ಸಾರಾಂಶ
ಆರ್. ಸುಬ್ರಮಣಿ ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸ್ವಚ್ಛತೆ ಸಿದ್ದಾಪುರ ಪಟ್ಟಣಕ್ಕೆ ಮರೀಚಿಕೆಯಾಗಿದೆ. ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಕಾರಣ ಇಡೀ ಪಟ್ಟಣದ ಮುಖ್ಯ ಪ್ರದೇಶಗಳಲ್ಲಿ ಕಸದ ರಾಶಿ ಬಿದ್ದಿದೆ. ಕಸದ ರಾಶಿಯಿಂದ ಹುಳುಗಳು ಉತ್ಪತ್ತಿಯಾಗಿದೆ. ದುರ್ವಾಸನೆ ಯಿಂದ ಪಟ್ಟಣ ಗಬ್ಬೆದ್ದು ನಾರುತ್ತಿದೆ. ಚರಂಡಿಗಳಲ್ಲಿ ಸೊಳ್ಳೆಗಳು ಉತ್ಪತಿಯಾಗಿ ಸಾಂಕ್ರಾಮಿಕ ರೋಗ ಬಾಧಿಸತೊಡಗಿದೆ.ಹಲವರಿಗೆ ಬಾಧಿಸಿದ ಡೆಂಘೀ ಬಾಧೆ: ಇಡೀ ಪ್ರದೇಶ ಅನೈರ್ಮಲ್ಯದಿಂದ ಕೂಡಿದೆ. ಪಟ್ಟಣದ ಹಲವರಿಗೆ ಡೆಂಘೀ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸ್ಥಳೀಯ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಸೇರಿದಂತೆ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಕೂಡ ಡೆಂಘಿ ಬಾಧೆಗೆ ತುತ್ತಾಗಿ ಈಗ ಚೇತರಿಸಿಕೊಂಡಿದ್ದಾರೆ.
ದಶಕಗಳಿಂದ ಕಾಡುತ್ತಿರುವ ಕಸದ ಸಮಸ್ಯೆ: ಊರು ಬೆಳೆದಂತೆ ಸಮಸ್ಯೆಗಳು ಬೆಳೆಯುತ್ತದೆ ಎಂಬ ನಾಣ್ಣುಡಿಯಂತೆ ಸಿದ್ದಾಪುರ ಪಟ್ಟಣ ಬೆಳೆದಂತೆ ಕಸದ ಸಮಸ್ಯೆಯು ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಮಾತ್ರ ಕಸ ವಿಲೇವಾರಿಗೆ ಹೆಚ್ಚಿನ ಶ್ರಮ ವಹಿಸದೆ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿರುವುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಬೇಕಾದ ಪಂಚಾಯಿತಿ ಸದಸ್ಯರು ತಮ್ಮ ಆದಾಯ ವೃದ್ಧಿಸಲು ಪಂಚಾಯಿತಿ ಮಳಿಗೆಗಳ ಹರಾಜು, ಬೇನಾಮಿ ಹೆಸರಿನಲ್ಲಿ ಕಾಮಗಾರಿಗಳ ಗುತ್ತಿಗೆ, ನಿವಾಸಿಗಳಿಂದ ಹೆಚ್ಚಗೆ ಹಣ ಪಡೆದು 9/11 ನಂತಹ ದಾಖಲೆಗಳನ್ನು ಮಾಡಿ ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇತರೆ ವಿಷಯಗಳಲ್ಲಿ ತೋರುವ ಆಸಕ್ತಿ ಕಸ ವಿಲೇವಾರಿಗೆ ಸ್ಥಳ ಗುರುತಿಸುವ ಕಾರ್ಯಕ್ಕೆ ತೋರಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.