ಸಾರಾಂಶ
-ಶ್ರೀವೇದವ್ಯಾಸರ ಪೂಜೆ, ಶೋಭಾಯಾತ್ರೆ, ವಿದ್ಯಾರ್ಥಿಗಳ ಅನುವಾದ, ವ್ಯಾಖ್ಯಾರ್ಥ ಗೋಷ್ಠಿ
----ಕನ್ನಡಪ್ರಭ ವಾರ್ತೆ ರಾಯಚೂರು
ಜಗದ್ಗುರು ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮತ್ಸಮೀರಸಮಯಸಂವರ್ಧಿನಿ ಸಭಾ, ಶ್ರೀಮದನುವ್ಯಾಖ್ಯಾನ, ಶ್ರೀಮನ್ನ್ಯಾಯಸುಧಾ ಮಂಗಳಮಹೋತ್ಸವಕ್ಕೆ ಚಾಲನೆ ದೊರಕಿತು.ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ ಸಮಾರಂಭ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಸ್ತ್ರೋಸ್ತ್ರವಾಗಿ ನಡೆದವು.
ಭಾನುವಾರ ಬೆಳಗ್ಗೆ ಸುಕ್ಷೇತ್ರದ ಗ್ರಾಮದೇವತೆ ಮಂಚಾಲಮ್ಮದೇವಿ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮೂಲಬೃಂದಾವನಕ್ಕೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಲಾಯಿತು. ನಂತರ ಶ್ರೀಪಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮೂಲರಾಮದೇವರಿಗೆ ಸಂಸ್ಥಾನ ಹಾಗೂ ಶ್ರೀವೇದವ್ಯಾಸರ ಪೂಜೆ, ಮಹಾಮಂಗಳಾರತಿಯನ್ನು ಮಾಡಿದರು.ಬಳಿಕ ಶ್ರೀಗುರುರಾಯರ ಮೂಲಬೃಂದಾವನದ ಪಕ್ಕದಲ್ಲಿರುವ ದಶಾವತಾರ ಮಂಟಪದಲ್ಲಿ ಪಲ್ಲಕ್ಕಿಯಲ್ಲಿರಿಸಿದ ಶ್ರೀಮನ್ಯಾಯಸುಧಾ ಗ್ರಂಥಕ್ಕೆ ವಿವಿಧ ಮಠಗಳ ಪೀಠಾಧಿಪತಿಗಳು ಪೂಜೆಯನ್ನು ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶ್ರೀಮಠದ ಪ್ರಾಕಾರದಲ್ಲಿ ಶೋಭಾಯಾತ್ರೆ ಸಾಗಿತು.
ವಿಶೇಷವಾಗಿ ಅಲಂಕರಿಸಿದ್ದ ವೇದಿಕೆ ಮೇಲೆ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಹಾಗೂ ಹಿರಿಯ ವಿದ್ವಾಂಸರಾದ ಪಂಡಿತ ರಾಜ ಎಸ್. ಗಿರಿಯಾಚಾರ್ಯ ಅವರು ಬೋಧಿಸಿದ ಪರಿಮಳಾದಿ ಟಿಪ್ಪಣಿ ಸಹಿತ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವಕ್ಕೆ ವಿವಿಧ ಮಠಗಳ ಸ್ವಾಮೀಜಿಗಳು, ವೇದಾಂತಪಂಡಿತರು ದೀಪ ಪ್ರಜ್ವಲಿಸುವುದರ ಮುಖಾಂತರ ಚಾಲನೆ ನೀಡಿದರು. ನಂತರ ಶ್ರೀಮನ್ಯಾಯಸುಧಾ ವಿದ್ಯಾರ್ಥಿಗಳ ಅನುವಾದ, ಅಂತರಾರ್ಥದ ವ್ಯಾಖ್ಯಾರ್ಥ ಗೋಷ್ಠಿಯು ನಡೆಯಿತು.ಈ ಸಂದರ್ಭದಲ್ಲಿ ಶ್ರೀವ್ಯಾಸರಾಜ ಮಠದ ಪೀಠಾಧಿಪತಿ ಶ್ರೀವಿದ್ಯಾಶ್ರೀ ತೀರ್ಥರು, ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀಸುಜಯನಿಧಿ ತೀರ್ಥರು, ಉಡುಪಿಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು, ಕಾಣಿಯೂರು ಮಠ ಶ್ರೀವಿದ್ಯಾವಲ್ಲಭ ತೀರ್ಥರು, ಶಿಶೂರು ಮಠದ ಶ್ರೀವೇದವಂರ್ಧನ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀವಿದ್ಯೇಶ ತೀರ್ಥರು, ಬಾಳಿಗಾರು ಮಠದ ಅಕ್ಷೋಭ್ಯ ರಾಮಪ್ರಿಯ ತೀರ್ಥರು, ಶ್ರೀಕಣ್ವ ಮಠದ ಶ್ರೀವಿದ್ಯಾ ಕಣ್ವವಿರಾಜ ತೀರ್ಥರು, ಚಿತ್ರಾಪುರ ಮಠದ ಶ್ರೀವಿಧ್ಯೇಂದ್ರತೀರ್ಥರು, ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥರು, ಶ್ರೀವಾಮನ ತೀರ್ಥರು ಸಾನಿಧ್ಯ ವಹಿಸಿದ್ದರು.
ಮೊದಲ ದಿನದ ಸುಧಾಮಂಗಳ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲ ಮಠಾಧೀಶರನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀಮಠದಿಂದ ವಿಶೇಷವಾಗಿ ಸನ್ಮಾನಿಸಿ ಭಕ್ತಿಪೂರ್ವಕವಾಗಿ ಗೌರವಿಸಿದರು.----------------------
23ಕೆಪಿಆರ್‌ಸಿಆರ್ 05 : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಶ್ರೀಮತ್ಸಮೀರಸಮಯಸಂವರ್ಧಿನಿ ಸಭಾ, ಶ್ರೀಮದನುವ್ಯಾಖ್ಯಾನ, ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವಕ್ಕೆ ವಿವಿಧ ಮಠಗಳ ಸ್ವಾಮೀಜಿಗಳು ದೀಪಪ್ರಜ್ಞಲಿಸುವುದರ ಮುಖಾಂತರ ಚಾಲನೆ ನೀಡಿದರು.---
23ಕೆಪಿಆರ್‌ಸಿಆರ್ 06 : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪ್ರಾಕಾರದಲ್ಲಿ ಜರುಗಿದ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ವೇದ ಪಂಡಿತರು, ಸುಧಾವಿದ್ಯಾರ್ಥಿಗಳು ಭಾಗವಹಿಸಿದ್ದರು.