ಸಾರಾಂಶ
ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಿಂದ ಪ್ರತಿವರ್ಷ ನೀಡುವ "ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ- 2024 " ಕ್ಕೆ ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ ಹಾಗೂ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಮೋಹನ್ ಆಳ್ವಾ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಿಂದ ಪ್ರತಿವರ್ಷ ನೀಡುವ "ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ- 2024 " ಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ, ಹಾಗೂ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಮೋಹನ್ ಆಳ್ವಾ ಆಯ್ಕೆಯಾಗಿದ್ದಾರೆ ಎಂದು ಶ್ರೀಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ತಿಳಿಸಿದ್ದಾರೆ.
ಯಶಸ್ವೀ ಚಂದ್ರಯಾನದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಸಾಧನೆ ಮೆರೆದ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ ಹಾಗೂ ದೇಶದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ, ಸಾಹಿತ್ಯಿಕ ಲೋಕದಲ್ಲಿ ಅದ್ವಿತೀಯ ಸಾಧನೆ ಮೆರೆದ ನುಡಿಸಿರಿ ಖ್ಯಾತಿಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ.ಮೋಹನ್ ಆಳ್ವಾ ಅವರು ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಫೆ.9ರಂದು ರಾತ್ರಿ 8 ಗಂಟೆಗೆ ನಾಲವಾರ ಶ್ರೀಮಠದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಉದ್ಘಾಟನೆ ಹಾಗೂ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಇಬ್ಬರೂ ಮಹನೀಯರು ಖುದ್ದಾಗಿ ಆಗಮಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ನಾಲವಾರ ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಿಂದ ಪ್ರತಿವರ್ಷ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಗಣ್ಯ ಸಾಧಕರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ,ಈಗಾಗಲೇ ನಾಡಿನ ಗಣ್ಯರಾದ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ಎಚ್.ಎಸ್. ವೆಂಕಟೇಶಮೂರ್ತಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ, ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ, ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೆವರು, ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ಡಾ.ನರಸಿಂಹಲು ವಡವಾಟಿ ಸೇರಿದಂತೆ ಹಲವು ಸಾಧಕರ ಮುಡಿಗೇರಿದೆ.
ಮಂಗಳಯಾನದ ಮೂಲಕ ವಿಕ್ರಮ ಸಾಧಿಸಿದ್ದ ಅಂದಿನ ಇಸ್ರೋ ಅಧ್ಯಕ್ಷರಾಗಿದ್ದ ಎ.ಎಸ್.ಕಿರಣಕುಮಾರರವರು ಕೂಡ ಸಿದ್ಧತೋಟೇಂದ್ರ ಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ. ಇದೇ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಗೆ ಭಾಜನರಾಗಿರುವ ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೆವರು ಅವರನ್ನು ವಿಶೇಷವಾಗಿ ಸತ್ಕರಿಸಿ ಗೌರವಿಸಲಾಗುವುದು ಎಂದು ಮಹಾದೇವ ಗಂವ್ಹಾರ ತಿಳಿಸಿದ್ದಾರೆ.