ಎಐ ತಂತ್ರಜ್ಞಾನ ಪೂರಕವೋ ನೋಡಬೇಕಿದೆ

| Published : Jul 14 2024, 01:34 AM IST

ಸಾರಾಂಶ

ಮನುಷ್ಯ, ನದಿ, ಬೆಟ್ಟಗುಡ್ಡಗಳನ್ನೆಲ್ಲ ವ್ಯಕ್ತಿತ್ವದ ಭಾಗವಾಗಿ ನೋಡುತ್ತಿರುವ ಹೊತ್ತಿನಲ್ಲಿಯೇ ಯುಎಇ ದೇಶವು ಸೋಫಿಯಾ ಎಂಬ ರೊಬೊಟಿಗೆ ನಾಗರಿಕ ಹಕ್ಕುಗಳನ್ನು ನೀಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ಆಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ ಪ್ರಣೀತ ಸ್ಥಿತ್ಯಂತರವು ಮಾನವ ಜನಾಂಗಕ್ಕೆ ಪೂರಕವೋ ಮಾರಕವೋ ಅನ್ನುವುದನ್ನು ಕಾದು ನೋಡಬೇಕಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಶುಕುರ್ ಕಮಲ್ ತಿಳಿಸಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಆರ್ಟಿಫಿಸಿಯಲ್ ಇಂಟಿಲಿಜೆನ್ಸ್ ಅಂಡ್ ಜಸ್ಟೀಸ್ ಸಿಸ್ಟಮ್: ಎಮರ್ಜಿಂಗ್ ಟ್ರೆಂಡ್ಸ್ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, .ಅರಾಜಕತೆ, ಯುದ್ಧ, ರಾಷ್ಟ್ರೀಯತೆ, ಸ್ವಾತಂತ್ರ್ಯ ಚಳವಳಿ, ಹಸಿರು ಕ್ರಾಂತಿ, ಕಾರ್ಮಿಕ ಕ್ರಾಂತಿ… ಇಂಥವುಗಳೆಲ್ಲ ಘಟಿಸಿದ ಇದೇ ಭೂಮಿಯ ಮೇಲೆ ಈಗ ಮತ್ತೊಂದು ಹೊಸ ಕ್ರಾಂತಿಯು ತಂತ್ರಜ್ಞಾನದ ಮೂಲಕ ಹುಟ್ಟಲು ಸಿದ್ಧವಾಗುತ್ತಿದೆ. ಆ ಕ್ರಾಂತಿಯ ಹೆಸರು ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಎಂದರು.

ಆಧುನಿಕ ತಂತ್ರಜ್ಞಾನದ ಮೇಲೆ ಏಕಸ್ವಾಮ್ಯ ಮತ್ತು ಹಿಡಿತ ಸಾಧಿಸಿದ ರಾಷ್ಟ್ರಗಳೇ ಇವತ್ತು ಅತ್ಯಂತ ಶಕ್ತಿಶಾಲಿ ದೇಶಗಳೆಂದು ಗುರುತಿಸಿಕೊಂಡಿರುವ ಈ ಹೊತ್ತಿನಲ್ಲಿ ಕೃತಕ ಬುದ್ಧಿಮತ್ತೆ ಎಂಬುದು ಅಂಥಹ ರಾಷ್ಟ್ರಗಳ ಕೈಗೆ ಸಿಕ್ಕಿದರೆ ಏನಾಗಬಹುದು ಎಂಬುದನ್ನು ಅರಿಯಲು ಹೊರಟರೆ ಗಾಬರಿಯಾಗುತ್ತದೆ ಎಂದರು.

ಮನುಷ್ಯ, ನದಿ, ಬೆಟ್ಟಗುಡ್ಡಗಳನ್ನೆಲ್ಲ ವ್ಯಕ್ತಿತ್ವದ ಭಾಗವಾಗಿ ನೋಡುತ್ತಿರುವ ಹೊತ್ತಿನಲ್ಲಿಯೇ ಯುಎಇ ದೇಶವು ಸೋಫಿಯಾ ಎಂಬ ರೊಬೊಟಿಗೆ ನಾಗರಿಕ ಹಕ್ಕುಗಳನ್ನು ನೀಡಿತು. ಈಗಾಗಲೇ ಚಾಲಕ ರಹಿತ ಕಾರುಗಳು ಚಾಲಕನ ಜಾಗಕ್ಕೆ ಬಂದು ಕೂತಿವೆ. ವಕೀಲರು, ನ್ಯಾಯಾಧೀಶರಿಲ್ಲದೆ ಬರಿಯ ಕೃತಕ ಬುದ್ಧಿಮತ್ತೆಯನ್ನೊಂದಿಟ್ಟುಕೊಂಡೇ ಮುಂದಿನ ದಿನಗಳಲ್ಲಿ ಕೋರ್ಟ್ ಕಲಾಪಗಳು ನಡೆಯುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದರು.

