ಸಾರಾಂಶ
ಹೊಸಪೇಟೆ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ- ಪ್ರತಿಷ್ಠಾಪನೆ ನಡೆದ ಹಿನ್ನೆಲೆ ವಿಜಯನಗರ ಜಿಲ್ಲಾದ್ಯಂತ ಸೋಮವಾರ ಶ್ರೀರಾಮ ಜೈಕಾರ ಮೊಳಗಿತು. ಜಿಲ್ಲೆಯ ಮುಜರಾಯಿ ಇಲಾಖೆಯ ದೇವಸ್ಥಾನ ಸೇರಿದಂತೆ ಶ್ರೀರಾಮ, ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಹಂಪಿಯ ಶ್ರೀಮಾಲ್ಯವಂತ ರಘುನಾಥ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದಲ್ಲಿ ಭಕ್ತರು ದೀಪಾಲಂಕಾರ ಮಾಡಿ, ದೀಪೋತ್ಸವ ನಡೆಸಿದರು. ಶ್ರೀರಾಮನ ಭಜನೆ ಮಾಡಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಹಂಪಿಯಲ್ಲಿ ರಾಮಜಪ: ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಹಂಪಿಯ ವಿದ್ಯಾರಣ್ಯ ಮಠದ ಬಳಿ ವಿಶೇಷ ಹೋಮ ನಡೆಸಲಾಯಿತು. ತುಂಗಭದ್ರಾ ನದಿ ತೀರದಲ್ಲೂ ಹೋಮ ನೆರವೇರಿತು. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರು ಹಾಗೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದರು.
ಹೊಸಪೇಟೆಯಲ್ಲಿ ರಾಮನಾಮ: ನಗರದ ಭಟ್ಟರಹಳ್ಳಿ ಆಂಜನೇಯ ದೇವಾಲಯ, ಪಾದಗಟ್ಟೆ ಆಂಜನೇಯ ದೇವಾಲಯ, ಪಂಚಮುಖಿ ಆಂಜನೇಯ ದೇವಸ್ಥಾನ, ರಾಣಿಪೇಟೆ ಶ್ರೀರಾಮ ಮಂದಿರ, ರಾಮಾ ಟಾಕೀಸ್ ಬಳಿಯ ರಾಮಮಂದಿರ ಸೇರಿದಂತೆ ವಿವಿಧೆಡೆ ರಾಮಜಪ ನಡೆಯಿತು. ನಗರದ ಆಂಜನೇಯಸ್ವಾಮಿ ದೇವಾಲಯ, ಶ್ರೀರಾಮ ಮಂದಿರಗಳಲ್ಲಿ ಭಕ್ತರು ದೇವರ ದರ್ಶನ ಪಡೆದರು. ನಗರದ ಪಂಚಮುಖಿ ಆಂಜನೇಯ ದೇಗುಲ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸಮಾಜ ಸೇವಕಿ ರಾಣಿ ಸಂಯುಕ್ತಾ ಸಿಂಗ್ ಅವರು 20 ಸಾವಿರ ಲಾಡುಗಳನ್ನು ಭಕ್ತರಿಗೆ ಹಂಚಿದರು.ನಗರದ ಪಾದಗಟ್ಟೆ ಆಂಜನೇಯ ದೇವಸ್ಥಾನದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ಭಟ್ಟರಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾದ್ಯಂತ ರಾಮೋತ್ಸವ: ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲೂ ರಾಮೋತ್ಸವದ ಸಂಭ್ರಮ ಮನೆ ಮಾಡಿತ್ತು. ಜಿಲ್ಲೆಯ ಶ್ರೀರಾಮಮಂದಿರ, ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಮುಜರಾಯಿ ಇಲಾಖೆ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಜಿಲ್ಲೆಯ ಓಣಿ, ಓಣಿಗಳಲ್ಲೂ ಶ್ರೀರಾಮನ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಆಟೋ ಚಾಲಕರು, ಹಿಂದೂಪರ ಕಾರ್ಯಕರ್ತರು, ಶ್ರೀರಾಮ, ಆಂಜನೇಯ ಭಕ್ತರು ಶ್ರೀರಾಮೋತ್ಸವದ ಜಯಘೋಷ ಮೊಳಗಿಸಿದರು. ಎಲ್ಲೆಡೆಯೂ ಶ್ರೀರಾಮನ ಜಯಘೋಷ ಮೊಳಗಿತು.ರಾಮತಾರಕ ಸಂಗತಾ ಯಜ್ಞ: ಹೊಸಪೇಟೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆ ಶ್ರೀರಾಮನಿಗೆ ಕಾಕಡಾರತಿ, ಪಂಚಪದಿ ಭಜನೆ ನಡೆಸಲಾಯಿತು. ನಂತರ ರಾಮನಾಮ ಜಪ ಸಂಕಲ್ಪ ನಡೆಯಿತು. ರಾಮತಾರಕ ಸಂಗತಾ ಯಜ್ಞವೂ ನಡೆಯಿತು. ಶ್ರೀರಾಮ, ಆಂಜನೇಯ ಚಿತ್ರವನ್ನು ಕುಂಚದಲ್ಲಿ ಕಲಾವಿದರೊಬ್ಬರು ವೇದಿಕೆಯಲ್ಲೇ ಅರಳಿಸಿದರು. ನಗರದ ಚಿಂತಾಮಣಿ ಮಠದ ಶಿವಾನಂದ ಭಾರತಿ ಸ್ವಾಮೀಜಿ, ದತ್ತಾವಧೂತ ಗುರುಗಳು ಮತ್ತಿತರ ಶ್ರೀಗಳು ಪಾಲ್ಗೊಂಡಿದ್ದರು. ವಿವಿಧ ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ನೇರ ಪ್ರಸಾರ ವೀಕ್ಷಣೆ: ಜಿಲ್ಲೆಯ ಹಳ್ಳಿ, ಪಟ್ಟಣ, ಹೋಬಳಿ ಹಾಗೂ ತಾಲೂಕು ಕೇಂದ್ರಗಳಲ್ಲೂ ರಾಮೋತ್ಸವದ ಸಂಭ್ರಮ ಮನೆ ಮಾಡಿತ್ತು. ಹಲವೆಡೆ ಶ್ರೀರಾಮ ಮಂದಿರದ ದೊಡ್ಡ ಪರದೆಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದನ್ನು ಹಳ್ಳಿಗಳಲ್ಲೂ ಜನರು ಟಿವಿ ಪರದೆಗಳಲ್ಲಿ ಮೂಲಕ ನೇರ ಪ್ರಸಾರ ವೀಕ್ಷಣೆ ಮಾಡಿದರು. ಮನೆ ಮನೆಗಳಲ್ಲೂ ರಾಮಲಲ್ಲಾನ ಪ್ರಾಣ, ಪ್ರತಿಷ್ಠಾಪನೆ ವೀಕ್ಷಣೆ ಮಾಡಿದರು.