ಜಿಲ್ಲಾಧಿಕಾರಿ ಕಚೇ್ರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಆಚರಣೆಯಲ್ಲಿಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೆರೆ ಕಟ್ಟೆ ನಿರ್ಮಿಸಿ ರೈತಾಪಿ ಸಮುದಾಯಕ್ಕೆ ಸಿದ್ದರಾಮೇಶ್ವರರು ಆಸರೆಯಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಆಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಕಾಯಕದ ಮೂಲಕ ಕೈಲಾಸ ಕಂಡವರು ಎಂದರು. ಭಕ್ತಿ ಹಾಗೂ ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಿದ್ಧರಾಮೇಶ್ವರರು ಕೈಗೊಂಡರು. ವಚನಗಳ ಜತೆಗೆ ಕಾಯಕ ಜೀವಿಗಳಾಗಿದ್ದರು. ಬಸವಣ್ಣ, ಅಲ್ಲಮಪ್ರಭು ಅವರ ಅನುಭವ ಮಂಟಪದಲ್ಲಿ ಸಿದ್ದರಾಮೇಶ್ವರರು ಹಿರಿಯ ಶರಣರಾಗಿ, ಕಾಯಕಕ್ಕೆ ಮಹತ್ವ ನೀಡಿ, ಕೆರೆ-ಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತರ ಬದುಕು ಹಸನಾಗಲು ಶ್ರಮಿಸಿದರು. ವಚನಗಳ ಮೂಲಕ ಜನರ ಆಡು ಮಾತಿನಲ್ಲಿ, ಜನರ ಮನಸ್ಸಿಗೆ ನಾಟುವ ರೀತಿಯಲ್ಲಿ ಅಂದಿನ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಮೂಢನಂಬಿಕೆ, ಅಂಧಕಾರ ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ. ಶರಣರು ಕೊಟ್ಟಂತಹ ಮಾರ್ಗರ್ಶನ ಹಾಗೂ ವಚನಗಳು ಇಂದಿನ ಬದುಕಿಗೆ ತುಂಬಾ ಅರ್ಥಪೂರ್ಣವಾಗಿವೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಮಹನೀಯರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರೆಲ್ಲ ಜಾತಿ ಮೀರಿದ, ನಿಜವಾದ ಜಾತ್ಯತೀತರು ಎಂದು ತಿಳಿಸಿದ ಅವರು, ಶರಣರು ಕಾಯಕದ ಜತೆಗೆ ಸಾಹಿತ್ಯ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ದಾಸೋಹ ಪರಂಪರೆ ಕಟ್ಟಿಕೊಟ್ಟವರು ಬಸವಾದಿ ಶಿವಶರಣರು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡಿ, ಇಡೀ ಮಾನವ ಕುಲಕ್ಕೆ ಉಪಯುಕ್ತ ಚಿಂತನೆಗಳನ್ನು, ಸದ್ಭಾವನೆಗಳನ್ನು ಹಾಗೂ ಸತ್ ಕ್ರಿಯೆಗಳನ್ನು ನೀಡಿದವರು ಸಿದ್ದರಾಮೇಶ್ವರರು. ಸಿದ್ಧರಾಮೇಶ್ವರರ ಸ್ಮರಣೆ ಎಂದರೆ ನಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ಸಂಪತ್ತು ಹಾಗೂ ಮೌಲ್ಯಗಳನ್ನು ಆರಾಧಿಸಿಕೊಂಡಂತೆ. ಸಿದ್ದರಾಮೇಶ್ವರರ ಪರಿಕಲ್ಪನೆಗಳು ಹಾಗೂ ಚಿಂತನೆಗಳು ಬಹು ವಿಶೇಷದಿಂದ ಕೂಡಿವೆ ಎಂದು ಹೇಳಿದರು. ಮಾನವೀಯತೆಯೇ ಶ್ರೇಷ್ಠ ಧರ್ಮ, ಶ್ರಮವೇ ನಿಜವಾದ ಭಕ್ತಿ ಎಂದು ಸಾರಿದ ಮಹಾನುಭಾವ ಸಿದ್ಧರಾಮರು, ಕೇವಲ ವಚನಗಳನ್ನು ಬರೆಯಲಿಲ್ಲ, ವಚನಗಳಂತೆ ಬದುಕಿದವರು. ಸಿದ್ದರಾಮರು ನಿಜ ಶರಣರು. ಸಮಾಜವನ್ನು ಬದಲಿಸಲು ಪ್ರಯತ್ನಿಸಿದವರು. ಧರ್ಮವನ್ನು ಮಾನವೀಯ ನೆಲೆಯಲ್ಲಿ ಕಟ್ಟಿದವರು ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಸಿದ್ಧರಾಮೇಶ್ವರರು ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ ಶರಣರು ಎಂದು ಹೇಳಿದರು.ಲೋಕೋಪಯೋಗಿ, ಜನಹಿತ ಕಾರ್ಯಗಳಿಂದ ಎಲ್ಲರ ಬದುಕು ಬೆಳೆಸಿದ ಕಾಯಕಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಎಚ್.ಲಕ್ಷ್ಮಣ್, ಖಜಾಂಚಿ ಇ.ಮಂಜುನಾಥ್, ಮುಖಂಡರಾದ ಪರಮೇಶ್ವರಪ್ಪ, ತುಳಸಿ ರಮೇಶ್, ವೀರೇಶ್, ಗೌನಹಳ್ಳಿ ಗೋವಿಂದಪ್ಪ, ಗೀತಾ ಗೋವಿಂದರಾಜ್, ದೇವರಾಜ್, ಹನುಮಂತಪ್ಪ ಇದ್ದರು.