ಮುಂದಿನ ಕಾಲು ಶತಮಾನವಂತೂ ಇಡೀ ಜಗತ್ತಿನ ವ್ಯಾಪಾರ ವಹಿವಾಟು, ಕಾರ್ಪೊರೇಟ್ ಕಂಪನಿಗಳ ನಿತ್ಯದ ವಿದ್ಯಮಾನಗಳು ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸಿಯೇ ತನ್ನ ಚಟುವಟಿಕೆಯನ್ನು ನಡೆಸಲಿವೆ. ಈಗಾಗಲೇ ಟ್ರಾಪಿಕ್ ಸಿಗ್ನಲ್ ಗಳ ಬಳಿ ಅಳವಡಿಸಿರುವ ಅತ್ಯಾಧುನಿಕ ಕ್ಯಾಮೆರಾಗಳು ಮನುಷ್ಯರ ಅವಶ್ಯಕತೆಯೇ ಬೇಕಿಲ್ಲ ಎಂದು ಸಾರುತ್ತಿವೆ. ಮನೆಯ ಮುಂದಿನ ಸಿಸಿಟಿವಿ ಕ್ಯಾಮೆರಾಗಳು ಮನುಷ್ಯ ಸಂಪರ್ಕದ ರಕ್ಷಣಾ ವ್ಯವಸ್ಥೆಯನ್ನು ಬೇಡ ಅನ್ನುವ ದಿನಗಳನ್ನು ನಮ್ಮ ಕಣ್ಣಮುಂದೆಯೇ ತಂದು ನಿಲ್ಲಿಸಿದೆ ಎಂದರು.

ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಘಟಿಸುವ ಭೀಕರ ಅಪಘಾತಗಳನ್ನು ಸೆರೆ ಹಿಡಿಯುವ ಕ್ಯಾಮರಾಗಳು ಯಾರಿಂದ ಹೇಗೆ ತಪ್ಪು ನಡೆಯಲ್ಪಟ್ಟಿದೆ ಎಂಬುದನ್ನು ಜನಸಾಮಾನ್ಯರು ಕೂಡ ಕ್ಷಣಾರ್ಧದಲ್ಲಿಯೇ ಊಹಿಸಿ ತೀರ್ಪು ನೀಡಬಹುದಾದ ಸಾಧ್ಯತೆಗಳನ್ನು ಎತ್ತಿ ತೋರುತ್ತಿವೆ. ಇದೆಲ್ಲವೂ ಸಾಧ್ಯ ಅನ್ನುವುದು ನಮಗೆಲ್ಲಾ ಗೊತ್ತಾದದ್ದು ಆಧುನಿಕ ತಂತ್ರಜ್ಞಾನದಿಂದ. ಈಗ ಆ ಆಧುನಿಕ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆಯ ರೂಪದಲ್ಲಿ ಮತ್ತೊಂದು ಅನೂಹ್ಯ ಸಾಧ್ಯತ್ತೆಯತ್ತಲೂ ಮಾನವ ಜನಾಂಗವನ್ನು ಕರೆದೊಯ್ಯುತ್ತಿದೆ ಎಂದು ಅವರು ತಿಳಿಸಿದರು.

ಭಾರತದ ನ್ಯಾಯಾಂಗ ವ್ಯವಸ್ಥೆಗೆ ತೀರಾ ಅಪರಿಚಿತ ಅನ್ನಿಸುವಂತಿದ್ದ ಕೃತಕ ಬುದ್ಧಿಮತ್ತೆಯನ್ನು ಪಶ್ಚಿಮದ ದೇಶಗಳು ತಮ್ಮ ನಿತ್ಯದ ನ್ಯಾಯಾಂಗೀಯ ವಿಚಾರಣಾ ಪ್ರಕ್ರಿಯೆಗಳಲ್ಲಿ ಈಗಾಗಲೇ ಅಳವಡಿಸಿಕೊಂಡು ತೀರ್ಪು ನೀಡುವ ಸಾಧ್ಯತೆಗಳತ್ತ ಮುಖ ಮಾಡಿವೆ. ಭಾರತದಲ್ಲಿ ವಕೀಲ, ನ್ಯಾಯಾಧೀಶರ ಸ್ಥಾನಗಳನ್ನು ಇದು ಹೇಗೆ ತುಂಬಬಲ್ಲದು ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದರು.

