ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸಿದ್ದಗಂಗಾ ಶ್ರೀಗಳು ಮೇರು ಶಿಖರವಿದ್ದಂತೆ, ಆ ಶಿಖರದ ಗುರಿಯನ್ನು ಯಾರು ಮುಟ್ಟಲು ಸಾಧ್ಯವಿಲ್ಲ, ಅವರ ಜಯಂತಿ ವೇಳೆ ಅವರನ್ನು ಸ್ಮರಿಸುವುದೇ ಎಲ್ಲರ ಸೌಭಾಗ್ಯ ಎಂದು ಸಿದ್ಧಗಂಗಾ ಕ್ಷೇತ್ರದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ನುಡಿದರು.ಪಟ್ಟಣದ ಬಸವ ಮಹಾಮನೆಯಲ್ಲಿ ಶಿವಕುಮಾರಸ್ವಾಮಿ ಬಡಾವಣೆ ನಿವಾಸಿಗಳು, ಬಸವ ಸೇವಾ ಪತ್ತಿನ ಸಂಘ, ಬಸವ ಸೇನಾ ನೌಕರರ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ.ಶಿವಕುಮಾರ ಮಹಾಸ್ವಾಮೀಜಿ 118 ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ದಗಂಗಾ ಶ್ರೀಗಳು ಬಸವಣ್ಣನವರ ಹಾದಿಯಂತೆ ಸಕಲ ಜಿವಾತ್ಮರಿಗೂ ಲೇಸನ್ನೆ ಬಯಸಿದ ಮಹಾನುಭಾವರು, ಅವರನ್ನು ಕೊಳ್ಳೇಗಾಲದಲ್ಲಿ ಬಸವ ಸೇವಾ ಸಮಿತಿ ಮತ್ತು ಇತರೆ ಸಂಘಟನೆಗಳು ಪ್ರತಿ ವರ್ಷ ಸ್ಮರಣೆ ಮಾಡಿ ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸುತ್ತಿರುವುದು ಅಭಿನಂದನಾರ್ಹ ಎಂದರು.
ಪೂಜ್ಯರ ಜಯಂತಿ ಆಚರಿಸುವ ಮೂಲಕ ಅವರನ್ನು ಪ್ರತಿ ದಿನವೂ ಸ್ಮರಿಸುವ ಕೆಲಸ ಆಗಬೇಕು, ಅವರ ಚಿಂತನೆಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಬೇಕು, ಸಿದ್ದಗಂಗಾ ಮಹಾಸ್ವಾಮೀಜಿ ತತ್ವಾದರ್ಶಗಳನ್ನು ಕೇಳಬೇಕು, ಚಿಂತಿಸಬೇಕು, ಮನನ ಮಾಡಿಕೊಳ್ಳಬೇಕು ಎಂದರು.ಪೂಜ್ಯರು ಮಹಾಚೇತನ:
ಅವರನ್ನು ಸ್ಮರಿಸುವುದೇ ನಮ್ಮೆಲ್ಲರ ಸೌಭಾಗ್ಯ, ಅವರು ತಮ್ಮ ಸಾರ್ಥಕ ಬದುಕಿನ ಮೂಲಕವೇ ಜೀವನ ಮುಪ್ಪಾಗಿಸಿಕೊಂಡ ಮಹಾನುಭಾವರು. ಅವರ ತ್ಯಾಗ ಮತ್ತು ಸೇವೆಯ ಪ್ರತೀಕ, ಇಂದು ಎಲ್ಲೆಡೆ ಅವರ ಸ್ಮರಿಸುವಂತಹ ಕೆಲಸ ಆಗುತ್ತಿದೆ. ಅವರ ಸ್ಮರಣೆ ಜೊತೆಗೆ ಬದುಕಿದ ರೀತಿ, ಕಾಯಕ ನಿಷ್ಟೆಗೆ ನೀಡಿದ ಮಹತ್ವ ಅರಿಯಬೇಕಿದೆ ಎಂದು ಹೇಳಿದರು. ಮೈಸೂರು, ಚಾ.ನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಧಾರ್ಮಿಕ ಸಭೆ, ಕಾರ್ಯಕ್ರಮಗಳಿದ್ದರೆ ಪೂಜ್ಯರೇ ಬೇಗ ಎದ್ದು ಪೂಜೆ ಮುಗಿಸಿ ತಯಾರಾಗುತ್ತಿದ್ದರು, ಈ ಭಾಗದ ಜನರೆಂದರೆ, ಭಕ್ತ ಸಮೂಹ ಕಂಡರೆ ಅಷ್ಟು ಪ್ರೀತಿಯನ್ನು ಪೂಜ್ಯರು ಹೊಂದಿದ್ದರು. ಅದೇ ರೀತಿಯಲ್ಲಿ ಈ ಭಾಗದ ಭಕ್ತ ಸಮೂಹ ಸಹಾ ಪೂಜ್ಯರ ಬಗ್ಗೆ ಅಪಾರ ಭಕ್ತಿ, ಹೃದಯ ಶ್ರೀಮಂತಿಕೆ ಹೊಂದಿರುವುದು ಹೆಮ್ಮೆಯ ಸಂಗತಿ ಎಂದರು.ಬಸವಣ್ಣನವರ ತತ್ವಾದರ್ಶಗಳೇ ಪೂಜ್ಯರ ಉಸಿರಾಗಿತ್ತು:
ಮರಳೆ ಗವಿ ಮಠಾಧ್ಯಕ್ಷ ಡಾ.ಮುಮ್ಮಡಿ ಶಿವುರದ್ರಸ್ವಾಮೀಜಿ ಮಾತನಾಡಿ, ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಿದ್ದಗಂಗಾ ಮಠ ಮುಂಚೂಣಿ ಕಾಯ್ದುಕೊಂಡಿದೆ, ಸಿದ್ದಗಂಗಾ ಸ್ವಾಮಿಗಳ ಕಾಯಕನಿಷ್ಠೆಯನ್ನು ಎಲ್ಲರೂ ಅಳಡಿಸಿಕೊಳ್ಳಬೇಕು, ಶಿವಕುಮಾರ ಸ್ವಾಮೀಜಿ ಸ್ಮರಿಸುವ ಮೂಲಕ ಎಲ್ಲರೂ ಉತ್ತಮ ಸಂಸ್ಕಾರವಂತರಾಗಿ ಮೌಲ್ಯಯುತ ಬದುಕು ನಡೆಸಿ ಎಂದು ಸಲಹೆ ನೀಡಿದರು. ವೀರಶೈವ ಸಮಾಜ ತುಂಬಾ ದೊಡ್ಡದು, ಈ ಸಮಾಜದ ಬಂಧುಗಳು ಧರ್ಮ ಜಾಗೃತಿ ಮೂಡಿಸಿಕೊಳ್ಳಿ, ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿ, ಅಪೇಕ್ಷೆ ಇಲ್ಲದ ಸೇವೆ ಅವರದ್ದು, ಬಸವಣ್ಣನವರ ಹೆಸರಿನಲ್ಲಿ ನಿಜ ಸೇವೆ ಮಾಡಿದವರು ಪೂಜ್ಯರು, ಅವರ ಉಸಿರೇ ಬಸವಣ್ಣನವರ ತತ್ವಾದರ್ಶಗಳಾಗಿತ್ತು. ಅವರ ವಚನಗಳನ್ನು ಪಾಲಿಸಿ, ಆಚರಿಸುವ ಕೆಲಸ ಮಾಡಿದ ಪುಣ್ಯಾತ್ಮರು ಎಂದು ವ್ಯಾಖ್ಯಾನಿಸಿದರು.ಜಯಂತಿ ಹಿನ್ನೆಲೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಸರಗೂರು ಹೊಸಮಠ ಶ್ರೀ ಬಸವರಾಜೇಂದ್ರ ಸ್ವಾಮಿಗಳು, ಮೇದನಿ ಪಟ್ಟದಮಠ ಶ್ರೀ ಶಿವಲಿಂಗಸ್ವಾಮಿಗಳು, ಕೊಳ್ಳೇಗಾಲದ ಭಿಕ್ಷುದ ಮಠದಶ್ರೀ ಶಿವಪ್ಪ ಸ್ವಾಮೀಜಿ, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ ಅಧ್ಯಕ್ಷ ಎಸ್. ಮಲ್ಲೇಶಪ್ಪ, ಆಚರಣಾ ಸಮಿತಿ ಅಧ್ಯಕ್ಷ ಶಿವಮೂರ್ತಿ, ಮಹದೇವಸ್ವಾಮಿ, ವೀರಶೈ ವ ಮಹಾಸಭೆಯ ಅಚ್ಚಗಾಳ್ ಮಹದೇವಸ್ವಾಮಿ ಇನ್ನಿತರರಿದ್ದರು.