ಕೊಪ್ಪಳ: ಧೂಳು, ಹೊಗೆ, ಕರಿಬೂದಿ ಬಂದ್ ಮಾಡಿದರೇ ಕಾರ್ಖಾನೆ ಶುರು ಮಾಡಿ ಇಲ್ಲದಿದ್ದರೇ ಕಾರ್ಖಾನೆ ಮುಚ್ಚಿ. ಇದು, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಖಡಕ್ ಎಚ್ಚರಿಕೆ.
ಇತ್ತೀಚಿಗೆ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಕಾರ್ಖಾನೆ ಸಮಸ್ಯೆ ಮುಂದಿಟ್ಟುಕೊಂಡು ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಧಿಕ್ಕಾರ ಕೂಗಿದ್ದರು. ಗ್ರಾಮದೊಳಗೆ ಬನ್ನಿ, ನಮ್ಮ ಸಮಸ್ಯೆ ನೋಡಿ ಎಂದು ಆಗ್ರಹಿಸಿದ್ದರು. ಆಗ ವಾಪಸ್ ಹೋಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಂಗಳವಾರ ಹಿರೇಬಗನಾಳ ಗ್ರಾಮಕ್ಕೆ ಸ್ವಯಂಪ್ರೇರಿತವಾಗಿ ಭೇಟಿ ನೀಡಿ ಗ್ರಾಮದ ದೇವಸ್ಥಾನದಲ್ಲಿ ಕುಳಿತು ಕಾರ್ಖಾನೆಯ ಮಾಲಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಗ್ರಾಮಸ್ಥರೊಂದಿಗೆ ಸುಮಾರು ಹೊತ್ತು ಚರ್ಚೆ ಮಾಡಿ, ಜನರ ಆರೋಗ್ಯಕ್ಕಿಂತ ಯಾವುದು ಮುಖ್ಯವಲ್ಲ, ಇದರಲ್ಲಿ ನಾನು ರಾಜಿಯಾಗುವುದಿಲ್ಲ ಎಂದು ಹೇಳಿದರು.
ಅಷ್ಟೇ ಅಲ್ಲ,ಕಾರ್ಖಾನೆಗಳನ್ನು ಈಗಾಗಲೇ ತೆರೆದಿದ್ದಾರೆ.ಈಗ ನಮಗೆ ಅವುಗಳಿಂದ ಬರುವ ಹೊಗೆ ಮತ್ತು ಧೂಳು ಬಾರದಂತೆ ಮಾಡಬೇಕು. ಹಾಗೇ ಮಾಡದಿದ್ದರೇ ಕಾರ್ಖಾನೆ ಮುಚ್ಚಿಕೊಂಡು ಹೋಗಲಿ ಎಂದರು.ಕಿರ್ಲೋಸ್ಕರ್ ಕಾರ್ಖಾನೆಯಿಂದ ನಮ್ಮ ಮನೆಗೆ ಕೇವಲ ಎರಡು ಕಿಮೀ ದೂರದಲ್ಲಿದೆ.ಆದರೂ ಒಂಚೂರು ಧೂಳು ಬರುತ್ತಿಲ್ಲ. ಅದೇ ರೀತಿ ಉಳಿದೆಲ್ಲ ಕಾರ್ಖಾನೆಯವರು ಮಾಡಲಿ ಎಂದು ಆಗ್ರಹಿಸಿದರು.
ನಾನು ನಿಮ್ಮ ಸಮಸ್ಯೆಗೆ ಸ್ಪಂದಿಸಲು ಬಂದಿದ್ದೇನೆ,ಈಗಾಗಲೇ ಬೆಳಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಮಾತನಾಡಿದ್ದೇನೆ,ಅವರು ಸಹ ಬರುವುದಾಗಿ ಹೇಳಿದ್ದಾರೆ. ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಜತೆಗೂ ಮಾತನಾಡಿದ್ದೇನೆ. ಅವರೆಲ್ಲರೊಂದಿಗೆ ನಿಯಮನುಸಾರ ಕ್ರಮವಹಿಸಲು ಸೂಚಿಸಿದ್ದೇನೆ. ಅದಾಗದಿದ್ದರೇ ಕಾರ್ಖಾನೆಯವರಿಗೆ ಶುರು ಮಾಡಲು ಅವಕಾಶ ನೀಡುವುದು ಬೇಡ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಸಹ ಜೊತೆಯಲ್ಲಿದ್ದರಲ್ಲದೆ ಗ್ರಾಮದ ಎದುರಿಸುತ್ತಿರುವ ಸಮಸ್ಯೆ ನೀಗಿಸೋಣ ಎಂದರು.
ಧೂಳು, ಹೊಗೆಯಿಂದ ಮುಕ್ತಿ ನೀಡಿನಾವೇನು ನಿಮ್ಮ ಶತ್ರುಗಳು ಅಲ್ಲ. ನಮ್ಮೂರಿನಲ್ಲಿ ಉಸಿರಾಡಲು ಸಮಸ್ಯೆಯಾಗುತ್ತಿದೆ.ಅದನ್ನು ಇತ್ಯರ್ಥ ಮಾಡಿ ನಮಗೂ ಎಲ್ಲರಂತೆ ಬದುಕಲು ಅವಕಾಶ ನೀಡಿ ಎಂದು ನಿಮ್ಮನ್ನು ಕೇಳಿದ್ದೇವೆ. ಅಂದು ನೀವು ಬಂದಾಗ ಇದನ್ನೇ ಹೇಳಿದ್ದೇವೆ, ನಮ್ಮೂರನ್ನು ನೋಡಿಕೊಂಡು ಹೋಗಿ ನಾಲ್ಕಾರು ಮನೆ ಸುತ್ತಾಡಿ, ಊರ ದೇವಸ್ಥಾನದ ಬಳಿ ಬನ್ನಿ ನೋಡಿ ಎಂದು ಕೇಳಿದ್ದೇವೆ. ಆದರೆ ನೀವು ಬರಲಿಲ್ಲ. ಆದರೆ ಈಗ ಬಂದು ನಮ್ಮ ಸಮಸ್ಯೆ ಆಲಿಸಿದ್ದಿರಿ, ಇಷ್ಟಕ್ಕೆ ಬಿಡಬೇಡಿ, ನೀವು ಹೇಳಿದಂತೆ ಧೂಳು,ಹೊಗೆಯಿಂದ ಮುಕ್ತಿ ಕೊಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.