ಏಕೆಂದರೆ ಈಗಿರುವ ಭಾರತದ ನ್ಯಾಯಾಂಗೀಯ ವ್ಯವಸ್ಥೆಯು ಅಷ್ಟಾಗಿ ಆಧುನಿಕ ತಂತ್ರಜ್ಞಾನವನ್ನು ಅವಲಂಬಿಸಲು ಹೋಗಿಲ್ಲ. ತಂತ್ರಜ್ಞಾನದ ನೆರವಿಲ್ಲದೆಯೇ ಮನುಷ್ಯರ ವಾದ ಮಂಡನೆಯ ಮೇಲೆಯೇ ಮನುಷ್ಯರೇ ತೀರ್ಪು ಕೊಡುವ ಸಂದರ್ಭಗಳನ್ನು ನಾವು ನೋಡುತ್ತಿದ್ದೇವೆ. ನ್ಯಾಯ ನೀಡಿಕೆಯ ವ್ಯವಸ್ಥೆಗೆ ತಂತ್ರಜ್ಞಾನದ ಮೂಗು ತೂರಿಸುವಿಕೆ ಅಲ್ಲಗಳೆಯುವಂತೆಯೂ ಇಲ್ಲ, ಆ ಸಾಧ್ಯತೆ ಘಟಿಸುವುದನ್ನು ನಿರಾಕರಿಸುವಂತೆಯೂ ಇಲ್ಲ ಎಂದು ಅವರು ಹೇಳಿದರು.

ಸೂಕ್ಷ್ಮವಾಗಿ ಪರಿಶೀಲಸಬೇಕು

ಬೆಂಗಳೂರಿನ ವಿಶ್ವವಿದ್ಯಾನಿಲಯ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ವಿ. ಸುದೇಶ್ ಮಾತನಾಡಿ, ಮೀಟಾ, ಚಾಟ್ ಜಿಪಿಟಿಯಂತಹ ಕೃತಕ ಬುದ್ಧಿಮತ್ತೆಯ ಆಧುನಿಕ ತಂತ್ರಜ್ಞಾನಗಳು ಅಪರಾಧದ ತನಿಖೆ, ವಿಚಾರಣೆಗಳಿಗೆ ನೆರವಾಗುವುದಾದರೆ ಇದು ನಿಜಕ್ಕೂ ಕ್ರಾಂತಿಯೇ. ಕೃತಕ ಬುದ್ಧಿಮತ್ತೆಯು ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ವ್ಯವಸ್ಥೆಗಳ ಮೇಲೆ ಉಂಟುಮಾಡಬಹುದಾದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಸೂಕ್ಷ್ಮ ದೃಷ್ಟಿಕೋನಗಳಿಂದ ಪರಿಶೀಲಿಸಬೇಕಿದೆ ಎಂದರು.

ನ್ಯಾಯಾಲಯದ ಆವರಣಕ್ಕೆ ಕೃತಕ ಬುದ್ಧಿಮತ್ತೆಯು ಕಾಲಿಡುವುದನ್ನು ನಾವು ಸ್ವಾಗತಿಸಲೇಬೇಕಿದೆ. ಇದರಿಂದಾದರೂ ಪ್ರತಿದಿನ, ಪ್ರತಿವರ್ಷ ತೀರ್ಪು, ಇತ್ಯರ್ಥಗಳನ್ನು ಕಾಣದೇ ಬ್ಯಾಕ್ ಲಾಗ್ ರೂಪದಲ್ಲಿ ಕೊಳೆಯುತ್ತಿರುವ ಲಕ್ಷಾಂತರ ಕೇಸುಗಳಿಗೆ ಮುಕ್ತಿ ಸಿಕ್ಕು, ಅವು ತುರ್ತು ವಿಲೇವಾರಿ ಕಾಣಬಹುದು ಎಂದು ಅವರು ಹೇಳಿದರು.

