ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 42,345 ಬಡ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುತ್ತಿದ್ದು ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಇವರಿಗೆ ಬರಲು 2000 ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಹುಬ್ಬಳ್ಳಿ:

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಮಾದರಿಯಲ್ಲಿಯೇ ಜ. 24ರಂದು ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಇದು ನಿಜಕ್ಕೂ ಖುಷಿ ಕೊಡುವ ಸಂಗತಿ ಎಂದರು.

ಇಲ್ಲಿನ ಮಂಟೂರು ರಸ್ತೆಯಲ್ಲಿ ಜ. 24ರಂದು ನಡೆಯಲಿರುವ ಮನೆ ಹಂಚಿಕೆ ಕಾರ್ಯಕ್ರಮದ ಪೂರ್ವ ಸಿದ್ಧತೆ ಪರಿಶೀಲಿಸಿ ನಂತರ ಮಾಧ್ಯಮದರೊಂದಿಗೆ ಅವರು ಮಾತನಾಡಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 42,345 ಬಡ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುತ್ತಿದ್ದು ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಇವರಿಗೆ ಬರಲು 2000 ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ 8000ಕ್ಕೂ ಅಧಿಕ ಟ್ಯಾಕ್ಸಿ, ಕಾರು, ಬೈಕ್‌ ಸೇರಿದಂತೆ ವಿವಿಧ ವಾಹನಗಳಲ್ಲಿ ಫಲಾನುಭವಿಗಳು ಬರಲಿದ್ದು 300ಕ್ಕೂ ಅಧಿಕ ಕಡೆ ಊಟದ ಕೌಂಟರ್‌ ತೆರೆಯಲಾಗುವುದು ಎಂದರು.

ಬರುವ ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಿದ್ದು ಟ್ರಾಫಿಕ್‌ ಸಮಸ್ಯೆ ಆಗದಂತೆ ಯೋಜನೆ ರೂಪಿಸಿಕೊಳ್ಳಲಾಗಿದೆ. 6 ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸಲು ರಸ್ತೆ, ಪ್ರವೇಶ ವ್ಯವಸ್ಥೆ ಮಾಡಲಾಗಿದೆ ಎಂದಿರುವ ಅವರು, ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಖರ್ಗೆ, ಸಿಎಂ-ಡಿಸಿಎಂ ಭಾಗಿ:

ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಡಾ. ಜಿ. ಪರಮೇಶ್ವರ, ಡಾ. ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರ ಉಸ್ತುವಾರಿಯಲ್ಲಿ ಪೂರ್ವಸಿದ್ಧತಾ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಅತ್ಯಾಧುನಿಕ ಸೌಲಭ್ಯ:

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಬಡವರಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಉತ್ತಮ ಮನೆ ನಿರ್ಮಿಸಿ, ವಿತರಿಸಲಾಗುತ್ತಿದೆ. ಆಸ್ಪತ್ರೆ, ಗ್ರಂಥಾಲಯ, ಶಾಪಿಂಗ್ ಮಾಲ್ ಸಹ ಇದು ಮಾಡಲಾಗುವುದು. ಎಲ್ಲ ಮನೆಗಳಿಗೂ ಬಾಲ್ಕನಿ ವ್ಯವಸ್ಥೆ ಕಲ್ಪಿಸಿದ್ದು ಮನೆ ನಿರ್ಮಾಣದ ಶೈಲಿ ತೃಪ್ತಿ ತಂದಿದೆ. ಬೆಂಗಳೂರಿನ ಕಮ್ಯುನಿಟಿ ಮಾದರಿ ಮನೆ ನಿರ್ಮಿಸಿದ್ದು ಫಲಾನುಭವಿಗಳಿಗೆ ಹಸ್ತಾಂತರಿಸಿದ ಬಳಿಕ ಸ್ವಚ್ಛವಾಗಿ ಇಟ್ಟುಕೊಳ್ಳಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ರವೀಶ ಸಿ.ಆರ್., ಮಹಾನಿಂಗ ನಂದಗಾವಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹುಡಾ ಆಯುಕ್ತ ಸಂತೋಷ ಬಿರಾದಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ಅಲ್ತಾಫ್ ಹಳ್ಳೂರ್, ಅನಿಲಕುಮಾರ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.