ಮಾಂಗಲ್ಯಭಾಗ್ಯ ಯೋಜನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 8 ಜೋಡಿಗಳು

| Published : Feb 01 2024, 02:01 AM IST

ಮಾಂಗಲ್ಯಭಾಗ್ಯ ಯೋಜನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 8 ಜೋಡಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸರಳ ಸಾಮೂಹಿಕ ವಿವಾಹದ ಮೂಲಕ ಮದುವೆಯಾಗಿ ಹೊಸ ಬದುಕಿಗೆ ಕಾಲಿಟ್ಟಿರುವುದು ಸಂತೋಷ, ನಿಮ್ಮ ವಿವಾಹ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರುತ್ತೇನೆ ಎಂದರಲ್ಲದೆ, ಮದುವೆಗಳಲ್ಲಿ ದುಂದು ವೆಚ್ಚವನ್ನು ತಪ್ಪಿಸಲು ಹಾಗೂ ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಸರಳ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಬಡವರು ಇದರ ಸದುಪಯೋಗಪಡೆದುಕೊಳ್ಳಬೇಕು

-ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ನಡೆದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ನಂಜನಗೂಡು

ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿ ಮತ್ತು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವತಿಯಿಂದ ಮಾಂಗಲ್ಯಭಾಗ್ಯ ಯೋಜನೆಯಡಿಯಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಎಂಟು ಜೋಡಿಗಳು ಸತಿಪತಿಗಳಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಸಾಮೂಹಿಕ ವಿವಾಹದಲ್ಲಿ ಮಂಡ್ಯ ತಾಲೂಕಿನ ಒಂದು ಜೋಡಿ, ಮೈಸೂರು ತಾಲೂಕಿನ ಒಂದು ಜೋಡಿ, ನಂಜನಗೂಡು ತಾಲೂಕಿನ 3 ಜೋಡಿ, ನರಸೀಪುರ ತಾಲೂಕಿನ 2 ಜೋಡಿಯಾದರು.

ದೇವಾಲಯದ ವತಿಯಿಂದ ವರನಿಗೆ ಶರ್ಟ್, ಪಂಚೆ ಕೊಂಡುಕೊಳ್ಳಲು 5 ಸಾವಿರ, ವಧುವಿಗೆ ಸೀರೆ, ಕುಪ್ಪಸ ಕೊಂಡುಕೊಳ್ಳಲು 10 ಸಾವಿರ ರು. ಗಳನ್ನು ಮತ್ತು 8 ಗ್ರಾಂ ತೂಕದ ಚಿನ್ನದ ತಾಳಿ ಹಾಗೂ 2 ಚಿನ್ನದ ಗುಂಡುಗಳನ್ನು ಉಚಿತವಾಗಿ ವಿತರಿಸಲಾಯಿತು. ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನೂತನ ದಂಪತಿಗಳಿಗೆ ಮಾಂಗಲ್ಯ, ವಿತರಣೆ ಮಾಡಿದರು. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ಧೀಕ್ಷಿತ್, ನೇತೃತ್ವ ವಹಿಸಿದ್ದರು. ಶ್ರೀಕಂಠ ಜೋಯಿಷ್ ಅವರು ಮಂತ್ರಘೋಷ ನೆರವೇರಿಸಿದರು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವಕುಮಾರ್, ಬಿ.ಎಸ್. ಸುಪ್ರಿತಾ ಅವರನ್ನು ವರಿಸಿದರು, ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ಚಂದ್ರ ಮತ್ತು ಶಾಂತಿ, ನರಸೀಪುರ ತಾಲೂಕಿನ ವಡೆಯಾಂಡಹಳ್ಳಿ ಗ್ರಾಮದ ಸುನೀಲ್ ಮತ್ತು ಮಮತಾ, ನರಸೀಪುರ ತಾಲೂಕಿನ ಬಾಬು ಜಗಜೀವನ ಗ್ರಾಮದ ಕೆ. ಮಹದೇವ ಮತ್ತು ಎಂ. ರಕ್ಷಿತಾ, ನಂಜನಗೂಡು ಪಟ್ಟಣದ ಶಂಕರಪುರ ಬಡಾವಣೆಯ ಗುರುಸಿದ್ದ ಮತ್ತು ಮಹದೇವಿ, ಎನ್. ಮಹದೇವಸ್ವಾಮಿ ಮತ್ತು ಮಂಜುಳಾ, ಕೆಂಪಿಸಿದ್ದನಹುಂಡಿ ಗ್ರಾಮದ ಎಂ. ಶಶಿಕುಮಾರ ಮತ್ತು ಶಕೀಲಾ, ಗುಂಡ್ಲುಪೇಟೆ ತಾಲೂಕಿನ ಬೆಳವಾಡಿ ಗ್ರಾಮದ ಆರ್. ಮಹದೇವಶೆಟ್ಟಿ ಮತ್ತು ಎಂ. ರಾಜೇಶ್ವರಿ ಸರಳ ಸಾಮೂಹಿಕ ವಿವಾಹದಲ್ಲಿ ಮದುವೆಯಾದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ದೇವರ ಆಶೀರ್ವಾದದಿಂದ 8 ಜೋಡಿಗಳು ಸರಳ ಸಾಮೂಹಿಕ ವಿವಾಹದ ಮೂಲಕ ಮದುವೆಯಾಗಿ ಹೊಸ ಬದುಕಿಗೆ ಕಾಲಿಟ್ಟಿರುವುದು ಸಂತೋಷ, ನಿಮ್ಮ ವಿವಾಹ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರುತ್ತೇನೆ ಎಂದರಲ್ಲದೆ, ಮದುವೆಗಳಲ್ಲಿ ದುಂದು ವೆಚ್ಚವನ್ನು ತಪ್ಪಿಸಲು ಹಾಗೂ ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಸರಳ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಬಡವರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಲೋಕನಾಥ್ ಮಾತನಾಡಿ, ಬಡವರಿಗೆ ನೆರವಾಗುವ ಸದುದ್ದೇಶದೊಂದಿಗೆ ಸರ್ಕಾರ 2020ರಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಸರಳ ಸಾಮೂಹಿಕ ವಿವಾಹ ಏರ್ಪಡಿಸಲು ಮುಂದಾಯಿತು. ಕೊರೋನಾ ಕಾರಣದಿಂದ 2022ರಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಈಗ 2ನೇ ಬಾರಿಗೆ ಸಾಮೂಹಿಕ ವಿವಾಹ ಏರ್ಪಡಿಸಿ ಕಳೆದ ಎರಡು ತಿಂಗಳಿಂದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರವನ್ನು ನಡೆಸಲಾಗಿತ್ತು. ಅಂತಿಮವಾಗಿ 8 ಜೋಡಿಗಳು ಆಯ್ಕೆಯಾಗಿ ಸತಿಪತಿಗಳಾಗಿದ್ದಾರೆ ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸಿ.ಎಂ. ಶಂಕರ್, ನಗರಸಭಾ ಸದಸ್ಯರಾದ ಪ್ರದೀಪ್, ಗಾಯತ್ರಿ, ಎಸ್.ಪಿ. ಮಹೇಶ್, ಎನ್.ಎಸ್. ಯೋಗೀಶ್, ಯೋಗೀಶ್, ಸಿದ್ದಿಖ್, ದೇವಾಲಯದ ಇಓ ಜಗದೀಶ್, ಚಾಮುಂಡೇಶ್ವರಿ ದೇವಾಲಯದ ಇಒ ಕೃಷ್ಣ ಇದ್ದರು.