶ್ರೀರಾಮನ ಪಾದಸ್ಪರ್ಶದಿಂದ ನಿರ್ಮಾಣವಾದ ಬಾವಿ, ಲಿಂಗ ಪುರಾತನ ಕಾಲದಾಗಿದ್ದು, ಬಾವಿಯಲ್ಲಿನ ನೀರು ಹರಿದು ದೇವಾಲಯದ ಸುತ್ತಲೂ ಹರಿಯುತ್ತಿತ್ತು ಎಂದು ಹೇಳಲಾಗುತ್ತಿದೆ. ನೀರು ಹರಿದ ದೇವಾಲಯ ಸುತ್ತ ಇಂದಿಗೂ ಮರಳು ಭೂಮಿಯಿಂದ ಕೂಡಿದೆ.ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ನಾನು ಹುಟ್ಟಿ ಬೆಳೆದ ಗ್ರಾಮದಲ್ಲಿ ಶ್ರೀರಾಮ ದೇವರು ಪಾದಶ್ಪರ್ಷ ಮಾಡಿರುವುದು ನಾನು ಆ ಗ್ರಾಮದಲ್ಲಿ ಜನಿಸಿದ್ದು ನನ್ನ ಪುಣ್ಯ. ಮುಂಬರುವ ದಿನದಲ್ಲಿ ಶ್ರೀರಾಮ ವಾಸ್ತವ್ಯ ಮಾಡಿದ ಆ ಪುಣ್ಯ ಸ್ಥಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

-ರಮೇಶ ಜಿಗಜಿಣಗಿ, ಸಂಸದರು ವಿಜಯಪುರ.ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ರಾಮತೀರ್ಥ ತಾಂಡಾದಲ್ಲಿ ಪುರಾತನ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಇದೆ. ದೇವಾಸ್ಥಾನದ ಸುತ್ತಲೂ ಹಳೆಯ ಕಾಲದ ಹುಣಸೆ ಇತರೆ ಗಿಡಗಳು ಇವೆ. ಗೆಳೆಯ ಜಯರಾಮ ನಮ್ಮ ತಾಂಡಾದಲ್ಲಿರುವ ಶ್ರೀರಾಮಲಿಂಗೇಶ್ವರ ದೇವಾಲಯ ನೋಡಲು ಕರೆಸಿಕೊಂಡು ತೊರಿಸಿದ್ದಾನೆ. ಅಲ್ಲಿನ ಶ್ರೀರಾಮ ವಾಸ್ತವ್ಯ ಮಾಡಿದ ಕುರುಹು ಇವೆ.ಬಿಲ್ಲಿನಿಂದ ನೀರು ಚಿಮ್ಮಿಸಿದ ಐತಿಹ್ಯವೂ ಇದೆ.

-ಧನರಾಜ ಮುಜಗೊಂಡ, ಅರಣ್ಯ ಅಧಿಕಾರಿ ಇಂಡಿ.ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಬಳಿಯ ರಾಮತೀರ್ಥ ನಗರದಲ್ಲಿ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಸ್ಥಳದಲ್ಲಿ ಶ್ರೀರಾಮ ದೇವರು ವಾಸ್ತವ್ಯ ಮಾಡಿ ಪುಣ್ಯಕ್ಷೇತ್ರವನ್ನಾಗಿ ಮಾಡಿರುವುದು ನಮ್ಮ ಪುಣ್ಯ. ನಮ್ಮ ತೋಟವು ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿಯೇ ಇರುವುದರಿಂದ ನಿತ್ಯ ಪೂಜೆ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತೇನೆ. ಮುಂಬರುವ ದಿನದಲ್ಲಿ ಸಂಸದರ ನೇತೃತ್ವದಲ್ಲಿ ಈ ಸ್ಥಳ ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ.

-ಗಣಪತಿ ಬಾಣಿಕೋಲ, ತಾಪಂ ಸದಸ್ಯ ಅಥರ್ಗಾ.