ಇದೇ ವೇಳೆ ಕಳೆದ ವರ್ಷ ನಡೆದ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ನೆನಪಿನ ಉಪನ್ಯಾಸ ಮಾಲೆ-5ರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಆಡಳಿತ ಮಂಡಳಿ ಸದಸ್ಯ ಶಿವಲಿಂಗಯ್ಯ, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮದ ಸಂಯೋಜಕರಾದ ಡಾ.ಎಸ್.ಬಿ. ಬೋರೇಗೌಡ, ಡಾ.ಎ.ಆರ್. ಪ್ರಕೃತಿ, ಡಾ.ಕೆ.ಎಲ್. ಚಂದ್ರಶೇಖರ್ ಇದ್ದರು. ಡಾ. ಶ್ರೀದೇವಿ ಕೃಷ್ಣ ನಿರೂಪಿಸಿದರು.

----

ಕೋಟ್...

ನ್ಯಾಯ ನೀಡಿಕೆಯ ಪ್ರಕ್ರಿಯೆಯಲ್ಲಿ ಮನುಷ್ಯರ ಎಸಗಬಹುದಾದ ತಪ್ಪುಗಳನ್ನು ಮನುಷ್ಯರೇ ಸರಿಪಡಿಸಬಹುದಾದ ಸಾಧ್ಯತೆಗಳು ನಮ್ಮಲ್ಲಿ ಹೇರಳವಾಗಿವೆ. ಆದರೆ, ತಂತ್ರಜ್ಞಾನ ಎಸಗುವ ತಪ್ಪುಗಳನ್ನು ಈ ಮನುಷ್ಯ ಜಗತ್ತು, ನ್ಯಾಯಿಕ ವ್ಯವಸ್ಥೆ ಹೇಗೆ ಎದುರಿಸಲಿದೆ ಎಂಬುದು ನಿಜಕ್ಕೂ ಸವಾಲಿನ ವಿಷಯ. ಭಾರತ ಇವತ್ತಲ್ಲ ನಾಳೆ ಕೃತಕ ಬುದ್ಧಿಮತ್ತೆಗೆ ತೆರೆದುಕೊಳ್ಳಲೇಬೇಕಾದ ಅನಿವಾರ್ಯತೆ ಬರಲಿದೆ. ಅದಕ್ಕೆ ಎಲ್ಲಾ ರೀತಿಯಿಂದಲೂ ಸಜ್ಜುಗೊಳ್ಳಬೇಕೆಂದರೆ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ವಕೀಲರು, ನ್ಯಾಯಾಧೀಶರು ಕೃತಕ ಬುದ್ಧಿಮತ್ತೆಯೆಡೆಗೆ ಆಳವಾದ ಅಧ್ಯಯನ ನಡೆಸಲೇಬೇಕಿದೆ.

- ನ್ಯಾ.ಎಂ.ಜಿ. ಶುಕುರ್ ಕಮಲ್, ಕರ್ನಾಟಕ ಹೈಕೋರ್ಟ್

----

ಸಮಾನತೆ, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳಂತಹ ಸಾಂವಿಧಾನಿಕ ಮೌಲ್ಯಗಳ ಮೇಲೆ ನಿಂತಿರುವ ಭಾರತಕ್ಕೆ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನದಿಂದ ಅಪಾಯ ಎದುರಾಗದಿದ್ದರೆ ಅದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು. ಇಲ್ಲಿ ಜಾತಿ, ಧರ್ಮ, ಮತಗಳೆಲ್ಲವೂ ಮನುಷ್ಯನ ಮೂಲಭೂತ ಆಸ್ಮಿತೆಯಾಗಿರುವುದರಿಂದ ಅದಕ್ಕೆ ಕೃತಕ ಬುದ್ಧಿಮತ್ತೆಯು ಹೇಗೆ ಮುಖಾಮುಖಿಯಾಗಬಹುದು ಎನ್ನುವ ಕುತೂಹಲ ನನಗೂ ಇದೆ.

- ಡಾ.ವಿ. ಸುದೇಶ್, ಪ್ರಾಂಶುಪಾಲ, ವಿಶ್ವವಿದ್ಯಾನಿಲಯ ಕಾನೂನು ಕಾಲೇಜು, ಬೆಂಗಳೂರು