ಸಿಎಂ ಸಿದ್ದರಾಮಯ್ಯ ಅವರು 2023ರ ಚುನಾವಣೆಯಲ್ಲಿ ಘೋಷಿಸಿದಂತೆ ಅಧಿಕಾರಕ್ಕೆ ಬಂದ 6 ತಿಂಗಳೊಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಎಲ್ಲರಿಗೂ ದೊರೆಯುವಂತೆ ಮಾಡಿ ರಾಜ್ಯದ ಜನತೆಯ ಜನಜೀವನ ಸುಧಾರಣೆಗೆ ಕಾರಣೀಕರ್ತರಾಗಿದ್ದಾರೆ ಎಂದು ಮುಖಂಡರು ಶ್ಲಾಘಿಸಿದರು.

ಮುಂಡರಗಿ: ಬಡ ಕುಟುಂಬದಲ್ಲಿ ಜನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಪರಿಶ್ರಮ, ಹೋರಾಟದಿಂದ ರಾಜಕೀಯದಲ್ಲಿ ಮೇಲೆ ಬಂದವರು. ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಅಭಿವೃದ್ಧಿಗಾಗಿ ಸದಾ ಕಾರ್ಯನಿರ್ವಹಿಸುತ್ತ ಅವರನ್ನು ಮೇಲೆತ್ತುವ ಕಾರ್ಯ ಮಾಡುತ್ತ ಬಂದಿದ್ದಾರೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.

ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು 2792 ದಿನ ಅಧಿಕಾರ ಪೂರೈಸಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆ ಮುರಿದ ಹಿನ್ನೆಲೆಯಲ್ಲಿ ಮುಂಡರಗಿ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ರುದ್ರಾಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

16 ಬಾರಿ ಬಜೆಟ್ ಮಂಡಿಸುತ್ತ ಬಂದಿದ್ದರೂ ಅವರು ಪ್ರತಿಯೊಂದು ಬಜೆಟ್‌ನಲ್ಲಿಯೂ ಬಡವರ ಬಗ್ಗೆ ಕಾಳಜಿ ಪೂರ್ವಕ ಯೋಜನೆ ಜಾರಿಗೊಳಿಸುತ್ತ ಬಂದಿದ್ದಾರೆ. 2013ರಿಂದ 2018ರ ವರೆಗೆ ಶಾದಿಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಅನೇಕ ಭಾಗ್ಯಗಳನ್ನು ನೀಡಿದರು. ಅಲ್ಲದೇ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಪ್ರಾಥಮಿಕದಿಂದ ಪದವಿ ಶಿಕ್ಷಣದವರೆಗೆ ಯಾವುದೇ ರೀತಿಯ ಶುಲ್ಕವಿಲ್ಲದೇ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರು. ಅನ್ನಭಾಗ್ಯದ ಮೂಲಕ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ವಿತರಿಸಿ ಹಸಿವು ಮುಕ್ತ ರಾಜ್ಯವನ್ನಾಗಿಸಿದರು. 2023ರ ಚುನಾವಣೆಯಲ್ಲಿ ಘೋಷಿಸಿದಂತೆ ಅಧಿಕಾರಕ್ಕೆ ಬಂದ 6 ತಿಂಗಳೊಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಎಲ್ಲರಿಗೂ ದೊರೆಯುವಂತೆ ಮಾಡಿ ರಾಜ್ಯದ ಜನತೆಯ ಜನಜೀವನ ಸುಧಾರಣೆಗೆ ಕಾರಣೀಕರ್ತರಾಗಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮಚಂದ್ರ ಕಲಾಲ್, ಚಂದ್ರಹಾಸ ಉಳ್ಳಾಗಡ್ಡಿ, ಡಾ. ಬಿ.ಎಸ್. ಮೇಟಿ, ನಬೀಸಾಬ್ ಕೆಲೂರ, ಡಿ.ಎಂ. ಕಾತರಕಿ ಮಾತನಾಡಿ, 2013ರಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. 2023ರಲ್ಲಿ ಹೈದರಾಬಾದ್ ಕರ್ನಾಟಕ ಮಂಡಳಿ ರಚನೆ, ಎಸ್ಸಿ ಒಳಮೀಸಲಾತಿ, ಹಿಂದುಳಿದವರ ಕಲ್ಯಾಣಕ್ಕೆ ಒತ್ತು, ಎಸ್ಸಿಪಿ, ಟಿಎಸ್ಪಿ ಕಾಯ್ದೆ, ದ್ವೇಷ ಭಾಷಣಕ್ಕೆ ಬ್ರೇಕ್, ಜಾತಿ ಗಣತಿ, ಸಾಮಾಜಿಕ ಬಹಿಷ್ಕಾರ ತಡೆ ಸೇರಿದಂತೆ ದೇವರಾಜ ಅರಸರ ಹಾದಿಯಲ್ಲಿ ನಡೆದು ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದಲ್ಲಿ ಡಾ. ಗೋಣೇಶ, ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ರೆಹೆಮಾನಸಾಬ್ ಮಲ್ಲನಕೇರಿ, ಧ್ರುವಕುಮಾರ ಹೊಸಮನಿ, ಮುದಿಯಪ್ಪ ಕುಂಬಾರ, ಫಕ್ಕೀರಪ್ಪ ಬಳ್ಳಾರಿ, ವೀರೇಶ ಹಡಗಲಿ, ದಶರತಪ್ಪ ಕುರಿ, ರಾಘವೇಂದ್ರ ಕುರಿ, ಯಲ್ಲಪ್ಪ ಹೊಂಬಳಗಟ್ಟಿ, ಮುತ್ತು ಬಳ್ಳಾರಿ, ಅಡಿವೆಪ್ಪ ಛಲವಾದಿ, ರಾಮು ಭಜಂತ್ರಿ, ರಾಘು ಕುರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.