ಶ್ರೀರಾಮಲಲ್ಲಾ ಪ್ರತಿಷ್ಠಾಪನೆ: ಶನಿವಾರಸಂತೆಯ ದೇವಳಗಳಲ್ಲಿ ವಿಶೇಷ ಪೂಜೆ

| Published : Jan 23 2024, 01:51 AM IST

ಶ್ರೀರಾಮಲಲ್ಲಾ ಪ್ರತಿಷ್ಠಾಪನೆ: ಶನಿವಾರಸಂತೆಯ ದೇವಳಗಳಲ್ಲಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರಸಂತೆ ಪಟ್ಟಣದಲ್ಲಿರುವ ಶ್ರೀ ಗಣಪತಿ, ಶ್ರೀ ರಾಮ ಮಂದಿರ, ಬನ್ನಿಮಂಟಪದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರಸಂತೆ ವಿವಿಧ ಹಿಂದೂಪರ ಸಂಘಟನೆ ವತಿಯಿಂದ ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಮುಂತಾದ ಪೂಜಾ ವಿಧಾನ ನಡೆದವು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆ ಸೋಮವಾರ ಶನಿವಾರಸಂತೆಯ ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಹವನ ಶ್ರದ್ಧಾಭಕ್ತಿಯಿಂದ ನೆರವೇರಿತು. ಎಲ್ಲೆಡೆ ಶ್ರೀರಾಮನ ಸ್ತುತಿ ಮೊಳಗಿತು. ಪ್ರತಿಯೊಂದು ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ಶನಿವಾರಸಂತೆ ಪಟ್ಟಣದಲ್ಲಿರುವ ಶ್ರೀ ಗಣಪತಿ, ಶ್ರೀ ರಾಮ ಮಂದಿರ, ಬನ್ನಿಮಂಟಪದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರಸಂತೆ ವಿವಿಧ ಹಿಂದೂಪರ ಸಂಘಟನೆ ವತಿಯಿಂದ ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಮುಂತಾದ ಪೂಜಾ ವಿಧಾನ ನಡೆದವು.

ಎಲ್‌ಇಡಿ ಪರದೆಯಲ್ಲಿ ವೀಕ್ಷಣೆ:

ಅಯೋಧ್ಯೆಯಲ್ಲಿ ಶ್ರೀಬಾಲರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಬಾಲರಾಮನ ಪ್ರತಿಷ್ಠಾಪನೆಯ ಪೂಜೆ ನೆರವೇರಿಸುತ್ತಿದ್ದ ದೃಶ್ಯವನ್ನು ಎಲ್‍ಇಡಿ ಮೂಲಕ ಭಕ್ತರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಬಾಲರಾಮನ ಪ್ರತಿಷ್ಠಾಪನೆ ಕಾರ್ಯ ನೆರವೇರಿಸುತ್ತಿದ್ದ ಸಂದರ್ಭ ಭಕ್ತರು ಎದ್ದುನಿಂತು ಕೈಮುಗಿದು, ಜೈ ಶ್ರೀರಾಮ್ ಎಂದು ಘೋಷಣೆ ಮೊಳಗಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಮಹಿಳೆಯರಿಂದ ಶ್ರೀರಾಮನ ಭಜನೆ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಪಾನಕ ವಿತರಣೆ ಮಾಡಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ವಿವಿಧ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು, ದೇವಸ್ಥಾನ ಸಮಿತಿ ಪ್ರಮುಖರು, ಸದಸ್ಯರು ಪ್ರಮುಖರು ಪಾಲ್ಗೊಂಡಿದ್ದರು.ಗೌಡಳ್ಳಿಯ ಹಿಂದೂ ಗೆಳೆಯರ ಬಳಗ ಪದಾಧಿಕಾರಿಗಳು ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ದೇವಸ್ಥಾನಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮಸ್ಥರಿಗೆ ಲಡ್ಡು ವಿತರಿಸಲಾಯಿತು. ಮಧ್ಯಾಹ್ನ ಬೀಟಿಕಟ್ಟೆ ಜಂಕ್ಷನ್‌ನಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ವೇಳೆ ಹಿಂದೂ ಗೆಳೆಯರ ಬಳಗದ ಪದಾಧಿಕಾರಿಗಳಾದ ಗೌಡಳ್ಳಿ ಸುನಿಲ್, ಸಂತೇರಿ ವಿನಯ್, ಶುಂಠಿ ಆಕಾಶ್, ಕೂಗೆಕೋಡಿ ಆದಿತ್ಯ, ಮಧು, ದೀಪು ಚನ್ನಾಪುರ ಅಶೋಕ್ ಭಾಗವಹಿಸಿದ್ದರು.ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಮುಳ್ಳೂರು ಸಮಿಪದ ಕಾರ್ಗೋಡು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಮಾಲಂಬಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನ, ಆಲೂರುಸಿದ್ದಾಪುರದ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಬಂಡಿಯಮ್ಮನ ದೇವಸ್ಥಾನ, ಕಂತೆಬಸವನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ, ಹಿತ್ಲುಗದ್ದೆ ಗ್ರಾಮದ ಶ್ರೀ ಮೃತ್ಯುಂಜಯ ದೇವಸ್ಥಾನ, ದೊಡ್ಡಳ್ಳಿಯ ಶ್ರೀ ಗಣಪತಿ ದೇವಸ್ಥಾನ, ಹೊಸಗುತ್ತಿಯ ಶ್ರೀಬಸವೇಶ್ವರ ದೇವಸ್ಥಾನ, ಬಡಬನಹಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.ಶ್ರೀ ಬಾಲರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಸಮಿಪದ ನೀರಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರೀರಾಮನ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಗ್ರಾಮದ ಬಾಲಕಿ ಎನ್.ಎ.ರಶ್ಮಿಕ ಶ್ರೀ ಬಾಲರಾಮನ ವೇಷ ಭೂಷಣತೊಟ್ಟು ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.