೧೨ನೇ ಶತಮಾನದಲ್ಲಿ ಬಸವಣ್ಣನವರಂತೆ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ಕೂಡ ಒಬ್ಬರು.
ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿದ ತಹಸೀಲ್ದಾರ
ಕನ್ನಡಪ್ರಭ ವಾರ್ತೆ ಮುಂಡಗೋಡ೧೨ನೇ ಶತಮಾನದಲ್ಲಿ ಬಸವಣ್ಣನವರಂತೆ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ಕೂಡ ಒಬ್ಬರು ಎಂದು ಮುಂಡಗೋಡ ತಹಸೀಲ್ದಾರ ಶಂಕರ ಗೌಡಿ ಹೇಳಿದರು.
ಬುಧವಾರ ಇಲ್ಲಿಯ ಮಿನಿ ವಿಧಾನಸೌಧ ಎದುರಿನ ಶ್ರೀ ಸಿದ್ದರಾಮೇಶ್ವರ ಗದ್ದುಗೆ ಆವರಣದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಪಪಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.ಕೆರೆ, ರಸ್ತೆ, ಕಟ್ಟಡ ನಿರ್ಮಾಣ ಸೇರಿದಂತೆ ಸಾರ್ವಜನಿಕ ಉಪಯೋಗಿ ಕೆಲಸ ಮಾಡುವ ಮೂಲಕ ಕರ್ಮ ಯೋಗಿ ಅನಿಸಿಕೊಂಡ ಏಕೈಕ ಶರಣರಾದ ಸಿದ್ದರಾಮೇಶ್ವರರು ಎಂದು ಬಣ್ಣಿಸಿದ ಅವರು, ಮುಖ್ಯವಾಗಿ ವಚನಗಳ ಮೂಲಕ ಮೂಡ ನಂಬಿಕೆಗಳನ್ನು ವಿರೋಧ ಮಾಡಿದ್ದಾರೆ. ೯೦೦ ವರ್ಷಗಳ ಬಳಿಕವು ಇಂದಿಗೂ ಕೂಡ ಅಜರಾಮರವಾಗಿ ಉಳಿದಂತಹ ಸಿದ್ದರಾಮೇಶ್ವರರ ಜಯಂತಿ ಆಚರಣೆ ಮಾಡುವುದು ಒಂದು ಸೌಭಾಗ್ಯವೇ ಸರಿ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ ದಾಸನಕೊಪ್ಪ ಮಾತನಾಡಿ, ಕಾಯಕ ಹಾಗೂ ಸಮಾನತೆ ತತ್ವವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಶಿವಯೋಗಿ ಸಿದ್ದರಾಮೇಶ್ವರರು ನಮ್ಮ ಜೀವನಕ್ಕೆ ದಾರಿ ದೀಪವಾಗುವಂತಹ ವಚನ ಸಾಹಿತ್ಯವನ್ನು ಕೂಡ ನೀಡಿದ್ದಾರೆ ಎಂದರು.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ ಮಾತನಾಡಿದರು.
ಬೋವಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತಪ್ಪ ಆರೇಗೊಪ್ಪ ಅಧ್ಯಕ್ಷತೆ ವಹಿಸಿದ್ದರು.ತಾಲೂಕಾ ಬೋವಿ ಸಮಾಜದ ಅಧ್ಯಕ್ಷ ದಯಾನಂದ ಕಳಸಾಪುರ, ದಲಿತ ಮುಖಂಡ ಚಿದಾನಂದ ಹರಿಜನ, ಪ.ಪಂ ಮುಖ್ಯಾಧಿಕಾರಿ ಸಂತೋಷ ಹಾಲಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಸಹಾಯಕ ಕೃಷಿ ನಿರ್ದೇಶಕ ಕೆ.ಎನ್ ಮಹಾರೆಡ್ಡಿ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿದೇಶಕ ಕೃಷ್ಣ ಕುಳ್ಳೂರ, ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆ ಅಧಿಕಾರಿ ರಾಜೇಶ್ವರಿ ಕದಂ, ರೂಪಾ ಅಂಗಡಿ, ಎಸ್.ಎಸ್. ಪಾಟೀಲ ಮುಂತಾದವರಿದ್ದರು. ಪಿ. ನಾಗೇಂದ್ರ ಉಪನ್ಯಾಸ ನೀಡಿದರು. ಮಲ್ಲಿಕಾರ್ಜುನ ಬಡಿಗೇರ ನಿರೂಪಿಸಿದರು.
ಇದೇ ಸಂದರ್ಭ ಜವಾಹರ ನವೋದಯ ಶಾಲೆಗೆ ಆಯ್ಕೆಯಾದ ತಾಲೂಕಿನ ಮಕ್ಕಳಿಗೆ ಹುಲಿಗೆಮ್ಮ ದೇವಿ ಶಿಕ್ಷಣ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ಬೋವಿ ಇದ್ದರು.