ಜಾತಿ ಎಣಿಸದೇ ಎಲ್ಲರ ಕಣ್ಣೀರು ಒರೆಸಿದ ಶ್ರೀ ವಿಶ್ವೇಶತೀರ್ಥರು

| Published : Jan 03 2025, 12:32 AM IST

ಜಾತಿ ಎಣಿಸದೇ ಎಲ್ಲರ ಕಣ್ಣೀರು ಒರೆಸಿದ ಶ್ರೀ ವಿಶ್ವೇಶತೀರ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಾಮಾಜಿಕ ಕಳಕಳಿ, ದೇಶಭಕ್ತಿ ಮೇಳೈಸಿದ ಮೇರು ವ್ಯಕ್ತಿತ್ವವಾಗಿದ್ದರು ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಡಾ. ಗುರುರಾಜ ಗುಡಿ ದಾವಣಗೆರೆಯಲ್ಲಿ ಬಣ್ಣಿಸಿದ್ದಾರೆ.

- ಪಂಚಮ ಆರಾಧನಾ ಮಹೋತ್ಸವದಲ್ಲಿ ಡಾ. ಗುರುರಾಜ ಗುಡಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಾಮಾಜಿಕ ಕಳಕಳಿ, ದೇಶಭಕ್ತಿ ಮೇಳೈಸಿದ ಮೇರು ವ್ಯಕ್ತಿತ್ವವಾಗಿದ್ದರು ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಡಾ. ಗುರುರಾಜ ಗುಡಿ ಬಣ್ಣಿಸಿದರು.

ನಗರದ ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಅಖಿಲ ಭಾರತ ಮಾಧ್ವ ಮಹಾಮಂಡಲ ದಾವಣಗೆರೆ ಜಿಲ್ಲಾ ಶಾಖೆ, ಶ್ರೀ ಪೇಜಾವರ ಅಧೋಕ್ಷಜ ಮಠದ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.

ಶ್ರೀ ವಿಶ್ವೇಶತೀರ್ಥರು ಜಾತಿ, ಮತ, ಪಂಥ ಭೇದವಿಲ್ಲದೇ ಎಲ್ಲರ ಕಣ್ಣೀರು ಒರೆಸಿದರು. ದೀನ, ದಲಿತರ ಸಂಕಷ್ಟಗಳಿಗೆ ಸ್ಪಂದಿಸಿದರು. ಶಾಲೆ, ಕಾಲೇಜು, ಹಾಸ್ಟೆಲ್ ಸ್ಥಾಪಿಸಿ ಶೈಕ್ಷಣಿಕ ಕೊಡುಗೆಯನ್ನೂ ನೀಡಿದರು ಎಂದರು.

ಸುದೀರ್ಘ ವರ್ಷಗಳ ಕಾಲ ಸನ್ಯಾಸ ಧರ್ಮ ನಿಷ್ಠೆಯಿಂದ ಪಾಲಿಸಿದ ಶ್ರೀಗಳು, ದೇಶಕ್ಕೆ ಅಪಾಯ ಬಂದಾಗಲೆಲ್ಲ ಮಿಡಿದು ರಾಷ್ಟ್ರಭಕ್ತಿ ಮೆರೆದರು. ಮತಾಂತರ ತಡೆಗೆ ಪ್ರಯತ್ನಿಸಿದರು. ಶ್ರೀ ವಿಶ್ವೇಶತೀರ್ಥರ ಶಿಷ್ಯಂದಿರ ಬಗ್ಗೆ ತಂದೆ, ತಾಯಿಗಿಂತ ಹೆಚ್ಚು ಕಾಳಜಿ ತೋರಿದರು, ಪ್ರೀತಿಯನ್ನು ನೀಡಿದರು. ಪಾಲಕರು ಮಕ್ಕಳಿಗೆ ಎಲ್ಲ ಸೌಲಭ್ಯ ನೀಡುತ್ತಾರೆ, ಆದರೆ ಧಾರ್ಮಿಕ ಸಂಸ್ಕಾರ ನೀಡುವಲ್ಲಿ ಹಿಂದೆ ಬಿದ್ದಿದ್ದಾರೆ. ಇದನ್ನು ಮನಗಂಡು ಗುರುಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದರು. ತ್ಯಾಗ, ವೈರಾಗ್ಯದ ಪ್ರತೀಕವಾಗಿದ್ದರು ಎಂದು ಹೇಳಿದರು.

ಪಂಡಿತ ವೆಂಕಟಗಿರೀಶಾಚಾರ್ ಮಾತನಾಡಿದರು. ಕಂಪ್ಲಿ ಗುರುರಾಜಾಚಾರ್, ಜಯತೀರ್ಥಾಚಾರ ವಡೇರ, ಹೋಟೆಲ್ ಉದ್ಯಮಿ ವಿಠ್ಠಲ ರಾವ್, ಅನಂತಯ್ಯ ಇದ್ದರು. ಸುಮೇಧಾ ಪ್ರಾರ್ಥಿಸಿದರು. ಇದಕ್ಕೂ ಮೊದಲು ಋಗ್ವೇದ ಸ್ವಾಹಾಕಾರ ಹೋಮದ ಪೂರ್ಣಾಹುತಿ ನೆರವೇರಿತು.

- - - -2ಕೆಡಿವಿಜಿ46:

ದಾವಣಗೆರೆಯಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಆರಾಧನಾ ಮಹೋತ್ಸವ ನಡೆಯಿತು.