ಸಾರಾಂಶ
ಮಾಗಡಿ: ತಾಲೂಕಿನ ಸಾವನದುರ್ಗದ ಶ್ರೀ ಸಾವಂದಿ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಮ್ಮ ದೇವಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು. ಬ್ರಹ್ಮರಥೋತ್ಸವದಲ್ಲಿ ಕೆಂಗೇರಿ ಬಂಡೇಮಠದ ಪೀಠಾಧ್ಯಕ್ಷ ಸಚ್ಚಿದಾನಂದ ಸ್ವಾಮೀಜಿ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿತು.
ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ವೀರಗಾಸೆ ಕುಣಿತದೊಂದಿಗೆ ರಥದಲ್ಲಿ ಕೂರಿಸಲಾಯಿತು. ತಹಸೀಲ್ದಾರ್ ಡಿ.ಪಿ.ಶರತ್ ಕುಮಾರ್ ಬ್ರಹ್ಮರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಮಧ್ಯಾಹ್ನ 1ಗಂಟೆಗೆ ಬ್ರಹ್ಮರಥೋತ್ಸವದ ಮೆರವಣಿಗೆ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿಕೊಂಡರು.ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿ, ಪುಣ್ಯಕ್ಷೇತ್ರಗಳು ತಮ್ಮದೇ ಪುರಾಣ, ಇತಿಹಾಸ ಹೊಂದಿರುತ್ತವೆ. ಜಾತ್ರೆ ಉತ್ಸವಗಳು ಎಲ್ಲಾ ಜಾತಿ ಜನಾಂಗದವರು ಒಂದೆಡೆ ಸೇರಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಕ್ಷೇತ್ರದಲ್ಲಿ ದಿನನಿತ್ಯದ ಅನ್ನದಾಸೋಹ ನಡೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಾವನದುರ್ಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು, ಕ್ಷೇತ್ರದಲ್ಲಿ ನೆಲಸಿರುವ ಶ್ರೀಸಾವಂದಿ ವೀರಭದ್ರಸ್ವಾಮಿ ಮತ್ತು ಭದ್ರಕಾಳ್ಳಮ್ಮನವರ ದೇವಾಲಯವು ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಗಳಿಗೆ ಐತಿಹ್ಯವಿದ್ದು ದೇವಾಲಯಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು.ರಥೋತ್ಸವದಲ್ಲಿ ವೀರಗಾಸೆ ಕಲಾವಿದರ ಕುಣಿತ, ಪಟ್ಟದಕುಣಿತ, ಕಂಸಾಳೆ, ಕುದೂರು, ಮಹಿಳಾ ಚೆಂಡೆ ವಾದ್ಯ, ಜಾತ್ರೆಗೆ ಮೆರುಗು ನೀಡಿದವು. ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.
ಬ್ರಹ್ಮರಥೋತ್ಸವದ ಅಂಗವಾಗಿ ದೇವಸ್ಥಾನದ ದಾಸೋಹ ಸಮಿತಿ ಮತ್ತು ವಿವಿಧ ಸೇವಾಕರ್ತರಿಂದ ಅರವಂಟಿಕೆಗಳನ್ನು ಏರ್ಪಡಿಸಿ ಭಕ್ತರಿಗೆ ಅನ್ನ ಸಂಪರ್ತರ್ಪಣೆ ನಡೆಸಲಾಯಿತು. ರಥೋತ್ಸವದ ಅಂಗವಾಗಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.ಕಳ್ಳರ ಕೈಚಳಕ:
ಬ್ರಹ್ಮ ರಥೋತ್ಸವದಲ್ಲಿ ಭಕ್ತರ ನೂಕು ನುಗ್ಗುಲು ವೇಳೆ ರಾಮನಗರದ ಲಕ್ಷ್ಮೀಪುರ ಗ್ರಾಮದ ಪುಟ್ಟತಾಯಮ್ಮನ ಕೊರಳಲ್ಲಿದ್ದ 22 ಗ್ರಾಂ ಚಿನ್ನದ ಸರ ಕಳವಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಜಾತ್ರಾ ಮಹೋತ್ಸವದಲ್ಲಿ ಸಬ್ ಇನ್ಸ್‌ಪೆಕ್ಟರ್ ಬಸವರಾಜ್, ಆರ್‌ಐ ಸತೀಶ್ ಚಂದ್ರ, ಪಿಡಿಒ ಅಂಜನ್, ಗ್ರಾಮ ಲೆಕ್ಕಾಧಿಕಾರಿ ಅಕ್ಷತಾ, ಪ್ರಧಾನ ಅರ್ಚಕ ಎಸ್.ಮೃತ್ಯುಂಜಯಾರಧ್ಯ, ವಿದ್ವಾನ್ ಲೋಕೇಶಾರಾಧ್ಯ, ರುದ್ರೇಶಾರಾಧ್ಯ, ರೇಣುಕಾಪ್ರಸಾದ್, ಅರ್ಚಕರಾದ ರೇಣುಕಾರಾದ್ಯ, ನಿರಂಜನಾರಾಧ್ಯ, ಪಂಚಾಕ್ಷರಿ, ಶಿವಪ್ರಕಾಶ್, ನರಸಿಂಹ ಶೆಟ್ಟಿ, ನರಸಿಂಹ ನಾಯ್ಕ್, ದೊಡ್ಡಿ ಲೋಕೇಶ್, ಪೊಲೀಸ್ ಸಚ್ಚಿದಾನಂದಮೂರ್ತಿ, ಮುಖೇಶ್, ಚಕ್ರಬಾವಿ ಬಸವರಾಜು, ಲಕ್ಷ್ಮೀಪುರ ರುದ್ರೇಶ್, ಸುಹಾಸ್, ಜಗದೀಶ್, ದೊಡ್ಡಿ ನಾಗೇಶ್, ಪ್ರಮೋದ್, ನಾಗರಾಜ್, ಮಹೇಶ್ ಬೆಣ್ಣೆ, ಗಿರೀಶ್, ಮಧು, ರುದ್ರೇಶ್, ಕಿಶನ್, ದೇವಸ್ಥಾನದ ಪಾರುಪತ್ತೆಗಾರ ದೇವರಾಜ್, ಸಿಬ್ಬಂದಿಗಳಾದ ಹೇಮಂತ್, ಲೋಕೇಶ್ ಇತರರು ಪಾಲ್ಗೊಂಡಿದ್ದರು.