ಕಸ ಶೇಖರಣೆಯಿಂದ ಅಶುಚಿತ್ವ ಹೆಚ್ಚಳ: ಭಾಗದ ಜನತೆ ಜವಾಬ್ದಾರಿ ಮರೆತು ತಮ್ಮ ಅನುಕೂಲಕ್ಕಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ಅಲ್ಲಲ್ಲಿ ಕಸ ಶೇಖರಣೆಯಾಗುತ್ತಿದೆ. ಗ್ರಾಮ ಪಂಚಾಯಿತಿ ಹೆಚ್ಚು ಕಸ ಸಂಗ್ರಹಣೆಯಾಗುವ ಸ್ಥಳಗಳಲ್ಲಿ ಇಲ್ಲಿ ಕಸ ಎಸೆಯಬಾರದು. ಸಿಸಿಟಿವಿ ಇದೆ ದಂಡ ವಿಧಿಸಲಾಗುವುದು ಎಂಬ ಕಾಟಾಚಾರದ ಪ್ಲೆಕ್ಸ್ ಹಾಕಿ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುತ್ತಾರೆ. ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿದ ಜನ ಅಲ್ಲೇ ಕಸ ತಂದು ಬಿಸಾಡಿ ತೆರಳುತ್ತಾರೆ. ಪಂಚಾಯಿತಿ ಹಾಗೂ ಪೌರ ಕಾರ್ಮಿಕರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಪೌರ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ಕಾರಣದಿಂದ ಕಸ ಹೆಚ್ಚು ಸಂಗ್ರಹವಾಗುತ್ತದೆ.
ಪಂಚಾಯಿತಿ ನಿರ್ಲಕ್ಷ್ಯದಿಂದಾಗಿ ಕಸ ವಿಲೇವಾರಿಯಾಗದೆ ಸಿದ್ದಾಪುರ ಗಬ್ಬೆದ್ದು ನಾರುತ್ತಿದೆ. ಪೌರ ಕಾರ್ಮಿಕರು ಪ್ರತಿದಿನ ಕಸ ಶೇಖರಣೆ ಮಾಡುವ ಕೆಲಸ ಮಾಡಬೇಕಿದೆ. ಅವರು ಸರಿಯಾಗಿ ಬಾರದ ಕಾರಣ ಹೋಟೆಲ್, ಬೇಕರಿ, ಸೇರಿದಂತೆ ಇತರೆ ಅಂಗಡಿಗಳ ಕಸಗಳನ್ನು ಅವರು ತಂದು ಪಟ್ಟಣದ ಕೆಲವು ಕಡೆಗಳಲ್ಲಿ ಸುರಿಯುತ್ತಾರೆ. ಹಾಗಾಗಿ ಕಸ ಶೇಖರಣೆಯಾಗಿ ವಾತಾವರಣ ಹಾಳೆ ಹುರಿದ ಜನರು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಕೂಡಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಸಾಂಕ್ರಮಿಕ ರೋಗದ ಭೀತಿ ತಪ್ಪಿದ್ದಲ್ಲ ಎಂದು ಸಿದ್ದಾಪುರದ ವ್ಯಾಪರಸ್ಥ ಎಂ ಬಿಜೋಯ್ ತಿಳಿಸಿದರು.ಕಸ ವಿಲೇವಾರಿಗೆ ಪಂಚಾಯಿತಿ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು. ಕಸ ಶೇಖರಣೆಯಾದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಆಡಳಿತಕ್ಕೆ ಮತ್ತು ಕಾರ್ಯನಿರ್ವಹಣಾಧಿರಿಗೆ ತಾಕೀತು ಮಾಡಿದ್ದೇನೆ. ಅದಷ್ಟು ಬೇಗನೆ ಕಸದ ಸಮಸ್ಯೆ ಬಗೆಹರಿಸಲಾಗುವುದು ಎಂದು ವಿರಾಜಪೇಟೆ ಶಾಸಕ ಎ. ಎಸ್ .ಪೊನ್ನಣ್ಣ ಹೇಳಿದರು.